ಮುಂಬಯಿ: ಐಪಿಎಲ್ 2023ನೇ ಆವೃತ್ತಿಯ ಚಾಂಪಿಯನ್ ತಂಡ ಸಿಎಸ್ಕೆಯ ನಾಯಕ ಮಹೇಂದ್ರ ಸಿಂಗ್ ಧೋನಿಗೆ (MS Dhoni) ಎಡಗಾಲಿನ ಮಂಡಿ ನೋವು ಮತ್ತೆ ಬರದು ಎಂದು ಮುಂಬಯಿಯ ಪರಿಣತ ವೈದ್ಯರು ಭರವಸೆ ವ್ಯಕ್ತಪಡಿಸಿದ್ದಾರೆ. ಗುರುವಾರ (ಜೂನ್ 1ರಂದು) ಧೋನಿಯ ಎಡಗಾಲಿನ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿರುವ ವೈದ್ಯರ ತಂಡ ಈ ರೀತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಫಿಟ್ ಆಗಿ ಮುಂದಿನ ಐಪಿಎಲ್ ವೇಳೆ ಅವರು ಸಿಎಸ್ಕೆ ತಂಡದಲ್ಲಿ ಆಡಬಹುದು ಕೂಡ ಎಂದು ಹೇಳಿದ್ದಾರೆ.
ಮೊಣಕಾಲಿನ ನೋವಿನಿಂದಲೇ ಧೋನಿ ಐಪಿಎಲ್ 2023ರಲ್ಲಿ ಆಡಿದ್ದರು. ಪಂದ್ಯಾವಳಿಯುದ್ದಕ್ಕೂ ಅವರು ಮೊಣಕಾಲಿನ ಕ್ಯಾಪ್ ಧರಿಸಿಯೇ ಇರಬೇಕಅಗಿತ್ತು. ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ತನ್ನ ತಂಡ ಕೊನೇ ಲೀಗ್ ಪಂದ್ಯದ ಬಳಿಕ ಪ್ರೇಕ್ಷಕರಿಗೆ ಧನ್ಯವಾದ ಹೇಳುವಾಗ 41 ವರ್ಷದ ಧೋನಿ ಎಡ ಮೊಣಕಾಲಿಗೆ ಐಸ್ ಕಟ್ಟಿಕೊಂಡು ಓಡಾಡಿದ್ದರು.
ಐಪಿಎಲ್ ಫೈನಲ್ ಪಂದ್ಯ ಮುಗಿದು ಟ್ರೋಫಿ ಮುಡಿಗೇರಿಸಿಕೊಂಡ 48 ಗಂಟೆಗಳಿಗಿಂತಲೂ ಕಡಿಮೆ ಅವಧಿಯಲ್ಲಿ, ಸಿಎಸ್ಕೆ ನಾಯಕ ತಮ್ಮ ಮೊಣಕಾಲಿನ ತೊಂದರೆ ನಿವಾರಣೆಗೆ ತಜ್ಞರನ್ನು ಸಂಪರ್ಕಿಸಲು ಮುಂಬಯಿಗೆ ಹೋಗಿದ್ದರು. ಅಲ್ಲಿ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.
ಕ್ರಿಕ್ಬಜ್ ಮಾಡಿರುವ ವರದಿಯ ಪ್ರಕಾರ, ಧೋನಿ ಗುರುವಾರ (ಜೂನ್ 1) ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಇನ್ನೂ ಒಂದೆರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಯಲಿದ್ದು, ಬಳಿಕ ಡಿಸ್ಚಾರ್ಜ್ ಆಗಲಿದ್ದಾರೆ ಎಂಬುದಾಗಿ ವರದಿ ಮಾಡಿದೆ.
ಶಸ್ತ್ರಚಿಕಿತ್ಸೆಯ ಬಳಿಕ ಧೋನಿಯ ಜತೆ ನಾನು ಮಾತನಾಡಿದ್ದೇನೆ. ಶಸ್ತ್ರಚಿಕಿತ್ಸೆ ಯಾವ ಮಾದರಿಯದ್ದು ಎಂಬುದನ್ನು ನಾನು ವಿವರಿಸಲು ಸಾಧ್ಯವಿಲ್ಲ. ಆದರೆ ಇದು ಕೀ-ಹೋಲ್ ಸರ್ಜರಿ ಎಂಬ ಮಾಹಿತಿ ಇದೆ. ನಮ್ಮಜತೆ ಅವರು ಚೆನ್ನಾಗಿ ಮಾತನಾಡಿದ್ದಾರೆ ಎಂಬುದಾಗಿ ಎಂದು ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್ ಕ್ರಿಕ್ಬಜ್ಗೆ ಹೇಳಿದ್ದಾರೆ.
ಮುಂಬಯಿಗೆ ಬಂದಿಳಿದ ನಂತರ ಧೋನಿ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಕ್ರೀಡಾ ಮೂಳೆಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ ಸ್ಪೋರ್ಟ್ಸ್ ಮೆಡಿಸಿನ್ ನಿರ್ದೇಶಕ ಡಾ. ದಿನ್ಶಾ ಪರ್ಡಿವಾಲಾ ಅವರನ್ನು ಸಂಪರ್ಕಿಸಿದ್ದರು ಎಂದು ವರದಿಯಾಗಿದೆ. ಕಳೆದ ಡಿಸೆಂಬರ್ನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದ ನಂತರ ಅನೇಕ ಗಾಯಗಳಿಗೆ ಒಳಗಾದ ಭಾರತದ ವಿಕೆಟ್ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಅವರಿಗೆ ಡಾ.ಪರ್ಡಿವಾಲಾ ಅವರೇ ಚಿಕಿತ್ಸೆ ನೀಡುತ್ತಿದ್ದಾರೆ.
ಇದನ್ನೂ ಓದಿ MS Dhoni : ಎಂ.ಎಸ್.ಧೋನಿ ಭಗವದ್ಗೀತೆಯೊಂದಿಗೆ ಕಾಣಿಸಿಕೊಂಡ ಫೋಟೋ ವೈರಲ್
ಐಪಿಎಲ್ 2023 ರ ಗೆಲುವಿನ ನಂತರ ಮಾತನಾಡಿದ್ದ ಎಂಎಸ್ ಧೋನಿ, ಇನ್ನೂ ಒಂದು ಐಪಿಎಲ್ ಋತುವಿನಲ್ಲಿ ಆಡುವುದು ಸುಲಭವಲ್ಲ. ಆದರೂ ಅಭಿಮಾನಿಗಳಿಗೆ ಉಡುಗೊರೆ ನೀಡಲು ಗರಿಷ್ಠ ಅತ್ಯುತ್ತಮ ಪ್ರಯತ್ನ ಮಾಡುವುದಾಗಿ ಹೇಳಿದರು.
ಸಾಂದರ್ಭಿಕವಾಗಿ ನೋಡಿದರೆ ನಿವೃತ್ತಿ ಘೋಷಿಸಲು ಇದು ನನಗೆ ಸೂಕ್ತ ಸಮಯ. ಆದರೆ ನನಗೆ ಅಭಿಮಾನಿಗಳು ತೋರಿದ ಪ್ರೀತಿ ಮತ್ತು ಅಭಿಮಾನವನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಮುಂದಿನ ಋತುವಿವಾಗಿ ಇನ್ನೂ 9 ತಿಂಗಳು ಫಿಟ್ನೆಸ್ ಕಾಪಾಡಿಕೊಳ್ಳುವುದು ಸುಲಭವಲ್ಲ. ಮುಂದಿನ ಋತುವಿನಲ್ಲಿ ಆಡುವುದು ದೇಹ ಸ್ಥಿತಿ ಮೇಲೆ ಬಹಳಷ್ಟು ದೇಹದ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಅಭಿಮಾನಿಗಳು ತೋರುವ ಪ್ರೀತಿಗಾಗಿ ಇನ್ನೊಂದು ಋತುವಿನಲ್ಲಿ ಉಳಿಯುವು ಸೂಕ್ತ ಎಂದು ಅನಿಸುತ್ತದೆ ಎಂಬುದಾಗಿ ಧೋನಿ ಚಾಂಪಿಯನ್ಪಟ್ಟಕ್ಕೇರಿದ ಬಳಿಕ ಹೇಳಿದ್ದರು,