ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದ (Ram Mandir) ಲೋಕಾರ್ಪಣೆಗೆ ಇನ್ನು ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಉಳಿದಿವೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ(Ayodhya Ram Mandir) ಮಾಡಲಿದ್ದಾರೆ. ರಾಮಮಂದಿರ ಉದ್ಘಾಟನೆಗೆ ಈಗಾಗಲೇ ಭಾರತ ತಂಡದ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಮತ್ತು ಮಹೇಂದ್ರ ಸಿಂಗ್ ಧೋನಿ ಅವರನ್ನು ಆಹ್ವಾನ ಮಾಡಲಾಗಿದೆ. ಇದೀಗ ಟೀಮ್ ಇಂಡಿಯಾದ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರು ಬಿಡಿಸಿದ ಶ್ರೀ ರಾಮನ ಮತ್ತು ಆಂಜನೇಯನ ಚಿತ್ರದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕುಲ್ದೀಪ್ ಸ್ವತಃ ತಾವೇ ಕೈಯಾರೆ ರಾಮ ಮತ್ತು ಹನುಮನ ಚಿತ್ರಗಳನ್ನು ರಚಿಸಿದ್ದಾರೆ. ಕುಲದೀಪ್ ಯಾದವ್ ಬಿಡಿಸಿರುವ ಈ ಚಿತ್ರವನ್ನು ನೆಟ್ಟಿಗರು ವೈರಲ್ ಮಾಡಿದ್ದಾರೆ. ಆದರೆ ಈ ಚಿತ್ರವನ್ನು ಕುಲ್ದೀಪ್ ಯಾವಾಗ ಬಿಡಿಸಿದ್ದು ಎನ್ನುವುದು ಖಚಿತವಾಗಿಲ್ಲ. ಅವರನ್ನು ಈ ಫೋಟೊದಲ್ಲಿ ನೋಡುವಾಗ ಕೆಲ ವರ್ಷಗಳ ಹಿಂದೆ ಈ ಚಿತ್ರ ಬಿಡಿಸಿದಂತೆ ತೋರುತ್ತಿದೆ. ಸದ್ಯ ಕುಲ್ದೀಪ್ ಅಫಘಾನಿಸ್ತಾನ ವಿರುದ್ಧದ ಟಿ20 ಸರಣಿಯ ಭಾಗವಾಗಿದ್ದು ಬೆಂಗಳೂರಿನಲ್ಲಿದ್ದಾರೆ. ಮೂರನೇ ಟಿ20 ನಾಳೆ ಚಿನ್ನಸ್ವಾಮಿಯಲ್ಲಿ ನಡೆಯಲಿದೆ. ಮೊದಲ ಎರಡು ಪಂದ್ಯಗಳಲ್ಲಿ ಆಡದ ಕುಲ್ದೀಪ್ ಅಂತಿಮ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ.
Kuldeep Yadav is an artist on an off the field.😍 pic.twitter.com/GyQU7jIfrH
— rae (@ChillamChilli) January 15, 2024
ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 6,000ಕ್ಕೂ ಹೆಚ್ಚು ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕ್ರಿಕೆಟಿಗರಾದ ಧೋನಿ ಮತ್ತು ಸಚಿನ್ ಕೂಡ ಪಾಳ್ಗೊಳ್ಳುವ ನಿರೀಕ್ಷೆ ಇದೆ.
ಇದನ್ನೂ ಓದಿ Ram Mandir: ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಕ್ರಿಕೆಟ್ ದಿಗ್ಗಜ ಸಚಿನ್!
ರಾಮಮಂದಿರ ಲೋಕಾರ್ಪಣೆಯ ದಿನ ಉತ್ತರ ಪ್ರದೇಶ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದರ ಜತೆಗೆ ಹೆಚ್ಚಿನ ನಿಗಾ ಇರಿಸಲು, ಪ್ರತಿಯೊಂದು ಚಲನವಲನಗಳನ್ನು ಗಮನಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ರಾಮಮಂದಿರ ಉದ್ಘಾಟನೆ ದಿನ ಪ್ರಾಯೋಗಿಕವಾಗಿ ಇದನ್ನು ಬಳಸಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಇದೇ ತಂತ್ರಜ್ಞಾನ ಅಳವಡಿಸಿಕೊಳ್ಳುವ ಚಿಂತನೆ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಿಶೇಷ ರಾಮ ಹಲ್ವಾ ವಿತರಣೆ
ರಾಮಮಂದಿರ ಉದ್ಘಾಟನೆ ದಿನ ಗಣ್ಯರಿಗೂ ಸೇರಿ ಲಕ್ಷಾಂತರ ಜನರಿಗೆ ವಿಶೇಷ ರಾಮ ಹಲ್ವಾ ವಿತರಿಸಲಾಗುತ್ತದೆ. ವಿಷ್ಣು ಮನೋಹರ್ ಅವರು ರಾಮಮಂದಿರ ಉದ್ಘಾಟನೆಯ ದಿನ ಸುಮಾರು 7 ಸಾವಿರ ಕೆ.ಜಿ ರಾಮ ಹಲ್ವಾ ತಯಾರಿಸಲಿದ್ದಾರೆ. ಇದಕ್ಕಾಗಿ ಅವರು 12 ಸಾವಿರ ಲೀಟರ್ ನೀರಿನ ಸಾಮರ್ಥ್ಯದ ಬೃಹತ್ ಕಡಾಯಿಯೊಂದನ್ನು ಕೂಡ ತಯಾರಿಸಿದ್ದಾರೆ. “900 ಕೆಜಿ ರವೆ, 1 ಸಾವಿರ ಕೆಜಿ ತುಪ್ಪ, ಸಾವಿರ ಕೆಜಿ ಸಕ್ಕರೆ, 2 ಸಾವಿರ ಲೀಟರ್ ಹಾಲು, 2,500 ಲೀಟರ್ ನೀರು, 300 ಕೆಜಿ ಡ್ರೈ ಫ್ರೂಟ್ಸ್, 75 ಕೆಜಿ ಏಲಕ್ಕಿ ಪೌಡರ್ ಬಳಸಿಕೊಂಡು ವಿಶೇಷ ರಾಮ ಹಲ್ವಾ ತಯಾರಿಸಲಾಗುವುದು” ಎಂದು ವಿಷ್ಣು ಮನೋಹರ್ ತಿಳಿಸಿದ್ದಾರೆ.