ಹೈದರಾಬಾದ್: ಗೆಲುವಿಗಾಗಿ ಹಂಬಲಿಸಿಕೊಂಡೇ ಪ್ರತಿಯೊಬ್ಬ ಕ್ರಿಕೆಟರ್ ಮೈದಾನಕ್ಕೆ ಇಳಿಯುತ್ತಾನೆ. ಬ್ಯಾಟ್ಸ್ಮನ್ ಆಗಿದ್ದರೆ ಬ್ಯಾಟಿಂಗ್ ಮೂಲಕ ಬೌಲಿಂಗ್ ಆದರೆ ಮಾರಕ ದಾಳಿಯ ಮೂಲಕ ತಂಡವನ್ನು ಗೆಲ್ಲಿಸುವ ಪ್ರಯತ್ನ ಮಾಡುತ್ತಾರೆ. ಆದರೆ, ನಿರ್ದಿಷ್ಟ ಆಟಗಾರನೊಬ್ಬನ ಪ್ರದರ್ಶನದಿಂದಾಗಿ ತಂಡವೊಂದು ಸೋಲು ಕಾಣುವ ಪ್ರಸಂಗಗಳೂ ಸಾಕಷ್ಟು ಇರುತ್ತವೆ. ಅಂಥದ್ದೇ ಒಂದು ಕಳಪೆ ದಾಖಲೆಗೆ ಭುವನೇಶ್ವರ್ ಕುಮಾರ್ ಗುರಿಯಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಭುವನೇಶ್ವರ್ ಕುಮಾರ್ ತಮ್ಮ ತಂಡದ ಚೇಸಿಂಗ್ ಸಮಯದಲ್ಲಿ ಬ್ಯಾಟಿಂಗ್ ಮಾಡಲು ಹೊರನಡೆದ ಯಾವುದೇ ಪಂದ್ಯವನ್ನು ಗೆದ್ದಿಲ್ಲ. ವೃತ್ತಿಯಲ್ಲಿ ವೇಗದ ಬೌಲರ್ ಆಗಿರುವ ಅವರು ಚೇಸಿಂಗ್ ಮುಗಿಸಲು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಹೊರನಡೆದ 34 ಸಂದರ್ಭದಲ್ಲಿ ತಂಡ ಸೋತಿದೆ.
ಕೋಲ್ಕೊತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಕೊನೇ ಹಂತದಲ್ಲಿ ಬ್ಯಾಟಿಂಗ್ ಮಾಡಲು ಹೋಗಿದ್ದರು. ಅವರು ಅಜೇಯ ಐದು ರನ್ ಗಳಿಸಿ ಬಂದಿದ್ದರೂ ತಂಡವನ್ನು ಗೆಲ್ಲಿಸಲು ಅವರಿಗೆ ಸಾಧ್ಯವಾಗಿಲ್ಲ. ಕೊನೇ ಓವರ್ಲ್ಲಿ ಎಸ್ಆರ್ಎಚ್ ತಂಡಕ್ಕೆ 10 ರನ್ ಬೇಕಾಗಿತ್ತು. ಅಂತೆಯೇ ಕೊನೇ ಎಸೆತಕ್ಕೆ ಸಿಕ್ಸರ್ ಬೇಕಾಗಿತ್ತು. ಆದರೆ, ಭುವನೇಶ್ವರ್ ಕುಮಾರ್ ಯಶಸ್ಸು ಸಾಧಿಸಲಿಲ್ಲ.
ಪಂದ್ಯದಲ್ಲಿ ಏನಾಯಿತು?
ನಾಯಕ ನಿತೀಶ್ ರಾಣಾ (42) ಹಾಗೂ ಯುವ ಬ್ಯಾಟರ್ ರಿಂಕು ಸಿಂಗ್ (46) ಅವರ ಸಮಯೋಚಿತ ಬ್ಯಾಟಿಂಗ್ ಹಾಗೂ ಬೌಲರ್ಗಳ ಹೋರಾಟದ ನೆರವು ಪಡೆದ ಕೋಲ್ಕೊತಾ ನೈಟ್ ರೈಡರ್ಸ್ ತಂಡ ಐಪಿಎಲ್ 16ನೇ ಆವೃತ್ತಿಯ 47ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 5 ರನ್ಗಳ ರೋಚಕ ಜಯ ಪಡೆಯಿತು. ಈ ಮೂಲಕ ಮತ್ತೆ ಸೋಲಿನ ಸುಳಿಗೆ ಸಿಲುಕಿತು. ಹಿಂದಿನ ಪಂದ್ಯದಲ್ಲಿ ಎಸ್ಆರ್ಎಚ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯ ದಾಖಲಿಸಿದ್ದ ಎಸ್ಆರ್ಎಚ್ ಗೆಲುವಿಗಿದ್ದ ಮತ್ತೊಂದು ಅವಕಾಶವನ್ನು ನಷ್ಟ ಮಾಡಿಕೊಂಡಿತು.
ಇಲ್ಲಿನ ರಾಜೀವ್ಗಾಂಧಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 171 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಎಸ್ಆರ್ಎಚ್ ತಂಡ ತನ್ನ ಪಾಲಿನ 20 ಓವರ್ಗಳು ಮುಕ್ತಾಯಗೊಂಡಾಗ 8 ವಿಕೆಟ್ ನಷ್ಟಕ್ಕೆ 166 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
ಇದನ್ನೂ ಓದಿ: Virat Kohli : ವಿರಾಟ್ ಕೊಹ್ಲಿ ಎಂದು ಕೂಗಿದ ಅಭಿಮಾನಿಯನ್ನು ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿದ ಗಂಭೀರ್
ಗುರಿ ಬೆನ್ನಟ್ಟಲು ಆರಂಭಿಸಿದ ಹೈದರಾಬಾದ್ ತಂಡ ಮತ್ತೆ ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡಿತು. ನಾಯಕ ಏಡೆನ್ ಮಾರ್ಕ್ರಮ್ (42) ಹಾಗೂ ಹೆನ್ರಿಚ್ ಕ್ಲಾಸೆನ್ (36) ಹೊರತುಪಡಿಸಿ ಮಿಕ್ಕೆಲ್ಲರೂ ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡರು. ಕೊನೇ ಓವರ್ನಲ್ಲಿ ಎಸ್ಆರ್ಎಚ್ ತಂಡದ ಗೆಲುವಿಗೆ 10 ರನ್ ಬೇಕಾಗಿತ್ತು. ಆದರೆ, ರನ್ ಬಾರಿಸಲೂ ತಂಡಕ್ಕೆ ಸಾಧ್ಯವಾಗಲಿಲ್ಲ.