Site icon Vistara News

ಭಾರತಕ್ಕೆ ಮತ್ತೊಂದು ಚಿನ್ನ; ಸ್ಕ್ವಾಷ್‌ ಮಿಕ್ಸೆಡ್​ ಡಬಲ್ಸ್​ನಲ್ಲಿ ಸಾಧನೆ ತೋರಿದ ದೀಪಿಕಾ-ಹರಿಂದರ್

Dipika Pallikal, Harinder Pal Singh

ಹ್ಯಾಂಗ್ಝೌ: ಇಲ್ಲಿ ನಡೆಯುತ್ತಿರುವ 19ನೇ ಏಷ್ಯನ್​ ಗೇಮ್ಸ್​ನ(Asian Games 2023) 12 ದಿನವಾದ ಗುರುವಾರ ಭಾರತ ಎರಡು ಚಿನ್ನದ ಪದಕ ಗೆದ್ದ ಸಾಧನೆ ಮಾಡಿದೆ. ಸ್ಕ್ವಾಷ್‌ ಮಿಕ್ಸೆಡ್​ ಡಬಲ್ಸ್​ನಲ್ಲಿ ದೀಪಿಕಾ ಪಳ್ಳಿಕಲ್‌​ ಮತ್ತು ಹರಿಂದರ್ ಪಾಲ್ ಸಿಂಗ್ ಜೋಡಿ ಫೈನಲ್​ನಲ್ಲಿ ಮಲೇಷ್ಯಾ ಜೋಡಿಯನ್ನು 2-0(11-10, 11-10) ಅಂತರದಿಂದ ಮಣಿಸಿ ಚಿನ್ನದ ಪದಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಭಾರತದ ಚಿನ್ನದ ಪದಕ ಸಂಖ್ಯೆ 20ಕ್ಕೆ ಏರಿದೆ.

ಭಾರತದ ಅನುಭವಿ ಜೋಡಿಯ ಮುಂದೆ ಮಲೇಷ್ಯಾದ ಐಫಾ ಬಿಂಟಿ ಅಜ್ಮಾನ್ ಮತ್ತು ಮೊಹಮ್ಮದ್ ಸಯಾಫಿಕ್ ಬಿನ್ ಮೊಹಮ್ಮದ್ ಜೋಡಿ ಸಂಪೂರ್ಣ ವಿಫಲಗೊಂಡಿತು. ಈ ಪಂದ್ಯ ಏಕಪಕ್ಷೀಯವಾಗಿ ಸಾಗಿತು. ಭಾರತ ಅಧಿಕಾರಯುತ ಗೆಲುವು ಸಾಧಿಸಿತು. ದಿನದ ಆರಂಭದಲ್ಲಿ ನಡೆದ ಮಹಿಳೆಯರ ಕಾಂಪೌಂಡ್ ಆರ್ಚರಿ ಸ್ಪರ್ಧೆಯಲ್ಲಿ ಭಾರತದ ಜ್ಯೋತಿ ವೆನ್ನಮ್, ಅದಿತಿ ಸ್ವಾಮಿ, ಪರ್ನೀತ್ ಕೌರ್ ಅವನ್ನೊಳಗೊಂಡ ತಂಡ ಚಿನ್ನದ ಪದಕ ಜಯಿಸಿದ್ದು. ಸದ್ಯ ಒಂದೇ ದಿನ ಎರಡು ಚಿನ್ನ ಗೆದ್ದ ಭಾರತಕ್ಕೆ ಗುರುವಾರ ಅದೃಷ್ಟದ ದಿನವಾಗಿದೆ.

ಜಿದ್ದಾಜಿದ್ದಿನ ಪಂದ್ಯ

ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ ಆರ್ಚರಿ ಫೈನಲ್​ನಲ್ಲಿ ಅಂತಿಮ ಮೂರು ಹೊಡೆತದಲ್ಲಿ ಭಾರತೀಯ ಸ್ಪರ್ಧಿಗಳು ಪರಿಪೂರ್ಣ ಹೊಡೆತಗಳಿಂದ 30 ಅಂಕ ಪಡೆದು ಎದುರಾಳಿ ಚೈನೀಸ್ ತೈಪೆಯನ್ನು ಹೊಡೆದುರುಳಿಸಿದರು. ಒಟ್ಟು 230 ಅಂಕ ಪಡೆದು ಚಿನ್ನದ ಪದಕ ತಮ್ಮದಾಗಿಸಿಕೊಂಡರು. 229 ಅಂಕ ಪಡೆದ ಚೈನೀಸ್ ತೈಪೆ ಬೆಳ್ಳಿಗೆ ತೃಪ್ತಿಪಟ್ಟಿತು.

ಇದನ್ನೂ ಓದಿ Asian Games 2023: ಬೆಳ್ಳಿ ಗೆದ್ದ ಟೋಕಿಯೊ ಸ್ಟಾರ್‌ ಲವ್ಲಿನಾ ಬೋರ್ಗಹೈನ್‌

ಶತಕದತ್ತ ಮುನ್ನುಗ್ಗುತ್ತಿರುವ ಭಾರತ

ಭಾರತ ಸದ್ಯ 20 ಚಿನ್ನ, 31 ಬೆಳ್ಳಿ, 32 ಕಂಚಿನ ಪದಕಗೊಂದಿಗೆ ಒಟ್ಟು 83 ಪದಕ ಗೆದ್ದು ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಕೆಲ ಸ್ಪರ್ಧೆಯಲ್ಲಿ ಭಾರತೀಯ ಕ್ರೀಡಾಪಟುಗಳು ಫೈನಲ್​ ತಲುಪಿದ್ದು ಶತಕದ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. 1951ರಿಂದ ಶುರುವಾದ ಏಷ್ಯಾಡ್‌ನಲ್ಲಿ ಭಾರತದ ಆವೃತ್ತಿಯೊಂದರಲ್ಲಿ ಗೆದ್ದ ಶ್ರೇಷ್ಠ ಸಾಧನೆಯಾಗಿದೆ. 2018ರಲ್ಲಿ ಪಡೆದಿದ್ದ 70 ಪದಕಗಳ ದಾಖಲೆ ಈ ಬಾರಿ ಪತನಗೊಂಡಿದೆ.

ಪಿ.ವಿ.ಸಿಂಧುಗೆ ಸೋಲು

ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಪಿ.ವಿ. ಸುಂಧು ಅವರ ಕಳಪೆ ಪ್ರದರ್ಶನ ಏಷ್ಯನ್ ಗೇಮ್ಸ್‌ನಲ್ಲಿಯೂ ಮುಂದುವರಿದಿದೆ. ಮಹಿಳಾ ಸಿಂಗಲ್ಸ್​ನ ಕ್ವಾಟರ್​ಫೈನಲ್​ನಲ್ಲಿ ಸೋಲು ಕಂಡು ನಿರಾಸೆ ಮೂಡಿಸಿದ್ದಾರೆ. ಪುರುಷರ ಕಬಡ್ಡಿ ತಂಡ ‘ಎ’ ಗುಂಪಿನ ಪಂದ್ಯದಲ್ಲಿ ಚೈನೀಸ್ ತೈಪೆ ವಿರುದ್ಧ 50-27 ಅಂಕದಿಂದ ಗೆದ್ದು ಮುಂದಿನ ಹಂತಕ್ಕೇರಿದೆ.

Exit mobile version