ನವ ದೆಹಲಿ: ಕಾರು ಅಪಘಾತದಲ್ಲಿ ಗಾಯಗೊಂಡಿರುವ ವಿಕೆಟ್ಕೀಪರ್ ಬ್ಯಾಟರ್ ರಿಷಭ್ ಪಂತ್ ಈ ಬಾರಿಯ ಐಪಿಎಲ್ಗೆ (IPL 2023) ಅಲಭ್ಯರಾಗಿದ್ದಾರೆ. ಅವರು ಎಷ್ಟು ಕಾಲ ಸುಧಾರಿಸಿಕೊಳ್ಳುವುದಕ್ಕೆ ತೆಗೆದುಕೊಳ್ಳುತ್ತಾರೆ ಎಂಬ ಬಗ್ಗೆಯೂ ಸ್ಪಷ್ಟ ಮಾಹಿತಿ ಇಲ್ಲ. ಕೆಲವರು ಇನ್ನೊಂದು ವರ್ಷ ಬೇಕಾಗಬಹುದು ಎಂದರೆ ಇನ್ನೂ ಕೆಲವರು ಎರಡು ವರ್ಷ ಎಂದು ಹೇಳುತ್ತಿದ್ದಾರೆ. ಆದರೆ, ಟೀಮ್ ಇಂಡಿಯಾವೇ ಆಗಲಿ, ಐಪಿಎಲ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡವೇ ಆಗಲಿ, ಪಂತ್ ಅಲಭ್ಯತೆಯ ಕೊರಗು ಎದುರಿಸುತ್ತಿದೆ. ಹಿರಿಯ ಆಟಗಾರರ ಮಾತಲ್ಲಿ ಅದು ಬಹಿರಂಗವಾಗುತ್ತಿದೆ. ಅಂತೆಯೇ ಐಪಿಎಲ್ ಆರಂಭದ ಹಿನ್ನೆಲೆಯಲ್ಲಿ ಮಾತನಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕ ಹಾಗೂ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಪಂತ್ ಅಲಭ್ಯತೆಯು ಡೆಲ್ಲಿ ಬಳಗದೊಳಗೆ ಎದ್ದು ಕಾಣುತ್ತಿದೆ ಎಂದು ಹೇಳಿದ್ದಾರೆ.
ರಿಷಭ್ ಪಂತ್ ಅವರನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ತಂಡವೂ ಅವರ ಸೇವೆಯನ್ನು ಕಳೆದುಕೊಳ್ಳುತ್ತಿದೆ ಎಂಬುದು ನನಗೆ ಖಾತರಿಯಿದೆ. ಅವರು ಯುವ ಆಟಗಾರನಾಗಿದ್ದು ತಮ್ಮ ವೃತ್ತಿ ಕ್ರಿಕೆಟ್ನಲ್ಲಿ ಸಾಧನೆ ಮಾಡಲು ಸಾಕಷ್ಟು ಸಮಯ ಹೊಂದಿದ್ದಾರೆ. ಅವರೊಬ್ಬ ವಿಶೇಷ ಕ್ರಿಕೆಟ್ ಪ್ರತಿಭೆ ಎಂಬುದನ್ನು ನಾನು ಪ್ರತಿ ಬಾರಿಯೂ ಹೇಳುತ್ತೇನೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಂಪ್ ಆರಂಭಕ್ಕೆ ಮೊದಲು ಅವರು ಹೇಳಿದರು.
ರಿಷಭ್ ಪಂತ್ ಆದಷ್ಟು ಬೇಗ ತಂಡಕ್ಕೆ ಮರಳಲಿ ಎಂದು ನಾನು ಬಯುಸುತ್ತೇನೆ. ಆದರೆ, ಅದಕ್ಕೆ ಎಷ್ಟು ಸಮಯ ಬೇಕಾದರೂ ತೆಗೆದುಕೊಳ್ಳಲಿ. ಅವರು ಸಂಪೂರ್ಣವಾಗಿ ಗುಣಮುಖರಾದ ಬಳಿಕವಷ್ಟೇ ತಂಡಕ್ಕೆ ಬರಬೇಕು. ಆತುರ ಆತುರವಾಗಿ ತಂಡಕ್ಕೆ ಮರಳುವ ಅಗತ್ಯವೇ ಇಲ್ಲ ಎಂದು ಹೇಳಿದ್ದಾರೆ.
ರಿಷಭ್ ಪಂತ್ ಕಳೆದ ವರ್ಷಾಂತ್ಯದಲ್ಲಿ ತಮ್ಮ ಕಾರಿನ ಮೂಲಕ ಡೆಲ್ಲಿಯಿಂದ ಡೆಹ್ರಾಡೂನ್ಗೆ ಪ್ರಯಾಣ ಮಾಡುತ್ತಿದ್ದಾಗ ಅಪಘಾತಕ್ಕೆ ಒಳಗಾಗಿದ್ದರು. ಅವರ ಕಾರು ಡಿವೈಡರ್ಗೆ ಗುದ್ದಿ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಭಸ್ಮವಾಗಿತ್ತು. ಘಟನೆಯಲ್ಲಿ ಸುಟ್ಟಗಾಯಗಳು ಹಾಗೂ ಮಂಡಿಯ ಮುರಿತಕ್ಕೆ ಒಳಗಾಗಿದ್ದರು. ಮೊದಲು ಡೆಹ್ರಾಡೂನ್ನಲ್ಲಿ ಚಿಕಿತ್ಸೆ ಪಡೆದಿದ್ದ ಅವರು ಬಳಿಕ ಮುಂಬಯಿಯ ಕೊಕಿಲಾ ಬೆನ್ ಆಸ್ಪತ್ತೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ರಿಷಭ್ ಪಂತ್ ಭೇಟಿಯಾದ ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್
ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರುವ ರಿಷಭ್ ಪಂತ್(Rishabh Pant) ಅವರನ್ನು ಟೀಮ್ ಇಂಡಿಯಾದ ಮಾಜಿ ಸ್ಟಾರ್ ಆಲ್ರೌಂಡರ್ ಯುವರಾಜ್ ಸಿಂಗ್(Yuvraj Singh) ಭೇಟಿಯಾಗಿದ್ದಾರೆ. ಉಭಯ ಆಟಗಾರರು ಭೇಟಿಯಾದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
“ಪಂತ್ ಅವರನ್ನು ಭೇಟಿಯಾದ ಫೋಟೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಯುವರಾಜ್ ಸಿಂಗ್ “ಚಾಂಪಿಯನ್ ಮತ್ತೆ ರೆಡಿಯಾಗುತ್ತಿದ್ದಾರೆ ” ಎಂದು ಬರೆದುಕೊಂಡಿದ್ದಾರೆ.
“ಮಗುವಿನ ಹೆಜ್ಜೆಗಳ ಮೇಲೆ! ಈ ಚಾಂಪಿಯನ್ ಮತ್ತೆ ಮರಳಲಿದ್ದಾರೆ. ಸುದೀರ್ಘ ಮಾತುಕತೆ ಮತ್ತು ಒಂದಿಷ್ಟು ನಗು. ಯಾವಾಗಲೂ ತಮಾಷೆ! ನಿಮಗೆ ಹೆಚ್ಚಿನ ಶಕ್ತಿ ಸಿಗಲಿ. ಆದಷ್ಟು ಬೇಗ ನೀವು ಟೀಮ್ ಇಂಡಿಯಾಕ್ಕೆ ಮರಳುವಂತಾಗಲಿ” ಎಂದು ಯುವಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ Rishabh Pant : ಸ್ವಿಮ್ಮಿಂಗ್ ಪೂಲ್ನಲ್ಲಿರುವ ಹೊಸ ಚಿತ್ರ ಪ್ರಕಟಿಸಿದ ರಿಷಭ್ ಪಂತ್
ಕೆಳ ದಿನಗಳ ಹಿಂದಷ್ಟೇ ಪಂತ್ ಅವರು ಸ್ವಿಮ್ಮಿಂಗ್ ಪೂಲ್ನಲ್ಲಿ ನಡೆದಾಡುವ ವಿಡಿಯೊವೊಂದನ್ನು ಹಂಚಿಕೊಂಡಿದ್ದರು. ಈ ಮೂಲಕ ತಾವು ಚೇತರಿಕೆ ಕಾಣುತ್ತಿರುವ ವಿಚಾರವನ್ನು ತಿಳಿಸಿದ್ದರು.