ನವ ದೆಹಲಿ: ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಬುಧವಾರ ನಡೆದ ಐಪಿಎಲ್ ಪಂದ್ಯವನ್ನು ಅತಿ ಹೆಚ್ಚು ಮಂದಿ ಜಿಯೊ ಸಿನಿಮಾದಲ್ಲಿ ವೀಕ್ಷಣೆ ಮಾಡಿದ್ದಾರೆ. ಈ ಪಂದ್ಯವೂ ಐಪಿಎಲ್ ಹಾಲಿ ಆವೃತ್ತಿಯ ರೋಚಕ ಹಣಾಹಣಿಯೂ ಆಗಿತ್ತು. ಅಂತೆಯೇ ಈ ಪಂದ್ಯವನ್ನು ಟಿವಿ ಹಾಗೂ ಜಿಯೊ ಸಿನಿಮಾದ ಮೂಲಕ ಕೋಟ್ಯಂತ ಮಂದಿ ವಿಕ್ಷಣೆ ಮಾಡಿದ್ದಾರೆ. ಏತನ್ಮಧ್ಯೆ, ಆನ್ಲೈನ್ ಲೈವ್ ಸ್ಟ್ರೀಮಿಂಗ್ ವೇದಿಕೆಯಾಗಿರುವ ಜಿಯೊ ಸಿನಿಮಾ ಈ ಪಂದ್ಯದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಅದರಲ್ಲೂ ಪಂದ್ಯದ ಕೊನೇ ಎಸೆತದ ವೇಳೆ ಒಟ್ಟು 2.2 ಕೋಟಿ ಮಂದಿ ಜಿಯೊ ಮೂಲಕ ಪಂದ್ಯವನ್ನು ವೀಕ್ಷಿಸಿದ್ದಾರೆ. ಅದಕ್ಕಿಂತ ದೊಡ್ಡ ಸಂಖ್ಯೆಯಲ್ಲಿ ಟಿವಿಯಲ್ಲೂ ಪಂದ್ಯಗಳನ್ನೂ ವೀಕ್ಷಿಸಿದ್ದಾರೆ.
ಪಂದ್ಯ ಅತ್ಯಂತ ರೋಚಕವಾಗಿ ನಡೆಯಿತು. ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ಹಳೆಯ ಬ್ಯಾಟಿಂಗ್ ವೈಭವವನ್ನು ತೋರಿಸಿದರು. ಅತ್ಯುತ್ತಮ ಫಿನಿಷರ್ ಎಂದು ಪರಿಗಣಿಸಲ್ಪಟ್ಟಿರುವ ಧೋನಿ ಕೊನೆಯ ಓವರ್ನಲ್ಲಿ ಸತತ ಎರಡು ಸಿಕ್ಸರ್ಗಳನ್ನು ಬಾರಿಸುವ ಮೂಲಕ ಪ್ರೇಕ್ಷಕರು ಉಸಿರು ಬಿಗಿ ಹಿಡಿಯುವಂತೆ ಮಾಡಿದರು. ರಾಜಸ್ಥಾನ ರಾಯಲ್ಸ್ ತಂಡದ ವೇಗದ ಬೌಲರ್ ಸಂದೀಪ್ ಶರ್ಮಾ ಕೊನೆಯ ಎಸೆತದಲ್ಲಿ ಕೇವಲ ಒಂದು ರನ್ ಬಿಟ್ಟುಕೊಟ್ಟರು. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಮೂರು ರನ್ಗಳಿಂದ ಸೋತಿತು.
ಅದಕ್ಕಿಂತ ಮೊದಲು ಮಹೇಂದ್ರ ಸಿಂಗ್ ಧೊನಿ 188ರ ಸ್ಟ್ರೈಕ್ ರೇಟ್ನಂತೆ 17 ಎಸೆತಗಳಲ್ಲಿ ಅಜೇಯ 32 ರನ್ ಬಾರಿಸಿದರು. ಟಾಟಾ ಐಪಿಎಲ್-2023ರ ಡಿಜಿಟಲ್ ಸ್ಟ್ರೀಮಿಂಗ್ ಪಾಲುದಾರ ಜಿಯೋ ಸಿನಿಮಾ ಕಳೆದ ವಾರಾಂತ್ಯದಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ. ಮೊದಲ ವಾರಾಂತ್ಯದಲ್ಲಿ ವೀಡಿಯೊ ವೀಕ್ಷಣೆಗಳ ಸಂಖ್ಯೆಯು ಹಿಂದಿನ ಋತುವಿನಲ್ಲಿ ವೀಡಿಯೊ ವೀಕ್ಷಣೆಗಳ ಸಂಖ್ಯೆಯನ್ನು ಮೀರಿಸಿದೆ. ಜಿಯೋ ಸಿನೆಮಾದಲ್ಲಿ ಇದುವರೆಗೆ ಒಟ್ಟಾರೆ 147 ಕೋಟಿಗೂ ಹೆಚ್ಚು ಮಂದಿ ಪಂದ್ಯಗಳನ್ನು ವೀಕ್ಷಿಸಿದ್ದಾರೆ. ಅಲ್ಲದೆ ಪ್ರತಿ ಪಂದ್ಯವ ಸಮಯವು ಶೇಕಡಾ 60ರಷ್ಟು ಹೆಚ್ಚಾಗಿದೆ.
ಪಂದ್ಯದಲ್ಲಿ ಏನಾಯಿತು?
ಅತ್ಯಂತ ರೋಚಕವಾಗಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ನ 17ನೇ ಪಂದ್ಯದಲ್ಲಿ ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ ಕೈ ಮೇಲಾಗಿದೆ. ಅಂತಿಮ ಎಸೆತದಲ್ಲಿ 5 ರನ್ ಬಾರಿಸುವ ಸವಾಲಿನಲ್ಲಿ ಧೋನಿ ಎಡವಿದ ಕಾರಣ ರಾಜಸ್ಥಾನ್ ತಂಡ 3 ರನ್ಗಳ ರೋಚಕ ಗೆಲುವು ದಾಖಲಿಸಿತು.
ಚೆನ್ನೈಯ ಚೆಪಾಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ರಾಜಸ್ಥಾನ್ ನಿಗದಿತ 20 ಓವರ್ಗಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತನ್ನ ಪಾಲಿನ ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 172 ರನ್ ಬಾರಿಸಿ ಕೇವಲ ಮೂರು ರನ್ ಅಂತರದಿಂದ ಸೋಲು ಕಂಡಿತು.