Site icon Vistara News

Dodda Ganesh: ಕೀನ್ಯಾ ಕ್ರಿಕೆಟ್​ ತಂಡಕ್ಕೆ ಕನ್ನಡಿಗ ದೊಡ್ಡ ಗಣೇಶ್ ನೂತನ ಕೋಚ್

Dodda Ganesh

Dodda Ganesh: Former India Cricketer Dodda Ganesh Named Kenya Head Coach

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕನ್ನಡಿಗ ದೊಡ್ಡ ಗಣೇಶ್(Dodda Ganesh) ಅವರು ಕೀನ್ಯಾ ತಂಡದ(Dodda Ganesh Kenya Head Coach) ಮುಖ್ಯ ಕೋಚ್​ ಆಗಿ ನೇಕಮಗೊಂಡಿದ್ದಾರೆ. 90ರ ದಶಕದಲ್ಲಿ ಭಾರತ ಮತ್ತು ಕರ್ನಾಟಕ ರಣಜಿ ತಂಡದಲ್ಲಿ ಉತ್ತಮ ಪ್ರದರ್ಶನ ತೋರಿದ ಹೆಗ್ಗಳಿಕೆ ಇವರದ್ದು. ದೊಡ್ಡ ಗಣೇಶ್ ಅವರ ನೇತೃತ್ವದಲ್ಲಿ ಕೀನ್ಯಾ ತಂಡವು ಮುಂಬರುವ ಐಸಿಸಿ ಡಿವಿಷನ್ 2 ಚಾಲೆಂಜ್ ಲೀಗ್​​ನಲ್ಲಿ ಕಣಕ್ಕಿಳಿಯಲಿದೆ.

50 ವರ್ಷದ ದೊಡ್ಡ ಗಣೇಶ್ ನೇರ ನುಡಿಗಳಿಂದಲೇ ಹೆಸರುವಾಸಿ. 1997ರಲ್ಲಿ ಭಾರತ ಪರ 4 ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 104 ಪಂದ್ಯಗಳಿಂದ 365 ವಿಕೆಟ್​ ಪಡೆದಿದ್ದಾರೆ. ಭಾರತ ತಂಡದ ಪರ 6 ವಿಕೆಟ್​ ಕಿತ್ತಿದ್ದಾರೆ. ಲಿಸ್ಟ್​ ‘ಎ’ ಕ್ರಿಕೆಟ್​ನಲ್ಲಿ 89 ಪಂದ್ಯಗಳನ್ನಾಡಿ 128 ವಿಕೆಟ್​ ಪಡೆದಿದ್ದಾರೆ. ಬ್ಯಾಟಿಂಗ್​ನಲ್ಲಿಯೂ ಉತ್ತಮ ದಾಖಲೆ ಹೊಂದಿರುವ ಇವರು ಲಿಸ್ಟ್​ ‘ಎ’ ಮತ್ತು ಪ್ರಥಮ ದರ್ಜೆ ಕ್ರಿಕೆಟ್​ ಸೇರಿ ಒಟ್ಟು 2,548 ರನ್​ ಬಾರಿಸಿದ್ದಾರೆ. 6 ಬಾರಿ 10 ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ.

ಇದನ್ನೂ ಓದಿ Dodda Ganesh: ಬಿಜೆಪಿ ಸೇರಿದ ನೇರ ನುಡಿಯ ಕ್ರಿಕೆಟಿಗ ದೊಡ್ಡ ಗಣೇಶ್

4 ತಿಂಗಳ ಹಿಂದಷ್ಟೇ ದೊಡ್ಡ ಗಣೇಶ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(B. S. Yediyurappa) ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು. ದೊಡ್ಡ ಗಣೇಶ್ ಮೊದಲು ವಿಕೆಟ್ ಕೀಪರ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಆಗಿ ವೃತ್ತಿಜೀವನ ಪ್ರಾರಂಭಿಸಿದರು. ಭಾರತದ 1983ರ ವಿಶ್ವಕಪ್ ವಿಜೇತ ವಿಕೆಟ್-ಕೀಪರ್ ಸೈಯದ್ ಕಿರ್ಮಾನಿ ಅವರನ್ನು ಆರಾಧ್ಯ ಕ್ರಿಕೆಟಿಗನಾಗಿ ಕಂಡುಕೊಂಡಿದ್ದರು. ಗುಂಡಪ್ಪ ವಿಶ್ವನಾಥ್ ಅವರು ದೊಡ್ಡ ಗಣೇಶ್ ಬೌಲಿಂಗ್ ಪ್ರತಿಭೆಯನ್ನು ಗುರುತಿಸಿ ಅವರಿಗೆ ಹಲವು ಕ್ಲಬ್​ಗಳ ಪರ ಆಡುವ ಅವಕಾಶ ಕಲ್ಪಿಸಿದ್ದರು ಎನ್ನಲಾಗಿದೆ.

ಕೀನ್ಯಾ ತಂಡದ ಕೋಚ್​ ಆಗಿ ನೇಮಕಗೊಂಡ ವಿಚಾರವನ್ನು ದೊಡ್ಡ ಗಣೇಶ್ ತಮ್ಮ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಕೀನ್ಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ತನ್ನ ಎಲ್ಲ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ತಂಡದ ಏಳಿಗೆಗೆ ಶ್ರಮಿಸಲಿದ್ದೇನೆ” ಎಂದು ಹೇಳಿದ್ದಾರೆ.

Exit mobile version