ನವ ದೆಹಲಿ : ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat kohli) ಸತತವಾಗಿ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿದ್ದಾರೆ. ಹೀಗಾಗಿ ಮೇಲ್ನೋಟಕ್ಕೆ ಎದುರಾಳಿ ತಂಡಕ್ಕೆ ಅಪಾಯಕಾರಿ ಎನಿಸುತ್ತಿಲ್ಲ. ಆದರೆ, ಪಾಕಿಸ್ತಾನದ ಮಾಜಿ ಸ್ಪಿನ್ನರ್ ಯಾಸಿರ್ ಶಾ ಅವರಿಗೆ ಆ ರೀತಿ ಎನಿಸಿಲ್ಲ. ಕೊಹ್ಲಿ ಯಾವತ್ತಾದರೂ ಒಂದು ದಿನ ತಿರುಗಿ ಬಿದ್ದೇ ಬೀಳುತ್ತಾರೆ ಎನಿಸಿದೆ. ಹೀಗಾಗಿ ಕೊಹ್ಲಿಯ ಬಗ್ಗೆ ಎಚ್ಚರಿಕೆ ವಹಿಸುವಂತೆ ತನ್ನ ದೇಶದ ಆಟಗಾರರಿಗೆ ಹೇಳಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವೆ ಮುಂದಿನ ಶನಿವಾರ (ಆಗಸ್ಟ್ ೨೮) ಏಷ್ಯಾ ಕಪ್ ಪಂದ್ಯ ನಡೆಯಲಿದೆ. ಏಷ್ಯಾ ಕಪ್‌ಗೆ ಅಯ್ಕೆಯಾಗಿರುವ ತಂಡದಲ್ಲಿ ವಿರಾಟ್ ಕೊಹ್ಲಿ ಅವರಿದ್ದು, ಆಡುವ ೧೧ರ ಬಳಕ್ಕೆ ಆಯ್ಕೆಯಾಗುವುದು ಖಚಿತ. ಹೀಗಾಗಿ ವಿರಾಟ್ ಕೊಹ್ಲಿಯನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಯಾಸಿರ್ ಶಾ ಅವರು ಹೇಳಿದ್ದಾರೆ.
“ವಿರಾಟ್ ಕೊಹ್ಲಿಯ ಬಗ್ಗೆ ಅಲಕ್ಷ್ಯ ತಾಳಬೇಡಿ. ಅವರೀಗ ಫಾರ್ಮ್‌ನಲ್ಲಿ ಇಲ್ಲದೇ ಇರಬಹುದು. ಅದರೆ, ಯಾವಾಗ ಬೇಕಾದರೂ ತಿರುಗೇಟು ನೀಡಬಲ್ಲ ಶಕ್ತಿ ಹೊಂದಿದ್ದಾರೆ. ಯಾಕೆಂದರೆ ಅವರು ವಿಶ್ವ ದರ್ಜೆಯ ಆಟಗಾರರಾಗಿದ್ದಾರೆ,” ಎಂದು ಅವರು ಹೇಳಿದ್ದಾರೆ.
೨೦೨೧ರಲ್ಲಿ ದುಬೈನಲ್ಲಿ ನಡೆದ ಟಿ೨೦ ವಿಶ್ವ ಕಪ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಸೋಲು ಕಂಡಿತ್ತು. ಆ ಪಂದ್ಯದಲ್ಲಿ ಆರಂಭಿಕರ ವಿಕೆಟ್ ಬೇಗನೆ ಪತನಗೊಂಡ ಹೊರತಾಗಿಯೂ ವಿರಾಟ್ ಕೊಹ್ಲಿ ಅರ್ಧ ಶತಕ ಬಾರಿಸಿ ತಂಡದ ಮರ್ಯಾದೆ ಕಾಪಾಡಿದ್ದರು. ಅಂತೆಯೇ ೨೦೧೬ರಲ್ಲೂ ಪಾಕಿಸ್ತಾನ ವಿರುದ್ಧ ಅರ್ಧ ಶತಕ ಹೊಡೆದಿದ್ದರು. ಈ ಮೂಲಕ ಪಾಕ್‌ಗೆ ಸೆಡ್ಡು ಹೊಡೆಯಬಲ್ಲ ಬಲಿಷ್ಠ ಆಟಗಾರ ಎನಿಸಿಕೊಂಡಿದ್ದಾರೆ. ಹೀಗಾಗಿ ತಮ್ಮ ದೇಶದ ತಂಡದ ಆಟಗಾರರಿಗೆ ಎಚ್ಚರ ವಹಿಸುವಂತೆ ಯಾಸಿರ್ ಹೇಳಿದ್ದಾರೆ.