ನವದೆಹಲಿ: ಬ್ರಿಜ್ಭೂಷಣ್ ಸಿಂಗ್ ಶರಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ಪ್ರತಿಭಟನೆ (Wrestlers Protest) ನಡೆಸುತ್ತಿರುವ ಕುಸ್ತಿಪಟುಗಳು ತಾವು ಗೆದ್ದಿರುವ ಪದಕಗಳನ್ನು ನದಿಗೆ ಎಸೆಯಬಾರದು ಎಂದು 1983ರ ಏಕ ದಿನ ವಿಶ್ವ ಕಪ್ ವಿಜೇತ ಭಾರತ ತಂಡದ ಸದಸ್ಯರು ಸಲಹೆ ಕೊಟ್ಟಿದ್ದಾರೆ. ಕ್ರಿಕೆಟಿಗರು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು ಅದರನ್ನು ಸುದ್ದಿ ಸಂಸ್ಥೆ ಪಿಟಿಐ ಪ್ರಕಟಿಸಿದೆ. ಇಂಥ ಸಮಸ್ಯೆಗಳನ್ನು ಬಗೆಹರಿಸಬೇಕು ಎಂಬುದಾಗಿಯೂ ಕ್ರಿಕೆಟಿಗರು ಒತ್ತಾಯ ಮಾಡಿದ್ದಾರೆ.
ಕ್ರಿಕೆಟಿಗರು ಹೇಳಿದ್ದೇನು?
ನಮ್ಮ ಚಾಂಪಿಯನ್ ಕುಸ್ತಿಪಟುಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆಯುತ್ತಿರುವ ದೃಶ್ಯಗಳಿಂದ ನಾವು ದುಃಖಿತರಾಗಿದ್ದೇವೆ ಮತ್ತು ವಿಚಲಿತರಾಗಿದ್ದೇವೆ. ಅವರು ಕಷ್ಟಪಟ್ಟು ಸಂಪಾದಿಸಿದ ಪದಕಗಳನ್ನು ಗಂಗಾ ನದಿಗೆ ಎಸೆಯುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ನಾವು ಹೆಚ್ಚು ಕಳವಳಗೊಂಡಿದ್ದೇವೆ ಎಂದು ಕ್ರಿಕೆಟಿಗರು ಹೇಳಿಕೆ ನೀಡಿದ್ದಾರೆ.
ಆ ಪದಕಗಳು ವರ್ಷಗಳ ಪ್ರಯತ್ನ, ತ್ಯಾಗ, ದೃಢನಿಶ್ಚಯ ಮತ್ತು ಛಲದ ಫಲವಾಗಿದೆ. ಅವರು ತಮ್ಮ ಸ್ವಂತ ಮಾತ್ರವಲ್ಲ, ರಾಷ್ಟ್ರದ ಹೆಮ್ಮೆಯ ಪ್ರತೀಕವಾಗಿದ್ದಾರೆ. ಈ ವಿಷಯದಲ್ಲಿ ಯಾವುದೇ ಅವಸರದ ನಿರ್ಧಾರ ತೆಗೆದುಕೊಳ್ಳದಂತೆ ನಾವು ಕುಸ್ತಿಪಟುಗಳನ್ನು ಒತ್ತಾಯಿಸುತ್ತೇವೆ. ಅವರ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬುದೇ ನಮ್ಮ ಭರವಸೆ ಎಂದು ಕ್ರಿಕೆಟಿಗರು ಹೇಳಿದ್ದಾರೆ. ಕೊನೆಯದಾಗಿ ಅವರು, ನೆಲದ ಕಾನೂನು ಗೆಲ್ಲಲಿ ಎಂದು ಬರೆದುಕೊಂಡಿದ್ದಾರೆ.
ಗಂಗಾ ನದಿಯಲ್ಲಿ ಪದಕಗಳನ್ನು ಎಸೆಯುವ ಯೋಜನೆ
ರಾಷ್ಟ್ರೀಯ ಕುಸ್ತಿ ಸಂಸ್ಥೆಯ ಮುಖ್ಯಸ್ಥರಾಗಿ ಉಳಿದಿರುವ ಆಡಳಿತಾರೂಢ ಬಿಜೆಪಿ ಸಂಸದ ಬ್ರಿಜ್ ಭೂಷಣ್ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ವಿಫಲವಾಗಿದೆ ಎಂದು ಗಮನ ಸೆಳೆಯಲು ಕುಸ್ತಿಪಟುಗಳಾದ ಬಜರಂಗ್ ಪೂನಿಯಾ ಮತ್ತು ಸಾಕ್ಷಿ ಮಲಿಕ್ ನೇತೃತ್ವದ ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾ ನದಿಗೆ ಎಸೆಯುವುದಾಗಿ ಹೇಳಿದದ್ದರು.
ಕುಸ್ತಿಪಟುಗಳು ಮಂಗಳವಾರ ತಮ್ಮ ಪದಕಗಳನ್ನು ಗಂಗಾ ನದಿಗೆ ಎಸೆದು ನಂತರ ದೆಹಲಿಯ ಇಂಡಿಯಾ ಗೇಟ್ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ಯೋಜಿಸಿದ್ದರು. ರೈತ ಮುಖಂಡ ನರೇಶ್ ಟಿಕಾಯತ್ ಮಧ್ಯಪ್ರವೇಶಿಸಿದ ನಂತರ ಯೋಜನೆ ಬದಲಿಸಿದ್ದರು.
ಕುಸ್ತಿಪಟುಗಳ ಮೇಲೆ ಹಲ್ಲೆ
ಕಳೆದ ವಾರ ಹೊಸ ಸಂಸತ್ ಭವನದ ಉದ್ಘಾಟನೆಯ ದಿನದಂದು ನಡೆದ ಮೆರವಣಿಗೆ ವೇಳೆ ಪೊಲೀಸರು ಹಾಗೂ ಕುಸ್ತಿಪಟುಗಳ ನಡುವೆ ಘರ್ಷಣೆ ನಡೆಯುತ್ತಿದೆ. ಈ ವೇಳೆ ಕುಸ್ತಿಪಟುಗಳನ್ನು ತಳ್ಳಾಡಿದ್ದರು. ಇದು ದೇಶವ್ಯಾಪಿ ಟೀಕೆಗೆ ಒಳಗಾಗಿತ್ತು. ಇದೇ ಘಟನೆಯನ್ನು ಕ್ರಿಕೆಟಿಗರು ಕೂಡ ಟೀಕಿಸಿದ್ದಾರೆ.
ಕುಸ್ತಿಪಟುಗಳ ಪ್ರತಿಭಟನೆ ಪ್ರಾರಂಭವಾದ ತಿಂಗಳ ಬಳಿಕ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ದೆಹಲಿ ಪೊಲೀಸರು ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಎರಡು ಎಫ್ಐಆರ್ಗಳನ್ನು ದಾಖಲಿಸಿದ್ದರು. ಡಬ್ಲ್ಯುಎಫ್ಐ ಮುಖ್ಯಸ್ಥನ ವಿರುದ್ಧ ಅಪ್ರಾಪ್ತ ವಯಸ್ಕ ಸೇರಿದಂತೆ ಮಹಿಳಾ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.
ಆದರೆ ಬ್ರಿಜ್ಭೂಷಣ್ ಸಿಂಗ್ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ರಾಜಕೀಯ ಪಿತೂರಿಯ ಭಾಗವಾಗಿದೆ ಎಂದು ಒತ್ತಿ ಹೇಳಿದ್ದಾರೆ. ನಾಟಕೀಯ ಶೈಲಿಯಲ್ಲಿ, ಆರೋಪಗಳನ್ನು ಸಾಬೀತುಪಡಿಸಿದರೆ ನೇಣು ಹಾಕಿಕೊಳ್ಳುವುದಾಗಿ ಘೋಷಿಸಿದ್ದಾರೆ.
ಕುಸ್ತಿಪಟುಗಳು ಬ್ರಿಜ್ ಭೂಷಣ್ ಅವರನ್ನು ಬಂಧಿಸಬೇಕೆಂದು ಪದೇ ಪದೇ ಒತ್ತಾಯಿಸುತ್ತಿದ್ದಾರೆ ಆದರೆ ಬಿಜೆಪಿ ಸಂಸದ ಪೋಕ್ಸೊ ಕಾಯಿದೆಯನ್ನೇ ಬದಲಿಸಿ ಎಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.