Site icon Vistara News

MS Dhoni: ಅಭಿಮಾನಿಯ ಬಿಎಮ್‌ಡಬ್ಲ್ಯೂ ಕಾರ್‌ನಲ್ಲಿ ಸಹಿ ಹಾಕಿದ ಧೋನಿ; ವಿಡಿಯೊ ವೈರಲ್‌

MS Dhoni's signs his BMW car

ಚೆನ್ನೈ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಬಳಿಕ ತಮ್ಮ ನಿವೃತ್ತಿ ಜೀವನವನ್ನು ಎಂಜಾಯ್‌ ಮಾಡುತ್ತಿರುವ ಟೀಮ್‌ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ(MS Dhoni) ಅವರು ಕಾರು ಮತ್ತು ಬೈಕ್‌ಗಳ ಮೂಲಕ ಸವಾರಿ ಮಾಡುತ್ತಿದ್ದಾರೆ. ಹೀಗೆ ಜಾಲಿ ರೈಡ್‌ ಹೋಗುತ್ತಿದ್ದ ಸಂದರ್ಭದಲ್ಲಿ ಅಭಿಮಾನಿಯೊಬ್ಬರ ಬಯಕೆಯಂತೆ ಅವರ ಬಿಎಮ್‌ಡಬ್ಲ್ಯೂ ಕಾರ್‌ನ(Dhoni signs his BMW car) ಒಳ ಭಾಗದಲ್ಲಿ ಧೋನಿ ತಮ್ಮ ಸಹಿ ಹಾಕಿ ಆಟೋಗ್ರಾಫ್‌ ನೀಡಿದ್ದಾರೆ. ಈ ವಿಡಿಯೊ ವೈರಲ್‌(viral video) ಆಗಿದೆ.

ಅಭಿಮಾನಿಯೊಬ್ಬರು ತಮ್ಮ BMW ಕಾರ್‌ನ ಒಳಭಾಗಕ್ಕೆ ಸಹಿ ಹಾಕುವಂತೆ ಧೋನಿಯನ್ನು ಕೇಳಿದ್ದಾರೆ. ಇದೇ ವೇಳೆ ಧೋನಿ ಅವರು ಸಂತೋಷದಿಂದ ಅಭಿಮಾನಿಯ ವಿನಂತಿಯನ್ನು ಸ್ವೀಕರಿಸಿದ್ದಾರೆ. ಬಳಿಕ ತಮ್ಮ ಕಾರ್‌ನ ಸೀಡ್‌ನ ಭಾಗದ ಮಧ್ಯೆ ಇರುವ ಹ್ಯಾಂಡಲ್‌ನ ಕವರ್‌ನಲ್ಲಿ ಸಹಿ ಹಾಕಿದ್ದಾರೆ. ಅಭಿಮಾನಿಗಳು ಈ ವಿಡಿಯೊವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ವಿಡಿಯೊ ಕಂಡ ಧೋನಿ ಅಭಿಮಾನಿಗಳು ನೀವು ಅದೃಷ್ಟಶಾಲಿ ಎಂದು ಕಮೆಂಟ್‌ ಮಾಡಿದ್ದಾರೆ. ಧೋನಿ ಅವರು ಕಪ್ಪು ಬಣ್ಣದ ಜಾಕೆಟ್‌ನಲ್ಲಿ ಕಂಗೊಳಿಸಿದ್ದಾರೆ.

ಕೋಡ್​ ವರ್ಡ್​ ಮೂಲಕ ಭಾರತ ತಂಡಕ್ಕೆ ಸಲಹೆ ನೀಡಿದ್ದ ಧೋನಿ

ಕಳೆದ ವಾರ ವಿಶ್ವಕಪ್​ ಕುರಿತ ಸಂದರ್ಶನದಲ್ಲಿ ಮಾತನಾಡಿದ್ದ ಧೋನಿ, “ಭಾರತ ತುಂಬಾ ಒಳ್ಳೆಯ ತಂಡ. ತಂಡದ ಬ್ಯಾಲೆನ್ಸ್ ತುಂಬಾ ಚೆನ್ನಾಗಿದೆ. ಎಲ್ಲ ಆಟಗಾರರು ಉತ್ತಮವಾಗಿ ಆಡುತ್ತಿದ್ದಾರೆ. ಆದ್ದರಿಂದ ಎಲ್ಲವೂ ತುಂಬಾ ಚೆನ್ನಾಗಿ ಕಾಣುತ್ತದೆ. ಇದಕ್ಕಿಂತ ಹೆಚ್ಚಿಗೆ ನಾನು ಏನನ್ನೂ ಹೇಳುವುದಿಲ್ಲ. ಬುದ್ಧಿವಂತರಿಗೆ ಈ ಸಿಗ್ನಲ್ ಸಾಕು” ಎಂದು ಟೀಮ್​ ಇಂಡಿಯಾ ಪ್ರದರ್ಶನವನ್ನು ಹೊಗಳುವ ಜತೆಗೆ ಗೆಲುವಿನ ತಂತ್ರದ ಸಿಗ್ನಲ್, ಕೋಡ್​ ವರ್ಡ್​ ಮೂಲಕ ನೀಡಿದ್ದರು. ಧೋನಿ ಅವರ ಕೋಡ್​ ವರ್ಡ್​ ‘ಬುದ್ಧಿವಂತರಿಗೆ ಈ ಸಿಗ್ನಲ್ ಸಾಕು” ಎನ್ನುವುದಾಗಿತ್ತು. ಇದರ ಹಿಂದಿರುವ ರಹಸ್ಯ ಧೋನಿ ಮತ್ತು ತಂಡಕ್ಕೆ ಮಾತ್ರವೇ ತಿಳಿದಿದೆ.

ಶಾರುಖ್ ಬರ್ತ್‌ಡೇ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದ ಧೋನಿ

ನವೆಂಬರ್ 2ರಂದು ಶಾರುಖ್ ಖಾನ್ (Shah Rukh Khan) 58ನೇ ಹುಟ್ಟುಹಬ್ಬವನ್ನು ಆಚರಿಸಿದ್ದರು. ಮುಂಬೈಯಲ್ಲಿ ನಡೆದಿದ್ದ ಈ ಬರ್ತ್‌ಡೇ ಪಾರ್ಟಿಯಲ್ಲಿ ಮಹೇಂದ್ರ ಸಿಂಗ್‌ ಧೋನಿ ಕೂಡ ಕಾಣಿಸಿಕೊಂಡಿದ್ದರು. ಉಳಿದಂತೆ ಕರೀನಾ ಕಪೂರ್, ಕರಿಷ್ಮಾ ಕಪೂರ್, ಅಮೃತಾ ಅರೋರಾ ಮತ್ತು ಅರ್ಜುನ್ ಕಪೂರ್ ಸೇರಿ ಅನೇಕ ಬಾಲಿವುಡ್‌ನ ನಟ ಮತ್ತು ನಟಿಯರು ಕೂಡ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ ‘ನಾನು-ಧೋನಿ ಉತ್ತಮ ಸ್ನೇಹಿತರಲ್ಲ’; ಟೀಮ್​ ಇಂಡಿಯಾ ಆಟಗಾರನ ಅಚ್ಚರಿಯ ಹೇಳಿಕೆ

ಧೋನಿಯ ಹೆಸರಲ್ಲಿ ಮಗುವಿನ ಅಪಹರಣ

ಧೋನಿ ಹೆಸರನ್ನು ಬಳಸಿಕೊಂಡು ತಾಯಿಯೊಬ್ಬಳನ್ನು ವಂಚಿಸಿ ಆಕೆಯ ಹೆಣ್ಣು ಮಗುವನ್ನು ಅಪಹರಿಸಿದ ಘಟನೆ ಜಾರ್ಖಡ್​​ನ ರಾಂಚಿಯಲ್ಲಿ ಅಕ್ಟೋಬರ್‌ 24ರಂದು ನಡೆದಿತ್ತು. ಪೊಲೀಸರ ಪ್ರಕಾರ, ಅಪಹರಣಕಾರರು ಮಗುವಿನ ತಾಯಿಗೆ ಧೋನಿ ಬಡವರಿಗೆ ಹಣ ಮತ್ತು ಮನೆಗಳನ್ನು ವಿತರಿಸುತ್ತಿದ್ದಾರೆ ಎಂದು ಯಾಮಾರಿಸಿ ಮಗುವನ್ನು ಅಪಹರಣ ಮಾಡಿದ್ದರು.

ಮೂರು ದಿನಗಳ ಹಿಂದೆ ಮಧು ದೇವಿ ಎಂಬ ಮಹಿಳೆ ಇಬ್ಬರು ಮಕ್ಕಳೊಂದಿಗೆ ರಾಂಚಿಯ ಅಂಗಡಿಯೊಂದರಲ್ಲಿ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾಗ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಬೈಕ್​​ನಲ್ಲಿ ಬಂದಿದ್ದ ಪುರುಷ ಮತ್ತು ಮಹಿಳೆ, ಧೋನಿ ಅಗತ್ಯವಿರುವವರಿಗೆ ಹಣವನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದರು. ಅದನ್ನು ನಂಬಿದ್ದ ಮಧು ದೇವಿ ಅವರೊಂದಿಗೆ ಹೋಗಿದ್ದು ಈ ವೇಳೆ ಬೈಕ್​ನಲ್ಲಿ ಮಗುವಿನ ಸಮೇತ ಪರಾರಿಯಾಗಿದ್ದರು. ಸದ್ಯ ಪ್ರರಣದ ತನಿಖೆ ನಡೆಯುತ್ತಿದೆ.

Exit mobile version