ಭುವನೇಶ್ವರ: ಭಾರತದ ಸ್ಟಾರ್ ಓಟಗಾರ್ತಿ, ಸ್ಪ್ರಿಂಟ್ ಕ್ವೀನ್ ಎಂದೇ ಖ್ಯಾತರಾದ ದ್ಯುತಿ ಚಂದ್ (Dutee Chand) ಅವರಿಗೆ ವಿಶ್ವ ಉದ್ದೀಪನ ಮದ್ದು ತಡೆ ಸಂಸ್ಥೆಯು ನಾಲ್ಕು ವರ್ಷ ನಿಷೇಧಿಸಿದೆ. ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಕಾರಣದಿಂದ ಅವರನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ. ಇದರ ಬೆನ್ನಲ್ಲೇ ದ್ಯುತಿ ಚಂದ್ ಅವರು ಕ್ಯಾನ್ಸರ್ ವಿರುದ್ಧ ಹೋರಾಡಿದ್ದರು ಎಂಬ ವಿಷಯವೀಗ ಬಹಿರಂಗವಾಗಿದೆ.
ಹೌದು, 2021ರ ನವೆಂಬರ್‌ನಲ್ಲಿ ದ್ಯುತ್ ಚಂದ್ ಅವರು ಭುವನೇಶ್ವರದ ಕಿಮ್ಸ್ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದಾಗ ಅವರಿಗೆ ಮೊದಲ ಹಂತದ (First Stage) ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಡಾ. ಸುದೀಪ್ ಸತ್ಪತಿ ಅವರು ವೃಷಣದ ಕ್ಯಾನ್ಸರ್ ಇದೆ ಎಂಬುದಾಗಿ ತಿಳಿಸಿದ್ದರು ಎಂದು ದ್ಯುತಿ ಚಂದ್ ಅವರೇ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಕ್ಯಾನ್ಸರ್ ನೋವು, ಮಾನಸಿಕ ಹಿಂಸೆ, ಇದರ ಮಧ್ಯೆಯೇ ಡೋಪಿಂಗ್ ಟೆಸ್ಟ್ ಬಾಧಿಸಿದ್ದನ್ನು ಕೂಡ ಅವರು ತಿಳಿಸಿದ್ದಾರೆ.
ನನಗೆ ದಿಗ್ಭ್ರಮೆಯಾಯಿತು
“ಟೋಕಿಯೊ ಒಲಿಂಪಿಕ್ಸ್‌ನ 100 ಮೀಟರ್ ಹಾಗೂ 200 ಮೀಟರ್ ರೇಸ್‌ನಲ್ಲಿ ಉತ್ತಮ ಪ್ರದರ್ಶನ ತೋರದೆ, ಮೊದಲ ಹಂತವನ್ನೂ ನಾನು ಪ್ರವೇಶಿಸಲು ಸಾಧ್ಯವಾಗಲಿಲ್ಲ. ಇದೇ ವೇಳೆ ನನ್ನ ತೊಡೆ ಸಂದಿನಲ್ಲಿ ನೋವಾಗಲು ಶುರುವಾಯಿತು. ಯಾವ ವೈದ್ಯರ ಬಳಿ ಹೋದರೂ ನೋವು ಶಮನವಾಗಲಿಲ್ಲ. ಆಗ ನಾನು ಕಿಮ್ಸ್ ಆಸ್ಪತ್ರೆಗೆ ತೆರಳಿ, ತಪಾಸಣೆ ಮಾಡಿಸಿಕೊಂಡೆ. ಆಗ ಡಾ.ಸುದೀಪ್ ಸತ್ಪತಿ ಅವರು ನನಗೆ ಕ್ಯಾನ್ಸರ್ ಇರುವುದನ್ನು ದೃಢಪಡಿಸಿದರು. ನೀವು ಓಡುವುದನ್ನೇ ಬಿಡಬೇಕು. ಇಲ್ಲದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ ಎಂಬುದಾಗಿ ಹೇಳಿದರು. ಆಗ ನಾನು ತುಂಬ ಬಯಭೀತಳಾದೆ. ನನ್ನ ಜೀವನದಲ್ಲಿ ಏನಾಗುತ್ತಿದೆ ಎಂದು ನನಗೆ ನಾನೇ ಕೇಳಿಕೊಂಡೆ” ಎಂಬುದಾಗಿ ದ್ಯುತಿ ಚಂದ್ ತಿಳಿಸಿದ್ದಾರೆ.
ಇದನ್ನೂ ಓದಿ: ಉದ್ದೀಪನ ಮದ್ದು ಸೇವನೆ: ಸ್ಪ್ರಿಂಟರ್ ದ್ಯುತಿ ಚಂದ್ಗೆ 4 ವರ್ಷ ನಿಷೇಧ ಶಿಕ್ಷೆ
ಮಾತ್ರೆ ತೆಗೆದುಕೊಂಡ ಬಳಿಕ ನೋವು ಶಮನ
“ನನಗೆ ಏನು ಮಾಡಬೇಕು ಎಂಬುದೇ ತೋಚಲಿಲ್ಲ. ನನಗೆ ತುಂಬ ನೋವಾಗುತ್ತಿತ್ತು. ಆದರೆ, 15-20 ದಿನಗಳವರೆಗೆ ನಾನು ಔಷಧ ತೆಗೆದುಕೊಂಡ ಬಳಿಕ ನೋವು ಶಮನವಾಯಿತು. ನೋವು ಕಡಿಮೆಯಾದ ಬಳಿಕ ನಾನು ಯಾವುದೇ ಪರೀಕ್ಷೆ ಮಾಡಿಸಿಕೊಳ್ಳಲಿಲ್ಲ. ಇದೇ ವೇಳೆ ನಾನು ಡೋಪಿಂಗ್ ಟೆಸ್ಟ್‌ಗೆ ಒಳಗಾದೆ. ಆದರೆ, ಅದು ಪಾಸಿಟಿವ್ ಬಂದಿತು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 27 ವರ್ಷದ ದ್ಯುತಿ ಚಂದ್ ಅವರು ಭಾರತದಲ್ಲೇ ವೇಗವಾಗಿ ಓಡುವ ಮಹಿಳಾ ಸ್ಪ್ರಿಂಟರ್ ಎನಿಸಿದ್ದಾರೆ. ಅವರನ್ನು ನಾಲ್ಕು ವರ್ಷ ನಿಷೇಧಿಸಿದ ಕಾರಣ ಅವರು ಏಷ್ಯನ್ ಗೇಮ್ಸ್ ಹಾಗೂ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ.