ಚೆನ್ನೈ : ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಲ್‌ರೌಂಡರ್ ಡ್ವೇನ್ ಬ್ರಾವೊ ಐಪಿಎಲ್‌ಗೆ ವಿದಾಯ ಹೇಳಿದ್ದಾರೆ. ಈಗಾಗಲೇ ಅವರು ವೆಸ್ಟ್ ಇಂಡೀಸ್ ತಂಡಕ್ಕೆ ನಿವೃತ್ತಿ ಘೋಷಿಸಿದ್ದರು. ಇನ್ನು ಮುಂದೆ ಅವರು ಸಿಎಸ್‌ಕೆ ತಂಡದ ಬೌಲಿಂಗ್ ಕೋಚ್ ಆಗಿ ಮುಂದುವರಿಯಲಿದ್ದಾರೆ.
ಡ್ವೇನ್ ಬ್ರಾವೊ ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದ್ದು, ೧೬೧ ಪಂದ್ಯಗಳಲ್ಲಿ ೧೮೩ ವಿಕೆಟ್ ಕಬಳಿಸಿದ್ದಾರೆ. ಇದೀಗ ಅವರ ಸಿಎಸ್‌ಕೆ ತಂಡದ ಪರವಾಗಿ ಆಡುವುದಿಲ್ಲ ಎಂಬುದಾಗಿ ಘೋಷಿಸಿದ್ದಾರೆ. ಸಿಎಸ್‌ಕೆ ತಂಡದ ಬೌಲಿಂಗ್ ಕೋಚ್ ಆಗಿದ್ದ ಲಕ್ಷ್ಮೀಪತಿ ಬಾಲಾಜಿ ಅವರು ೨೦೨೩ನೇ ಸಾಲಿಗೆ ಬೌಲಿಂಗ್ ಕೋಚ್ ಆಗಿರುವುದಿಲ್ಲ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಡ್ವೇನ್ ಬ್ರಾವೊ ಅವರು ಆ ಸ್ಥಾನವನ್ನು ಭರ್ತಿ ಮಾಡಲಿದ್ದಾರೆ.
ನಾನು ನನ್ನ ಕ್ರಿಕೆಟ್ ಬದುಕಿನ ಹೊಸ ಪಯಣ ಮಾಡಲು ಬಯಸಿದ್ದೇನೆ. ಇನ್ನು ಮುಂದೆ ತಂಡದ ಬೌಲರ್‌ಗಳ ಜತೆ ಕೆಲಸ ಮಾಡುತ್ತೇನೆ. ಆಟಗಾರನಾಗಿದ್ದ ನಾನು ಏಕಾಏಕಿ ಕೋಚಿಂಗ್ ಜವಾಬ್ದಾರಿಯನ್ನು ಹೆಗಲೇರಿಸಿಕೊಳ್ಳುವ ಮೂಲಕ ಅದಕ್ಕೂ ಹೊಂದಿಕೆ ಮಾಡಿಕೊಳ್ಳಬೇಕಾಗಿದೆ. ನಾನು ಐಪಿಎಲ್‌ನ ಗರಿಷ್ಠ ವಿಕೆಟ್ ಗಳಿಕೆದಾರ ಎಂದು ಅನಿಸಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತಿದೆ. ಅಂತೆಯೇ ಐಪಿಎಲ್ ಇತಿಹಾಸ ಭಾಗವಾಗಿರಲೂ ಖುಷಿಯಾಗುತ್ತಿದೆ,” ಎಂಬುದಾಗಿ ಬ್ರಾವೊ ಹೇಳಿಕೊಂಡಿದ್ದಾರೆ.
“ಐಪಿಎಲ್‌ನಲ್ಲಿ ಅದ್ಭುತ ಸಾಧನೆ ತೋರಿದ ಡ್ವೇನ್ ಬ್ರಾವೊ ಅವರಿಗೆ ಅಭಿನಂದನೆಗಳು. ಒಂದು ದಶಕಕ್ಕೂ ಹೆಚ್ಚು ಕಾಲ ಸೂಪರ್ ಕಿಂಗ್ಸ್ ಕುಟುಂಬದ ಸದಸ್ಯರಾಗಿದ್ದ ನಿಮ್ಮೊಂದಿಗಿನ ಸಹಭಾಗಿತ್ವವನ್ನು ಮುಂದುವರಿಸಲು ನಾವು ಉತ್ಸುಕರಾಗಿದ್ದೇವೆ. ಬ್ರಾವೋ ಅವರ ಅಪಾರ ಅನುಭವ ನಮ್ಮ ಆಟಗಾರರಿಗೆ ನೆರವಾಗಲಿದೆ ಮತ್ತು ಅವರ ಮಾರ್ಗದರ್ಶನದಲ್ಲಿ ನಮ್ಮ ಬೌಲಿಂಗ್ ವಿಭಾಗ ಪ್ರಗತಿ ಕಾಣಲಿದೆ ಎಂಬ ವಿಶ್ವಾಸ ನಮಗಿದೆ,” ಎಂದು ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಸಿ ವಿಶ್ವನಾಥನ್ ಹೇಳಿದ್ದಾರೆ.
ಇದನ್ನೂ ಓದಿ | IPL 2023 | ಧೋನಿ, ಜಡೇಜಾ ಸೇರಿ 9 ಆಟಗಾರರನ್ನು ಉಳಿಸಿಕೊಂಡ ಚೆನ್ನೈ ಸೂಪರ್ ಕಿಂಗ್ಸ್