Site icon Vistara News

IPL 2023: ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 7 ವಿಕೆಟ್​ ಸುಲಭ ಜಯ, ಹೈದರಾಬಾದ್ ತಂಡಕ್ಕೆ ಎರಡನೇ ಸೋಲು

#image_title

ಚೆನ್ನೈ: ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಸಂಪೂರ್ಣ ವೈಫಲ್ಯ ಕಂಡ ಸನ್ ರೈಸರ್ಸ್​ ಹೈದರಾಬಾದ್ ತಂಡ ಐಪಿಎಲ್​ ಐಪಿಎಲ್ 16ನೇ ಆವೃತ್ತಿಯ 29ನೇ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧ 7 ವಿಕೆಟ್​ಗಳಿಂದ ಸೋಲು ಕಂಡಿತು. ಚೆನ್ನೈ ತಂಡದ ಪರ ರವೀಂದ್ರ ಜಡೇಜಾ (22 ರನ್​ಗಳಿಗೆ 3 ವಿಕೆಟ್​) ಬೌಲಿಂಗ್​ನಲ್ಲಿ ಪ್ರಭಾವಿ ಪ್ರದರ್ಶನ ನೀಡಿದರೆ, ಬ್ಯಾಟಿಂಗ್​ನಲ್ಲಿ 77 ರನ್​ ಬಾರಿಸಿದ ಡೆವೋನ್ ಕಾನ್ವೆ ಸುಲಭ ವಿಜಯದ ನೇತೃತ್ವ ವಹಿಸಿದರು. ಇದು ಚೆನ್ನೈ ಸೂಪರ್​ ಕಿಂಗ್ಸ್ ತಂಡಕ್ಕೆ ಸತತ ಎರಡನೇ ಗೆಲುವಾಗಿದ್ದು ಹಾಳಿ ಆವೃತ್ತಿಯಲ್ಲಿ ಆಡಿದ ಏಳು ಪಂದ್ಯಗಳಲ್ಲಿ ನಾಲ್ಕನೇ ವಿಜಯವಾಗಿದೆ. ಅತ್ತ ಎಸ್​ಆರ್​​ಎಚ್​ ತಂಡ ಆಡಿರುವ ಆರು ಪಂದ್ಯಗಳಲ್ಲಿ ಸತತ ಎರಡನೇ ಹಾಗೂ ಒಟ್ಟು ನಾಲ್ಕನೇ ಪರಾಜಯಕ್ಕೆ ಒಳಗಾಯಿತು.

ಚೆಪಾಕ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ಹಣಾಹಣಿಯಲ್ಲಿ ಟಾಸ್ ಗೆದ್ದ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಸನ್​ರೈಸರ್ಸ್​ ಹೈದರಾಬಾದ್ ಬಳಗ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 134 ರನ್ ಬಾರಿಸಿತು. ಸಾಧಾರಣ ಗುರಿ ಬೆನ್ನಟ್ಟಿದ ಚೆನ್ನೈ ತಂಡ 18.4 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 138 ರನ್​ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಗುರಿ ಬೆನ್ನಟ್ಟಲು ಆರಂಭಿಸಿದ ಚೆನ್ನೈ ತಂಡಕ್ಕೆ ಡೆವೋನ್ ಕಾನ್ವೆ ಹಾಗೂ ಋತುರಾಜ್​ ಗಾಯಕ್ವಾಡ್​ (35) ಅವರ ಮೂಲಕ ಉತ್ತಮ ಆರಂಭ ದೊರೆಯಿತು. ಈ ಜೋಡಿ ಮೊದಲ ವಿಕೆಟ್​ಗೆ 87 ರನ್​ ಬಾರಿಸಿತು. ಆ ಬಳಿಕ ಅಜಿಂಕ್ಯ ರಹಾನೆ (9), ಅಂಬಾಟಿ ರಾಯಡು (9) ಬೇಗನೆ ವಿಕೆಟ್​ ಕಳೆದುಕೊಂಡರು. ಆದರೆ, ಕಾನ್ವೆ ಗುರಿ ಮುಟ್ಟಿಸಿದರು.

ಸನ್​ ರೈಸರ್ಸ್​ ಹೈದರಾಬಾದ್ ತಂಡ ನಿಧಾನಗತಿಯ ಆರಂಭವನ್ನು ಪಡೆಯಿತು. 35 ರನ್​ಗಳಿಗೆ ಮೊದಲ ವಿಕೆಟ್​ ಕಳೆದುಕೊಂಡಿತು. ಸ್ಫೋಟಕ ಬ್ಯಾಟರ್​ ಹ್ಯಾರಿ ಬ್ರೂಕ್​ 18 ರನ್​ಗೆ ವಿಕೆಟ್​ ಒಪ್ಪಿಸಿದರು. ಇನ್ನೊಂದು ತುದಿಯಲ್ಲಿ ಅಭಿಷೇಕ್ ಶರ್ಮಾ 1 ಸಿಕ್ಸರ್ ಹಾಗೂ 3 ಫೋರ್​ಗಳೊಂದಿಗೆ 34 ರನ್ ಬಾರಿಸಿದರು ಅವರೊಂದಿಗೆ ದೊಡ್ಡ ಇನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ : IPL 2023 : ಸಿಎಸ್​ಕೆ ವಿರುದ್ಧ ಗೆದ್ದ ಖುಷಿಯಲ್ಲಿದ್ದ ಸಂಜು ಸ್ಯಾಮ್ಸನ್​ಗೆ 12 ಲಕ್ಷ ರೂಪಾಯಿ ದಂಡ

ಮೂರನೇ ಕ್ರಮಾಂಕದಲ್ಲಿ ಆಡಲು ಇಳಿದ ರಾಹುಲ್ ತ್ರಿಪಾಠಿ 21 ರನ್ ಬಾರಿಸಿದರೂ, ನಾಯಕ ಏಡೆನ್ ಮಾರ್ಕ್ರಮ್​ 12 ರನ್​ಗಳಿಗೆ ಔಟಾದರು. ಹೆನ್ರಿಚ್ ಕ್ಲಾಸೆನ್​ ಕೂಡ 17 ರನ್​ಗಳಿಗೆ ಸೀಮಿತಗೊಂಡರು. ಏಳನೇ ಕ್ರಮಾಂಕದಲ್ಲಿ ಆಡಲು ಬಂದ ಮಯಾಂಕ್ ಅಗರ್ವಾಲ್​ 4 ಎಸೆತಗಳನ್ನು ಬಳಸಿಕೊಂಡು 2 ರನ್ ಗಳಿಸಿದರು. ಕೊನೆಯಲ್ಲಿ ಮಾರ್ಕೊ ಜೆನ್ಸನ್​ 17 ರನ್​ ಬಾರಿಸಿದ ಕಾರಣ ತಂಡದ ಮೊತ್ತ 130ರ ಗಡಿ ದಾಟಿತು. ವಾಷಿಂಗ್ಟನ್ ಸುಂದರ್​ 9 ರನ್​ ಕೊಡುಗೆ ಕೊಟ್ಟರು.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಕಾಶ್​ ಸಿಂಗ್​, ಮಹೀಶ್​ ತೀಕ್ಷಣ, ಹಾಗೂ ಮಹೀಶಾ ಪತಿರಾಣಾ ತಲಾ ಒಂದು ವಿಕೆಟ್​ ಕಬಳಿಸಿದರು.

Exit mobile version