Site icon Vistara News

Eden Gardens: ವಿಶ್ವಕಪ್​ ಪಂದ್ಯಕ್ಕೂ ಮೊದಲೇ, ಈಡನ್​ ಗಾರ್ಡನ್ಸ್ ಡ್ರೆಸ್ಸಿಂಗ್​​ ರೂಮ್​ನಲ್ಲಿ ಭಾರೀ ಅಗ್ನಿ ಅವಘಡ

Fire breaks out at Eden Gardens

ಕೋಲ್ಕತ್ತಾ: ಅಕ್ಟೋಬರ್ 5 ರಿಂದ ಆರಂಭಗೊಳ್ಳಲಿರುವ ಪುರುಷರ ವಿಶ್ವಕಪ್​ ಟೂರ್ನಿಗೆ ನವೀಕರಣಗೊಳ್ಳುತ್ತಿದ್ದ (renovation work) ಕೋಲ್ಕತ್ತಾದ(Kolkata) ಐತಿಹಾಸಿಕ ಈಡನ್​ ಗಾರ್ಡನ್ಸ್​ ಸ್ಟೇಡಿಯಂನ(Eden Gardens) ಡ್ರೆಸ್ಸಿಂಗ್​ ರೂಮ್​ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.​ ಸದ್ಯದ ಮಾಹಿತಿ ಬುಧವಾರ ತಡರಾತ್ರಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಕ್ರೀಡಾಂಗಣದ ಡ್ರೆಸ್ಸಿಂಗ್ ರೂಮ್​ನಲ್ಲಿ ಹಠಾತ್ ಬೆಂಕಿ ಬಿದ್ದು ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಇದೇ ವೇಳೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಸಾಕಷ್ಟು ಪ್ರಯತ್ನದ ಬಳಿಕ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ಅವಘಡಕ್ಕೆ ನಿರ್ಧಿಷ್ಟ ಕಾರಣ ಏನೆಂದು ತಿಳಿದುಬಂದಿಲ್ಲ. ಆದರೆ ಡ್ರೆಸಿಂಗ್​ ರೂಮ್​ನಲ್ಲಿದ್ದ ಅಪಾರ ಬೆಲೆಬಾಳುವ ವಸ್ತುಗಳು ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ.

ವಿಶ್ವಕಪ್​ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಈ ಘಟನೆ ನಡೆದಿರುವುದು ಕೋಲ್ಕತ್ತಾ ಕ್ರಿಕೆಟ್​ ಮಂಡಳಿಗೆ ಚಿಂತೆಗೀಡು ಮಾಡಿದೆ. ಇನ್ನುಳಿದ ಕೆಲವೇ ದಿನಗಳಲ್ಲಿ ತ್ವರಿತವಾಗಿ ಸುಸಜ್ಜಿತ ಡ್ರೆಸಿಂಗ್​ ಕೊಠಡಿಯನ್ನು ನಿರ್ಮಿಸುವ ಸವಾಲು ಎದುರಾಗಿದೆ. ಲೀಗ್​ ಮಾತ್ರವಲ್ಲದೆ ಒಂದು ಸೆಮಿಫೈನಲ್​ ಪಂದ್ಯವೂ ಈ ಕ್ರೀಡಾಂಗಣದಲ್ಲಿ ನಡೆಯಲಿದೆ.

ಶಾರ್ಟ್ ಸರ್ಕ್ಯೂಟ್ ಕಾರಣ?

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಬೆಂಕಿ ಅನಾಹುತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ತಿಳಿದು ಬಂದಿದೆ. ಮಧ್ಯರಾತ್ರಿ 12 ರ ಸುಮಾರಿಗೆ ಕ್ರೀಡಾಂಗಣದ ಡ್ರೆಸ್ಸಿಂಗ್ ರೂಮ್‌ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಡಿದೆ. ಈ ವೇಳೆ ಬೆಂಕಿ ಹತ್ತಿಕೊಂಡಿರುವುದು ತಿಳಿದುಬಂದಿದೆ. ಇದೇ ವೇಳೆ ಸ್ಥಳೀಯರು ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಒಂದು ಗಂಟೆಗೂ ಅಧಿಕ ಶ್ರಮವಹಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಕ್ಷಿಪ್ರ ಕಾರ್ಯಾಚರಣೆಯಿಂದ ಸಂಭವನೀಯ ಅವಘಡ ತಪ್ಪಿದೆ. ಆದರೆ ಡ್ರೆಸ್ಸಿಂಗ್ ರೂಮಿನ ಫಾಲ್ಸ್ ಸೀಲಿಂಗ್ ಸಂಪೂರ್ಣ ಸುಟ್ಟು ಕರಕಲಾಗಿದೆ.

ಇದನ್ನೂ ಓದಿ ICC World Cup: ಭಾರತ ವಿಶ್ವಕಪ್​ ಗೆಲ್ಲಬೇಕಾದರೆ ಈ ಕೆಲಸ ಅತ್ಯಗತ್ಯ; ಆರ್​. ಅಶ್ವಿನ್​ ಕಿವಿಮಾತು

ನವೀಕರಣ ಹಂತದಲ್ಲಿತ್ತು

ವಿಶ್ವಕಪ್​ ಟೂರ್ನಿ ನಡೆಯುವ ಎಲ್ಲ ಸ್ಟೇಡಿಯಂಗಳು ನವೀಕರಣ ಹಂತದಲ್ಲಿದೆ. ಇದರಲ್ಲಿ ಈಡನ್​ ಗಾರ್ಡನ್ಸ್​ ಕೂಡ ಸೇರಿತ್ತು. ಕಳೆದ ತಿಂಗಳಷ್ಟೇ ಐಸಿಸಿ ಅಧಿಕಾರಿಗಳು ಈ ಕ್ರೀಡಾಂಗಣದ ವ್ಯವಸ್ಥೆಯನ್ನು ನೋಡಲು ಬಂದಿದ್ದರು. ಆದರೆ ಇದೀಗ ಬೆಂಕಿ ಅವಘಡದಿಂದ ಇಲ್ಲಿನ ಡ್ರೆಸಿಂಗ್​ ರೂಮ್​ಗೆ ಹಾನಿಯಾಗಿದೆ.

ಶೀಘ್ರದಲ್ಲೇ ಸಜ್ಜು

ಕ್ರಿಕೆಟ್ ಅಸೋಸಿಯೇಷನ್ ​​ಆಫ್ ಬೆಂಗಾಲ್ (ಸಿಎಬಿ) ಅಧ್ಯಕ್ಷ ಸ್ನೇಹಾಶಿಶ್ ಗಂಗೂಲಿ ಈ ಅವಘಡದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ಘಟನೆ ಬಗ್ಗೆ ಸೂಕ್ತ ತನಿಖೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಉಳಿದಿರುವ ಕೆಲವೇ ದಿನಗಳು ನಮಗೆ ಸವಾಲಿನಿಂದ ಕೂಡಿರುವುದು ನಿಜ, ಆದರೂ ನಾವು ಕ್ಷಿಪ್ರ ಪ್ರಗತಿಯಲ್ಲಿ ಸುಸಜ್ಜಿತ ಡ್ರೆಸ್ಸಿಂಗ್​ ರೂಮ್​ ಸಿದ್ಧಪಡಿಸಲಿದ್ದೇವೆ ಯಾರು ಆತಂಕ ಪಡಬೇಕಿಲ್ಲ ಎಂದು ಹೇಳಿದ್ದಾರೆ.

Exit mobile version