Site icon Vistara News

CWG-2022 | ತೇಜಸ್ವಿನ್‌ ಶಂಕರ್‌ಗೆ ಹೈಜಂಪ್‌ನಲ್ಲಿ ಕಂಚಿನ ಪದಕ

CWG-2022

ಬರ್ಮಿಂಗ್ಹಮ್‌: ಇಂಗ್ಲೆಂಡ್‌ನ ಬರ್ಮಿಂಗ್ಹಮ್‌ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳ ಪದಕದ ಬೇಟೆ ಮುಂದುವರಿದಿದೆ. ಬುಧವಾರ ರಾತ್ರಿ ಭಾರತಕ್ಕೆ ಟ್ರ್ಯಾಕ್ ಮತ್ತು ಫೀಲ್ಡ್‌ ವಿಭಾಗದಲ್ಲಿ ಮೊದಲ ಪದಕ ಲಭಿಸಿದೆ. ಹೈಜಂಪರ್‌ ತೇಜಸ್ವಿನ್‌ ಶಂಕರ್‌ ಪುರುಷರ ಹೈಜಂಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇವರು ಗೆದ್ದಿರುವ ಪದಕದೊಂದಿಗೆ ಭಾರತ ಗೆದ್ದಿರುವ ಒಟ್ಟು ಪದಕಗಳ ಸಂಖ್ಯೆ ೧೮ಕ್ಕೆ ಏರಿಕೆಯಾಗಿದೆ.

೨.೨೨ ಮೀಟರ್‌ ಎತ್ತರ ಜಿಗಿದ ತೇಜಸ್ವಿನ್ ಶಂಕರ್‌ ಅವರಿಗೆ ಕಂಚಿನ ಪದಕ ಲಭಿಸಿತು. ಆರಂಭದಲ್ಲಿ ೨.೫ ಮತ್ತು ೨.೧೦ ಮೀಟರ್‌ ಎತ್ತರವನ್ನು ಸುಲಭವಾಗಿ ದಾಟಿದ ತೆಜಸ್ವಿನ್ ಅವರು ಆ ಬಳಿಕ ೨.೧೯ ಹಾಗೂ ೨.೨೨ ಮೀಟರ್‌ ಎತ್ತರವನ್ನೂ ಸಲೀಸಾಗಿ ಜಿಗಿದರು. ಆದರೆ, ೨.೨೫ ಮೀಟರ್‌ಗೆ ಎತ್ತರಿಸಿದಾಗ ಅವರಿಗೆ ಜಿಗಿಯಲು ಸಾಧ್ಯವಾಗಲಿಲ್ಲ. ಆದರೆ, ನಾಲ್ಕನೇ ಸ್ಥಾನ ಪಡೆದ ಸ್ಪರ್ಧಿಗಿಂತ ವೇಗವಾಗಿ (ಒಂದೇ ಪ್ರಯತ್ನದಲ್ಲಿ) ೨.೨೨ ಮೀಟರ್‌ ಎತ್ತರ ಜಿಗಿದ ಕಾರಣ ತೇಜಸ್ವಿನ್‌ಗೆ ಕಂಚಿನ ಪದಕ ಲಭಿಸಿತು.

ಕೋರ್ಟ್‌ನಿಂದ, ಪದಕದವರೆಗೆ

ತೇಜಸ್ವಿನ್‌ ಶಂಕರ್‌ ಅವರು ಬರ್ಮಿಂಗ್ಹಮ್‌ಗೆ ಸ್ಪರ್ಧೆಗೆ ತಲುಪಿದ್ದೇ ಕೋರ್ಟ್‌ ನಿರ್ದೇಶನ ಕೊಟ್ಟ ಬಳಿಕ. ಅಲ್ಲಿಯವರೆಗೆ ಭಾರತೀಯ ಒಲಿಂಪಿಕ್ ಸಮಿತಿ ಹಾಗೂ ಅಥ್ಲೆಟಿಕ್ಸ್‌ ಫೆಡರೇಷನ್‌ನ ಜತೆಗೆ ಕಾನೂನು ಸಮರ ನಡೆಸಿ ಕೊನೆಗೂ ಅಥ್ಲೆಟ್ಸ್‌ಗಳ ನಿಯೋಗ ಸೇರಲು ಯಶಸ್ವಿಯಾಗಿದ್ದರು.

ಕಾಮನ್ವೆಲ್ತ್‌ಗೆ ತೆರಳಲು ಆಯ್ಕೆ ಬಯಸಿ ತಡವಾಗಿ ಅರ್ಜಿ ಸಲ್ಲಿಸಿದ್ದಾರೆ ಹಾಗೂ ಅವರು ಕನಿಷ್ಠ ಮಾನದಂಡವನ್ನು ಮೀರಿಲ್ಲ ಎಂದು ಅವರಿಗೆ ಕಾಮನ್ವೆಲ್ತ್‌ಗೆ ತೆರಳುವುದಕ್ಕೆ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ ಒಪ್ಪಿಗೆ ಕೊಟ್ಟಿರಲಿಲ್ಲ. ಅಂತಿಮವಾಗಿ ಒಪ್ಪಿಗೆ ಕೊಟ್ಟರೂ ಬರ್ಮಿಂಗ್ಹಮ್ ಕ್ರೀಡಾಕೂಟದ ಆಯೋಜಕರು ಪ್ರವೇಶ ಕಲ್ಪಿಸಲು ನಿರಾಕರಿಸಿದ್ದರು. ಅದಾದ ಮರುದಿನವೇ ಯೂ ಟರ್ನ್‌ ಹೊಡೆದ ಆಯೋಜಕರು ತೇಜಸ್ವಿನ್‌ಗೆ ಅವಕಾಶ ಕಲ್ಪಿಸಲು ಒಪ್ಪಿಗೆ ಕೊಟ್ಟಿದ್ದರು.

ತಕ್ಷಣ ತಾವು ವ್ಯಾಸಂಗ ಮಾಡುತ್ತಿರುವ ಅಮೆರಿಕದಿಂದ ಭಾರತಕ್ಕೆ ವಾಪಸ್ ಬಂದ ತೇಜಸ್ವಿನ್‌ ಬ್ರಿಟನ್ ವೀಸಾಗೆ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಲು ಯಶಸ್ವಿಯಾಗಿದ್ದರು. ಏತನ್ಮಧ್ಯೆ, ಅವರು ಡೆಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ಎನ್‌ಸಿಎಎ ಚಾಂಪಿಯನ್‌ಷಿಪ್‌ನಲ್ಲಿ ೨.೨೭ ಮೀಟರ್‌ ಎತ್ತರ ಜಿಗಿಯುವ ಮೂಲಕ ಕನಿಷ್ಠ ಅರ್ಹತೆ ಪೂರೈಸಿರುವ ತಮಗೆ ಅವಕಾಶ ನಿರಾಕರಿಸಿದ್ದನ್ನು ಪ್ರಶ್ನಿಸಿದ್ದರು. ಅಂತಿಮವಾಗಿ ಕೋರ್ಟ್‌ ತೇಜಸ್ವಿನ್‌ಗೆ ಅವಕಾಶ ನೀಡುವಂತೆ ಆದೇಶ ನೀಡಿತ್ತು. ಇಷ್ಟೆಲ್ಲ ಹೋರಾಟ ನಡೆಸಿದ್ದ ಅವರು ಅಂತಿಮವಾಗಿ ಕಂಚಿನ ಪದಕ ಗೆದ್ದಿದ್ದಾರೆ.

ಇದನ್ನೂ ಓದಿ | CWG- 2022 | ಗುರ್ದೀಪ್‌ಗೆ ಕಂಚಿನ ಗೌರವ, ಭಾರತಕ್ಕೆ ವೇಟ್‌ಲಿಫ್ಟಿಂಗ್‌ನಲ್ಲಿ 10ನೇ ಪದಕ

Exit mobile version