Site icon Vistara News

Election Results 2024: ಲೈಂಗಿಕ ಕಿರುಕುಳ ಆರೋಪಿ ಬ್ರಿಜ್‌ಭೂಷಣ್‌ ಪುತ್ರನಿಗೆ ಭರ್ಜರಿ ಜಯ

Election Results 2024

Election Results 2024: BJP Leader Brij Bhushan's Son Karan Wins From UP's Kaiserganj

ನವದೆಹಲಿ: ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬ್ರಿಜ್‌ಭೂಷಣ್‌ ಶರಣ್​ ಸಿಂಗ್‌(Brij Bhushan) ಅವರ ಕಿರಿಯ ಪುತ್ರ ಕರಣ್‌ ಭೂಷಣ್‌ ಸಿಂಗ್‌ (Karan Bhushan Singh) ಅವರು ಸಮಾಜವಾದಿ ಪಕ್ಷದ ಭಗತ್ ರಾಮ್ ವಿರುದ್ಧ ಕೈಸರ್‌ಗಂಜ್(Kaiserganj) ಲೋಕಸಭಾ ಕ್ಷೇತ್ರದಲ್ಲಿ 1.4 ಲಕ್ಷ ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ತಂದೆ ಬ್ರಿಜ್​ ಭೂಷಣ್(Brij Bhushan)​ 2019ರ ಲೋಕಸಭಾ ಚುನಾವಣೆಯಲ್ಲಿ, ಕೈಸರ್‌ಗಂಜ್‌ನಲ್ಲಿ ಎರಡು ಲಕ್ಷ ಮತಗಳಿಂದ ಗೆದ್ದಿದ್ದರು. 

ಕೈಸರ್‌ಗಂಜ್‌ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಕಳೆದ ಮೂರು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಬ್ರಿಜ್‌ ಭೂಷಣ್‌ ಸಿಂಗ್‌ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಬಂದ ಕಾರಣದಿಂದ ನಾಲ್ಕನೇ ಬಾರಿ ಟಿಕೆಟ್‌ ಕೈತಪ್ಪಿತ್ತು. ಹೀಗಾಗಿ ಅವರ ಪುತ್ರನಿಗೆ ಬಿಜೆಪಿ ಮಣೆ ಹಾಕಿತ್ತು. ಇದೀಗ ತಂದೆಯಂತೆ ಮಗನೂ ಕೂಡ ಭರ್ಜರಿ ಅಂತರದ ಗೆಲುವು ಸಾಧಿಸಿ ಕೈಸರ್‌ಗಂಜ್​ನಲ್ಲಿ ಪ್ರಾಬಲ್ಯ ಮೆರೆದಿದ್ದಾರೆ.

ಮಗನ ನಾಮನಿರ್ದೇಶನ ಮಾಡುವ ವೇಳೆ ಕೈಸರ್‌ಗಂಜ್‌ನಲ್ಲಿ ಬೃಹತ್​ ರ‍್ಯಾಲಿ ಮಾಡುವ ಮೂಲಕ ಬ್ರಿಜ್‌ಭೂಷಣ್‌ ಭರ್ಜರಿ ಶಕ್ತಿ ಪ್ರದರ್ಶನ ಮಾಡಿದ್ದರು. ಈ ರ‍್ಯಾಲಿಯಲ್ಲಿ 10,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಇದರಲ್ಲಿ ಶಾಸಕರು, ಎಂಎಲ್‌ಸಿಗಳು, ಜಿಲ್ಲಾ ಪಂಚಾಯತ್ ಮುಖ್ಯಸ್ಥರು, ಹತ್ತಿರದ ಜಿಲ್ಲೆಗಳ ಬಿಜೆಪಿಯ ಸ್ಥಳೀಯ ನಾಯಕರು, ಅಯೋಧ್ಯೆಯ ಪ್ರಮುಖ ಧಾರ್ಮಿಕ ಮುಖಂಡರು ಸೇರಿದ್ದರು. ಕರಣ್ ಭೂಷಣ್ ಸಿಂಗ್ ಉತ್ತರ ಪ್ರದೇಶದ ಕುಸ್ತಿ ಸಂಘದ ಅಧ್ಯಕ್ಷರಾಗಿದ್ದಾರೆ. ಗೊಂಡಾದ ನವಾಬ್‌ಗಂಜ್‌ನಲ್ಲಿರುವ ಸಹಕಾರಿ ಗ್ರಾಮಾಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷರಾಗಿಯೂ ಜನ ಸಂಪರ್ಕ ಹೊಂದಿದ್ದಾರೆ.

ರಾಮ ಮಂದಿರ ನಿರ್ಮಿಸಿದರೂ ಅಯೋಧ್ಯೆಯಲ್ಲಿ ಬಿಜೆಪಿಗೆ ದಾರುಣ ಸೋಲು!


ಈ ವರ್ಷದ ಆರಂಭದಲ್ಲಿ ಭವ್ಯವಾದ ಶ್ರೀರಾಮ ಮಂದಿರದ (Ayodhya Ram Mandir) ಪ್ರಾಣಪ್ರತಿಷ್ಠೆಯನ್ನು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ (Ayodhya election results 2024) ಮಾಡಲಾಯಿತು. ಆದರೆ ಅಯೋಧ್ಯೆಯನ್ನು ಒಳಗೊಂಡಿರುವ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ (Faizabad Election Result) ಎಸ್‌ಪಿ (SP) ಅಭ್ಯರ್ಥಿಯ ಮುಂದೆ ಬಿಜೆಪಿ (BJP) ಅಭ್ಯರ್ಥಿ ಸೋತಿದ್ದಾರೆ.

ಇದನ್ನೂ ಓದಿ Election Results 2024 : ಮೋದಿಯ ಸೋಲು ಎಂದ ಖರ್ಗೆ, ಸಂವಿಧಾನ ಉಳಿಸಿದೆವು ಎಂದ ರಾಹುಲ್​ ಗಾಂಧಿ

ಜನವರಿಯಲ್ಲಿ ರಾಮ ಮಂದಿರದಲ್ಲಿ ನಡೆದ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ, ಇಡೀ ಭಾರತದಲ್ಲಿಯೇ ಬಿಜೆಪಿಯ ಪುನಃ ಪ್ರತಿಷ್ಠಾಪನೆಗೆ ಮೂಲವಾಗಲಿದೆ ಎಂದು ಭಾವಿಸಲಾಗಿತ್ತು. ಕಡೇ ಪಕ್ಷ ಉತ್ತರ ಪ್ರದೇಶದಲ್ಲಾದರೂ ಭಾರಿ ಮೆಜಾರಿಟಿಯಲ್ಲಿ ಬಿಜೆಪಿ ಬರಲಿದೆ ಎಂದು ತರ್ಕಿಸಲಾಗಿತ್ತು. ಆದರೆ ಅದು ಆಗಿಲ್ಲ. ಅಯೋಧ್ಯೆಯನ್ನು ಒಳಗೊಂಡ ಫೈಜಾಬಾದ್‌ ಕ್ಷೇತ್ರದಲ್ಲಿ ಸಮಾಜವಾದಿ ಪಾರ್ಟಿ ಅಭ್ಯರ್ಥಿ ಅವಧೇಶ್ ಪ್ರಸಾದ್ ಮುಂದೆ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಸೋತಿದ್ದಾರೆ.

ಫೈಜಾಬಾದ್‌ನಿಂದ ಮೂರು ಬಾರಿ ಸಂಸದರಾಗಿರುವ ಸಿಂಗ್ ಅವರ ಈ ಸಲದ ಸೋಲು ಅಚ್ಚರಿದಾಯಕವಾಗಿದೆ. ಸಮಾಜವಾದಿ ಪಕ್ಷದ ಅಭ್ಯರ್ಥಿಗಿಂತ 10,000ಕ್ಕೂ ಅಧಿಕ ಮತಗಳ ಅಂತರದಿಂದ ಸಿಂಗ್‌ ಹಿಂದುಳಿದರು. ಫೈಜಾಬಾದ್ ಜಿಲ್ಲೆಯನ್ನು 2018ರಲ್ಲಿ ಅಧಿಕೃತವಾಗಿ ಅಯೋಧ್ಯೆ ಎಂದು ಮರುನಾಮಕರಣ ಮಾಡಲಾಯಿತು. ಆದಾಗ್ಯೂ, ಲೋಕಸಭಾ ಸ್ಥಾನವನ್ನು ಇನ್ನೂ ಫೈಜಾಬಾದ್ ಎಂದು ಕರೆಯಲಾಗುತ್ತದೆ.

ಉತ್ತರ ಪ್ರದೇಶದ 43 ಲೋಕಸಭಾ ಸ್ಥಾನಗಳಲ್ಲಿ ಇಂಡಿಯಾ ಬ್ಲಾಕ್ ಮುನ್ನಡೆ ಸಾಧಿಸಿದೆ. ಮಧ್ಯಾಹ್ನದ ಹೊತ್ತಿಗೆ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಕ್ರಮವಾಗಿ 34 ಮತ್ತು ಒಂಬತ್ತು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದವು. 2019ರಲ್ಲಿ 62 ಸ್ಥಾನ ಗಳಿಸಿದ್ದ ಬಿಜೆಪಿ, ಈ ಬಾರಿ 34 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಪ್ರಧಾನಿ ನರೇಂದ್ರ ಮೋದಿ ವಾರಾಣಸಿ ಕ್ಷೇತ್ರದಲ್ಲಿ ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಮತಗಳ ಅಂತರ ಕಳೆದ ಸಲಕ್ಕಿಂತ ಕಡಿಮೆಯಾಗಿದೆ. ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿ ಗೆಲುವು ಸಾಧಿಸಿದರೆ, ಸ್ಮೃತಿ ಇರಾನಿ ಅಮೇಠಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ವಿರುದ್ಧ ಸೋತಿದ್ದಾರೆ.

Exit mobile version