Site icon Vistara News

ಎಲ್ಗರ್​-ಜಾನ್ಸೆನ್‌ ಬೊಂಬಾಟ್​ ಬ್ಯಾಟಿಂಗ್​; 163 ರನ್​ ಮುನ್ನಡೆ ಸಾಧಿಸಿದ ದಕ್ಷಿಣ ಆಫ್ರಿಕಾ

Marco Jansen gave Dean Elgar great support and got a half-century of his own

ಜೊಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾದ ಯುವ ವೇಗಿ ಮಾರ್ಕೊ ಜಾನ್ಸೆನ್‌ ಮತ್ತು ಅನುಭವಿ ಆಟಗಾರ ಡೀನ್​ ಎಲ್ಗರ್​ ಅವರ ಅಮೋಘ ಜತೆಯಾಟದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಭಾರತ ವಿರುದ್ಧ ಮೊದಲ ಇನಿಂಗ್ಸ್​ನಲ್ಲಿ 163 ರನ್​ ಮುನ್ನಡೆ ಸಾಧಿಸಿದೆ. ಭಾರತ 163 ರನ್​ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ ಆರಂಭಿಸಿದೆ.

ಇಲ್ಲಿನ ಸೆಂಚುರಿಯನ್​ ಸೂಪರ್​ಸ್ಪೋರ್ಟ್ಸ್​ ಪಾರ್ಕ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಟೆಸ್ಟ್​ ಪಂದ್ಯದಲ್ಲಿ 5 ವಿಕೆಟ್​ಗೆ 256 ರನ್​ ಗಳಿಸಿದ್ದಲ್ಲಿಂದ ಮೂರನೇ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ ಉತ್ತಮ ಆಟವಾಡುವ ಮೂಲಕ 408 ರನ್​ ಗಳಿಸಿ 163 ರನ್​ ಮುನ್ನಡೆ ಸಾಧಿಸಿಕೊಂಡಿದೆ. ನಾಯಕ ಟೆಂಬ ಬವುಮಾ ಅವರು ಕ್ಷೇತ್ರ ರಕ್ಷಣೆಯ ವೇಳೆ ಗಾಯಗೊಂಡು ಪಂದ್ಯದಿಂದ ಹೊರಗುಳಿದ ಪರಿಣಾಮ 9 ವಿಕೆಟ್​ಗೆ ಪಂದ್ಯ ಮುಗಿಯಿತು. ಒಂದೊಮ್ಮೆ ಅವರು ಕೂಡ ಬ್ಯಾಟಿಂಗ್​ ನಡೆಸುತ್ತಿದ್ದರೆ ಇನ್ನೂ ಹೆಚ್ಚಿನ ಲೀಡ್​ ಪಡೆಯುವ ಜತೆಗೆ ಅಜೇಯ 84 ರನ್​ ಗಳಿಸಿದ್ದ ಮಾರ್ಕೊ ಜಾನ್ಸೆನ್​ಗೆ ಶತಕ ಬಾರಿಸುವ ಅವಕಾಶ ಇರುತ್ತಿತ್ತು.

ಇದನ್ನೂ ಓದಿ IND vs SA: ದಕ್ಷಿಣ ಆಫ್ರಿಕಾದಲ್ಲಿ ಕನ್ನಡದ ಕಂಪು ಸಾರಿದ ಕೆಎಲ್​ ರಾಹುಲ್​-ಪ್ರಸಿದ್ಧ್​ ಕೃಷ್ಣ

ದ್ವಿಶತಕ ವಂಚಿತನಾದ ಎಲ್ಗರ್​

ಮೂರನೇ ದಿನದಾಟದಲ್ಲಿ ದಕ್ಷಿಣ ಆಫ್ರಿಕಾ 152 ರನ್​ ಬಾರಿಸಿತು. 140 ರನ್​ ಗಳಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದ ಡೀನ್​ ಎಲ್ಗರ್​ ಮೂರನೇ ದಿನ 45 ರನ್​ ಬಾರಿಸಿದರು. ಅವರ ಒಟ್ಟು ಗಳಿಕೆ 185 ರನ್​. ಈ ಸೊಗಸಾದ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 28 ಬೌಂಡರಿ ದಾಖಲಾಯಿತು. ದ್ವಿಶತಕದತ್ತ ಮುನ್ನುಗ್ಗುತ್ತಿದ್ದ ಅವರನ್ನು ಶಾರ್ದೂಲ್​ ಠಾಕೂರ್​ ಅವರು ವೈಡ್​ ಲೈನ್​ನತ್ತ ಬೌಲಿಂಗ್​ ಎಸೆದು ಕ್ಯಾಚ್​ ನೀಡುವಂತೆ ಮಾಡಿ ವಿಕೆಟ್​ ಕಬಳಿಸಿದರು.

ಆಲ್​ರೌಂಡರ್​ ಪ್ರದರ್ಶನ ತೋರಿದ ಜಾನ್ಸೆನ್​

ಬೌಲಿಂಗ್ ಆಲ್​ರೌಂಡರ್​ ಆಗಿರುವ ಮಾರ್ಕೊ ಜಾನ್ಸೆನ್​ ಈ ಪಂದ್ಯದಲ್ಲಿ ಆಲ್​ರೌಂಡರ್​ ಪ್ರದರ್ಶನ ತೋರುವ ಮೂಲಕ ಅಜೇಯ ಅರ್ಧಶತಕ ಬಾರಿಸಿ ತಂಡದ ಬೃಹತ್​ ಮೊತ್ತಕ್ಕೆ ಕಾರಣರಾದರು. ಡೀನ್​ ಎಲ್ಗರ್​ ಜತೆ ಸೇರಿಕೊಂಡು ಉತ್ತಮ ಇನಿಂಗ್ಸ್​ ಕಟ್ಟಿ ಭಾರತೀಯ ಬೌಲರ್​ಗಳನ್ನು ಕಾಡಿದರು. ಕೊನೆಗೂ ಅವರು ಅಜೇಯರಾಗಿ ಉಳಿದರು. 11 ಬೌಂಡರಿ ಮತ್ತು 1 ಸಿಕ್ಸರ್​ ಬಾರಿಸಿ ಅಜೇಯ 84 ರನ್​ ಗಳಿಸಿದರು. ಬವುಮಾ ಗಾಯಗೊಂಡು ಬ್ಯಾಟಿಂಗ್​ ನಡೆಸದ ಕಾರಣ ಅವರಿಗೆ ಶತಕ ಬಾರಿಸುವ ಅವಕಾಶ ಕೈ ತಪ್ಪಿತು.

ಮಾರ್ಕೊ ಜಾನ್ಸೆನ್​ ಮತ್ತು ಡೀನ್​ ಎಲ್ಗರ್​ ಜೋಡಿ 6ನೇ ವಿಕೆಟ್​ಗೆ ಭರ್ತಿ 111 ರನ್​ಗಳ ಜತೆಯಾಟ ನಡೆಸಿತು. ಕೆಣಕಿದ ಪ್ರಸಿದ್ಧ್​ ಕೃಷ್ಣಗೆ ಸಿಕ್ಸರ್​ ರುಚಿ ತೋರಿಸಿದ ಜೆರಾಲ್ಡ್ ಕೋಟ್ಜಿ ಒಂದು ಹಂತದಲ್ಲಿ ಅಪಾಯಕಾರಿಯಾಗುವ ಸೂಚನೆ ನೀಡುದರೂ ಅವರ ಬ್ಯಾಟಿಂಗ್​ ಅವೇಶಕ್ಕೆ ಆರ್​.ಅಶ್ವಿನ್​ ಬ್ರೇಕ್​ ಹಾಕಿದರು. 18 ರನ್​ ಗಳಿಸಿ ಸಿರಾಜ್​ಗೆ ಕ್ಯಾಚ್​ ನೀಡಿ ಪೆವಿಲಿಯನ್​ ಸೇರಿದರು. 5 ವಿಕೆಟ್​ ಕಿತ್ತು ಮಿಂಚಿದ್ದ ರಬಾಡ ಅವರನ್ನು ಬುಮ್ರಾ ಕ್ಲೀನ್​ ಬೌಲ್ಡ್​ ಮಾಡಿದರು.

ಮಿಂಚಿದ ಬುಮ್ರಾ

ಭಾರತ ಪರ ಜಸ್​ಪ್ರೀತ್​ ಬುಮ್ರಾ 69 ನೀಡಿ 4 ವಿಕೆಟ್​ ಕಿತ್ತು ಯಶಸ್ವಿ ಬೌಲರ್​ ಎನಿಸಿಕೊಂಡರು. ಮೊಹಮ್ಮದ್​ ಸಿರಾಜ್​ 2 ವಿಕೆಟ್​ ಪಡೆದರು. ಉಳಿದಂತೆ ಠಾಕೂರ್​, ಅಶ್ವಿನ್​ ಮತ್ತು ಪ್ರಸಿದ್ಧ್​ ತಲಾ ಒಂದು ವಿಕೆಟ್​ ಕಿತ್ತರು. ಶಾದೂಲ್​ ಕೊಂಚ ದುಬಾರಿಯಾಗಿ ಕಂಡು ಬಂದರು.

Exit mobile version