ಹರಾರೆ : ಭಾರತ ಹಾಗೂ ಜಿಂಬಾಬ್ವೆ ನಡುವಿನ ಏಕದಿನ ಸರಣಿಯ (IND vs ZIM ODI) ಮೊದಲ ಪಂದ್ಯ ಇಂದು ಹರಾರೆಯ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಗುರುವಾರ ನಡೆಯಲಿದ್ದು, ಏಕಾಏಕಿ ನಾಯಕನ ಸ್ಥಾನವನ್ನು ಪಡೆದುಕೊಂಡಿರುವ ಕೆ.ಎಲ್ ರಾಹುಲ್ ಅವರ ಕಡೆಗೆ ಎಲ್ಲರ ಕಣ್ಣು ನೆಟ್ಟಿದ್ದರೆ, ಸರಣಿ ಗೆಲ್ಲುವ ಕಡೆಗೆ ಭಾರತ ತಂಡ ಗಮನ ಕೇಂದ್ರೀಕರಿಸಲಿದೆ. ಇಂಗ್ಲೆಂಡ್ ಹಾಗೂ ವೆಸ್ಟ್ ಪ್ರವಾಸದ ಸೀಮಿತ ಓವರ್‌ಗಳ ಪಂದ್ಯಗಳ ಸರಣಿಯಲ್ಲಿ ವಿಜಯ ಸಾಧಿಸಿರುವ ಭಾರತ ತಂಡಕ್ಕೆ ಏಷ್ಯಾ ಕಪ್‌ಗೆ ಮೊದಲು ಮತ್ತೊಂದು ಸರಣಿಯನ್ನು ವಶಪಡಿಕೊಳ್ಳುವುದು ಗುರಿಯಾಗಿದೆ. ಅತ್ತ ಜಿಂಬಾಬ್ವೆ ತಂಡ ಬಲಿಷ್ಠ ಭಾರತಕ್ಕೆ ಸೆಡ್ಡು ಹೊಡೆಯುವ ಮೂಲಕ ಮುಂದಿನ ಏಕ ದಿನ ವಿಶ್ವ ಕಪ್ ಟೂರ್ನಿಗೆ ನೇರ ಪ್ರವೇಶ ಪಡೆಯುವ ಯೋಜನೆ ರೂಪಿಸಿಕೊಂಡಿದೆ.
ಗಾಯದ ಸಮಸ್ಯೆ ಹಾಗೂ ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ಕನ್ನಡಿಗ ಕೆ. ಎಲ್ ರಾಹುಲ್ ಭಾರತ ತಂಡದ ನೇತೃತ್ವ ವಹಿಸಿಕೊಂಡಿದ್ದು, ನಾಯಕತ್ವಕ್ಕೆ ಸಿಕ್ಕಾಪಟ್ಟೆ ಪೈಪೋಟಿ ಇರುವ ಮಧ್ಯೆ ಅವರಿಗೆ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಲು ಇದು ಉತ್ತಮ ಅವಕಾಶವಾಗಿದೆ. ಅಂತೆಯೇ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಜಿಂಬಾಬ್ವೆಯಲ್ಲಿ ಆಡುವ ಅವಕಾಶ ಪಡೆದುಕೊಂಡಿರುವ ಕಿರಿಯ ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಲು ಉತ್ತಮ ಅವಕಾಶ ಇದಾಗಿದೆ. ಹೀಗಾಗಿ ದುರ್ಬಲ ಎನಿಸಿಕೊಂಡಿರುವ ಜಿಂಬಾಬ್ವೆ ವಿರುದ್ಧ ಭಾರತ ತಂಡ ಭರ್ಜರಿ ಪ್ರದರ್ಶನ ನೀಡುವ ಎಲ್ಲ ಸಾಧ್ಯತೆಗಳಿವೆ.
ಯಾರೆಲ್ಲ ಆಡಬಹುದು?
ರಾಹುಲ್ ತಂಡಕ್ಕೆ ಮರಳಿರುವ ಕಾರಣ ಅವರು ಶಿಖರ್ ಧವನ್ ಜತೆ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಉತ್ತಮ ಪ್ರದರ್ಶನ ನೀಡಿರುವ ಶುಬ್ಮನ್ ಗಿಲ್‌ಗೆ ಈ ಪಂದ್ಯದಲ್ಲಿ ಆರಂಭಿಕರಾಗಿ ಬ್ಯಾಟಿಂಗ್‌ಗೆ ಇಳಿಯುವ ಅವಕಾಶ ನಷ್ಟವಾಗಲಿದೆ. ಅವರು ಮೂರು ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿಯಬಹುದು. ರಾಹುಲ್ ತ್ರಿಪಾಠಿ ಮಧ್ಯಮ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆಯಲಿದ್ದು, ವಿಕೆಟ್‌ಕೀಪರ್ ಕೋಟಾ ಬಹುತೇಕ ಸಂಜು ಸ್ಯಾಮ್ಸನ್ ಪಾಲಾಗಬಹುದು. ಇಶಾನ್ ಕಿಶನ್ ಇನ್ನೊಬ್ಬ ವಿಕೆಟ್ ಕೀಪರ್ ಆದರೂ ಅವರಿಗೆ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ನೀಡುವ ಸಾಧ್ಯತೆ ಕಡಿಮೆ ಇದೆ. ದೀಪಕ್ ಹೂಡಾ ಆ ಬಳಿಕ ಬ್ಯಾಟಿಂಗ್‌ಗೆ ಇಳಿಸುವ ಅವಕಾಶ ಪಡೆಯಬಹುದು. ಅಕ್ಷರ್ ಪಟೇಲ್ ಆಡಲು ಅವಕಾಶ ಪಡೆಯಬಹುದಾದ ಇನ್ನೊಬ್ಬ ಆಲ್‌ರೌಂಡರ್. ವೇಗದ ಬೌಲಿಂಗ್‌ನಲ್ಲಿ ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ ಕರಾಮತ್ತು ತೋರಲಿದ್ದರೆ, ದೀಪಕ್ ಚಾಹರ್ ಅವಕಾಶ ಪಡೆಯುವ ಸಾಧ್ಯತೆಗಳಿವೆ. ಕುಲ್ದೀಪ್ ಯಾದವ್ ಸ್ಪಿನ್ ಅಯ್ಕೆಯ ಮತ್ತೊಬ್ಬರು ಬೌಲರ್.
ಇತ್ತೀಚೆಗೆ ಜಿಂಬಾಬ್ವೆಗೆ ಪ್ರವಾಸ ಬಂದಿರುವ ಬಾಂಗ್ಲಾದೇಶ ತಂಡವನ್ನು ಜಿಂಬಾಬ್ವೆ ಬಳಗ ಏಕದಿನ ಸರಣಿಯಲ್ಲಿ ೨-೧ ಅಂತರದಿಂದ ಸೋಲಿಸಿತ್ತು. ಹೀಗಾಗಿ ಎದುರಾಳಿ ತಂಡವನ್ನು ದುರ್ಬಲ ಎಂದು ಭಾರತ ತಂಡ ಪರಿಗಣಿಸುವಂತಿಲ್ಲ. ಸಿಕಂದರ್ ರಾಜಾ, ಇನೋಸೆಂಟ್ ಕಯಿಯಾ, ರಿಯಾನ್ ಬರ್ಲ್, ಲೂಕ್ ಜಾಂಗ್ವೆ, ರಿಚರ್ಡ್ ಎನ್‌ಗರವ, ಅವರಂಥ ಯುವ ಆಟಗಾರರು ಭಾರತಕ್ಕೆ ತಿರುಗೇಟು ನೀಡಲ ಸಕಲ ಸಿದ್ಧತೆಗಳನ್ನು ನಡೆಸಿಕೊಂಡಿರುತ್ತಾರೆ.
ತಂಡಗಳು
ಭಾರತ: ಕೆ. ಎಲ್ ರಾಹುಲ್ ನಾಯಕ (ನಾಯಕ), ಶಿಖರ್ ಧವನ್ (ಉಪನಾಯಕ), ಋತುರಾಜ್ ಗಾಯಕ್ವಾಡ್, ಶುಬ್ಮನ್ ಗಿಲ್, ದೀಪಕ್ ಹೂಡ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಆವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್.
ಜಿಂಬಾಬ್ವೆ ತಂಡ
ರೆಗಿನ್ ಚಕಬ್ವಾ (ನಾಯಕ), ರಿಯಾನ್ ಬರ್ಲ್, ಟನಕಾ, ಬ್ರಾಡ್ಲಿ ಎವಾನ್ಸ್, ಲೂಜ್ ಜಾಂಗ್ವೆ, ಇನೋಸೆಂಟ್ ಕೈಯಾ, ತುಕಾಡ್ಜ್‌ವಾನೆಶ್ ಕೈತಾನೊ, ಕ್ಲೈವ್ ಮದಂಡೆ, ವೆಸ್ಸೆಲಿ ಮಾಧೆವೆರೆ, ತಡಿವಾನಾಶೆ ಮರುಮಣಿ, ಜಾನ್ ಮಸಾರಾ, ಟೋನಿ ಮುನಿಯೋಂಗಾ, ರಿಚರ್ಡ್ ಎನ್‌ಗರವ, ವಿಕ್ಟರ್ ನ್ಯುಚಿ, ಸಿಕಂದರ್ ರಾಜಾ, ಮಿಲ್ಟನ್ ಶುಂಭಾ, ಡೊನಾಲ್ಡ್ ತಿರಿಪಾನೊ.
ಪಿಚ್ ಹೇಗಿರಲಿದೆ?
ಬಾಂಗ್ಲಾದೇಶ ವಿರುದ್ಧದ ಕಳೆದ ಮೂರು ಪಂದ್ಯಗಳ ಫಲಿತಾಂಶವನ್ನು ಗಮನಿಸಿದರೆ ಹರಾರೆ ಪಿಚ್ ಬ್ಯಾಟಿಂಗ್‌ಗೆ ಪೂರಕವಾಗಿದೆ. ಆದರೂ ಪಂದ್ಯ ಬೇಗ ಆರಂಭವಾಗಲಿರುವ ಕಾರಣ ಬೌಲರ್‌ಗಳಿಗೂ ಅಲ್ಪ ನೆರವಾಗುವ ಎಲ್ಲ ಸಾಧ್ಯತೆಗಳಿವೆ. ಸ್ಥಳೀಯ ತಾಪಮಾನ ೨೭ ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಬಿಸಿಲಿನಿಂದ ಕೂಡಿದ ವಾತಾವರಣ ಇರಲಿದೆ.
ಪಂದ್ಯದ ವಿವರ
ಆರಂಭ: ಮಧ್ಯಾಹ್ನ ೧೨.೩೦ಕ್ಕೆ(ಭಾರತೀಯ ಕಾಲಮಾನ)
ತಾಣ : ಹರಾರೆ ಸ್ಪೋರ್ಟ್ಸ್ ಕ್ಲಬ್
ನೇರ ಪ್ರಸಾರ : ಪಂದ್ಯಗಳು ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ ಚಾನೆಲ್‌ನಲ್ಲಿ (Sony Sports Network) ನೇರ ಪ್ರಸಾರವಾಗಲಿದೆ. ಹಾಗೆಯೇ ಸೋನಿ ಲೈವ್ ಆ್ಯಪ್ನಲ್ಲಿ ಲೈವ್ ಸ್ಟ್ರೀಮಿಂಗ್ ಸಿಗಲಿದೆ.
ಇದನ್ನೂ ಓದಿ | Amrit Mahotsav | ಹರ್ ಘರ್ ಗೀತೆಯಲ್ಲಿ ಕನ್ನಡಿಗರನ್ನು ಪ್ರತಿನಿಧಿಸಿದ ಕೆ. ಎಲ್ ರಾಹುಲ್