ಕೊಲೊಂಬೊ: ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಸಂಪೂರ್ಣ ವೈಫಲ್ಯ ಎದುರಿಸಿದ ಭಾರತ ಎ ತಂಡ ಉದಯೋನ್ಮುಖ ತಂಡಗಳ ಏಷ್ಯಾ ಕಪ್ (Emerging Asia Cup 2023) ಟೂರ್ನಿಯ ಫೈನಲ್ನಲ್ಲಿ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ ಎ ವಿರುದ್ಧ 128 ರನ್ಗಳ ಹೀನಾಯ ಸೋಲಿಗೆ ಒಳಗಾಗಿದೆ. ಈ ಮೂಲಕ ಕಪ್ ಗೆಲ್ಲುವ ಅವಕಾಶದಿಂದ ವಂಚಿತಗೊಂಡು ನಿರಾಸೆಗೆ ಒಳಗಾಗಿದೆ. ಪಾಕಿಸ್ತಾನ ತಂಡದ ಆಟಗಾರರು ಪಂದ್ಯದುದ್ದಕ್ಕೂ ಪಾರಮ್ಯ ಮೆರೆದು ಭಾರತ ತಂಡಕ್ಕೆ ಸೋಲುಣಿಸಿ ಟ್ರೊಫಿ ಗೆದ್ದು ಸಂಭ್ರಮಿಸಿದರು.
🏆 𝐂𝐇𝐀𝐌𝐏𝐈𝐎𝐍𝐒 🏆
— Pakistan Cricket (@TheRealPCB) July 23, 2023
Pakistan Shaheens defend their #ACCMensEmergingTeamsAsiaCup title 🤩💪#BackTheBoysInGreen pic.twitter.com/ReP9mJnEra
ಇಲ್ಲಿನ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಬ್ಯಾಟಿಂಗ್ ಆಹ್ವಾನ ಪಡೆದ ಪಾಕಿಸ್ತಾನ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 352 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ 40 ಓವರ್ಗಳಲ್ಲಿ 224 ರನ್ಗಳಿಗೆ ಆಲ್ಔಟ್ ಆಗುವ ಮೂಲಕ ಹೀನಾಯ ಸೋಲಿಗೆ ಒಳಗಾಯಿತು.
ಡೊಡ್ಡ ಮೊತ್ತಕ್ಕೆ ಪ್ರತಿಯಾಗಿ ಬ್ಯಾಟ್ ಮಾಡಲು ಮುಂದಾದ ಭಾರತ ತಂಡದಿಂದ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮೂಡಲಿಲ್ಲ. ಆರಂಭಿಕ ಬ್ಯಾಟರ್ಗಳಾದ ಸಾಯಿ ಸುದರ್ಶನ್ (29) ಹಾಗೂ ಅಭಿಷೇಕ್ ಶರ್ಮಾ (61) ಮೊದಲ ವಿಕೆಟ್ಗೆ 64 ರನ್ಗಳ ಜತೆಯಾಟ ನೀಡುವ ಮೂಲಕ ವಿಶ್ವಾಸ ಮೂಡಿಸಿದರು. ಆದರೆ, ಆ ಬಳಿಕ ಪಾಕಿಸ್ತಾನದ ಬೌಲರ್ಗಳು ನಿಧಾನವಾಗಿ ಮೇಲುಗೈ ಸಾಧಿಸಲು ಆರಂಭಿಸಿದರು. ನಿಕಿನ್ ಜೋಸ್ 11 ರನ್ ಬಾರಿಸಿ ಔಟಾದರೆ, ನಾಯಕ ಯಶ್ ಧುಲ್ 39 ರನ್ ಪೇರಿಸಿದರು. ಧುಲ್ ವಿಕೆಟ್ ಪತನಗೊಂಡ ಬಳಿಕ ಭಾರತ ತಂಡದ ಬ್ಯಾಟರ್ಗಳು ಹೆಚ್ಚು ಪ್ರತಿರೋಧ ತೋರಲಿಲ್ಲ. ನಿಶಾಂತ್ ಸಿಂಧು 10 ರನ್ ಬಾರಿಸಿದರೆ ಧ್ರುವ್ ಜುರೇಲ್ 9 ರನ್ಗಳಿಗೆ ಸೀಮಿತಗೊಂಡರು. ರಿಯಾನ್ ಪರಾಗ್ 14 ರನ್ ಬಾರಿಸಿ ಔಟಾದರೆ ಹರ್ಷಿತ್ ರಾಣಾ 14 ರನ್ ಪೇರಿಸಿದರು.
ತೈಯಬ್ ತಾಹಿರ್ ಶತಕ
ಮೊದಲು ಬ್ಯಾಟ್ ಮಾಡಲು ಅವಕಾಶ ಪಡೆದ ಪಾಕಿಸ್ತಾನ ತಂಡ ಆರಂಭದಲ್ಲೇ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ಮೊದಲ ವಿಕೆಟ್ಗೆ 121 ರನ್ ಗಳಿಸಿದ ಪಾಕ್ ತಂಡ ಭಾರತದ ಬೌಲರ್ಗಳ ಬೆವರಿಳಿಸಿತು. ಸೈಮ್ ಅಯೂಬ್ 59 ರನ್ ಬಾರಿಸಿದರೆ ಎಸ್ ಫರ್ಹಾನ್ 65 ರನ್ ಗಳಿಸಿದರು. ಮೂರನೇ ಕ್ರಮಾಂಕದಲ್ಲಿ ಒಮೈರ್ ಯೂಸುಫ್ 5 ರನ್ ಗಳಿಸಿದರು.
ಇದನ್ನೂ ಓದಿ : World Cup 2023 : ಪಾಕ್ ತಂಡಕ್ಕೆ ಇನ್ನೂ ಅಭದ್ರತೆ; ಪರಿಶೀಲನೆಗೆ ಬರುತ್ತದಂತೆ ನಿಯೋಗ!
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಪಾಕ್ ಬ್ಯಾಟರ್ ತೈಯಬ್ ತಾಹಿರ್ 71 ಎಸೆತಗಳಲ್ಲಿ 12 ಫೋರ್ ಹಾಗೂ 4 ಸಿಕ್ಸರ್ ಸಮೇತ 108 ರನ್ ಬಾರಿಸಿ ಮಿಂಚಿದರು. ಅವರ ಸ್ಫೋಟಕ ಬ್ಯಾಟಿಂಗ್ ಪ್ರಭಾವದಿಂದ ಪಾಕ್ ತಂಡ ಸ್ಕೋರ್ ಬೋರ್ಡ್ ಬೆಳೆಯಿತು. ಕೊನೆಯಲ್ಲಿ ಮುಬಾಸಿರ್ ಖಾನ್ (35 ರನ್), ಮೆಹ್ರಾನ್ ಮುಮ್ತಾಜ್ (13). ಮುಹಮ್ಮದ್ ವಾಸಿಮ್ (17) ವೇಗದಲ್ಲಿ ರನ್ ಗಳಿಸಿ ತಂಡದ ಮೊತ್ತವನ್ನು 350ರ ಗಡಿ ದಾಟಿಸಿದರು.