ಕೊಲಂಬೊ: ಎಮರ್ಜಿಂಗ್ ಏಷ್ಯಾ ಕಪ್(Emerging Asia Cup) ಕ್ರಿಕೆಟ್ ಕೂಟದಲ್ಲಿ ಭಾರತ ತಂಡ ಫೈನಲ್ ಪ್ರವೇಶಿಸಿದೆ. ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬಾಂಗ್ಲಾದೇಶ ವಿರುದ್ಧ 51 ರನ್ನುಗಳಿಂದ ಗೆದ್ದು ಬೀಗಿದೆ. ಆದರೆ ಈ ಪಂದ್ಯದಲ್ಲಿ ನಡೆದ ಘಟನೆಯೊಂದರ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್(viral video) ಆಗಿದೆ.
ಯುವರಾಜ್‌ಸಿನ್ಹ್ ದೋಡಿಯಾ(Yuvrajsinh Dodiya) ಅವರ ಓವರ್ನಲ್ಲಿ ಬಾಂಗ್ಲಾದ ಅನುಭವಿ ಆಟಗಾರ ಸೌಮ್ಯ ಸರ್ಕಾರ್(Soumya Sarkar) ಅವರು ರಕ್ಷಣಾತ್ಮ ಆಟವಾಡಲು ಪ್ರಯತ್ನಿಸಿದರು. ಆದರೆ ಚೆಂಡು ಬ್ಯಾಟ್ನ ಸೈಡ್ಗೆ ಸವರಿ ಮೇಲೆ ಜಿಗಿಯಿತು. ಇದೇ ವೇಳೆ ಸ್ಲಿಪ್ನಲ್ಲಿ ನಿಂತಿದ್ದ ನಿಕಿನ್ ಜೋಸ್ ಚಿರತೆ ವೇಗದಲ್ಲಿ ಹಾರಿ ಈ ಕ್ಯಾಚ್ ಪಡೆದರು. ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ವಿಕೆಟ್ ಪಡೆದ ಖಷಿಯಲ್ಲಿ ಭಾರತೀಯ ಆಟಗಾರರು ಸಂಭ್ರಮಾಚರಣೆ ನಡೆಸಿದರು. ಆದರೆ ಇದು ಔಟ್ ಇಲ್ಲವೆಂದು ಸೌಮ್ಯ ಸರ್ಕಾರ್ ವಾದಿಸಲು ಮುಂದಾದರು. ಇದೇ ವೇಳೆ ಕೆರಳಿದ ಹರ್ಷಿತ್ ರಾಣಾ(Harshit Rana) ಅವರು ನೇರ ಸೌಮ್ಯ ಸರ್ಕಾರ್ ಬಳಿಗೆ ಬಂದು ಬೈದಿದ್ದಾರೆ. ಉಭಯ ಆಟಗಾರರ ಮಧ್ಯೆ ಮಾತಿನ ಚಕಮಕಿ ಆರಂಭವಾಗುತ್ತಲೇ ತಂಡದ ಆಟಗಾರರು ಮತ್ತು ಅಂಪೈರ್ಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಣ್ಣಗಾಗಿಸಿದರು. ಆಟಗಾರರ ನಡುವಿನ ಈ ವಾಕ್ ಸಮರದ ವಿಡಿಯೊ ವೈರಲ್ ಆಗಿದೆ.
ಬಾಂಗ್ಲಾ ಆಟಗಾರರು ಈ ರೀತಿ ವರ್ತನೆ ತೋರುವುದು ಇದೇ ಮೊದಲೇನಲ್ಲ. 2020ರ ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯದಲ್ಲಿಯೂ ದುರ್ವರ್ತನೆ ತೋರಿ ಭಾರತೀಯ ಆಟಗಾರರ ಮೇಲೆ ಮೈದಾನದಲ್ಲೇ ಹಲ್ಲೆ ನಡೆಸಿದ್ದರು. ಬಾಂಗ್ಲಾದೇಶ ಗೆದ್ದ ಕೂಡಲೇ ರಾಷ್ಟ್ರಧ್ವಜಗಳನ್ನು ಕೈಯ್ಯಲ್ಲಿ ಹಿಡಿದು ನಿಂತಿದ್ದ ಆ ತಂಡದ ಆಟಗಾರರು ಮೈದಾನ ಪ್ರವೇಶಿಸಿ ಕ್ರೀಸ್‌ನತ್ತ ಓಡಿ ಬ್ಯಾಟ್ಸ್‌ಮನ್‌ಗಳನ್ನು ಬಿಗಿದಪ್ಪಿ ಕುಣಿದು ಕುಪ್ಪಳಿಸಿದರು. ಜತೆಗೆ ಅಂಗಳದಲ್ಲಿದ್ದ ಭಾರತೀಯ ಆಟಗಾರರ ಮುಂದೆ ನೃತ್ಯಗೈದು ರೇಗಿಸಿ ತಳ್ಳಾಡಿದ್ದರು.
ಇದನ್ನೂ ಓದಿ Women’s Asia Cup 2023: ಭಾರತದ ವನಿತೆಯರ ತಂಡ ‘ಎ’ ಒನ್; ಬಾಂಗ್ಲಾ ಮಣಿಸಿ ಏಷ್ಯಾ ಕಪ್ ಚಾಂಪಿಯನ್ಸ್
Heated argument between Harshit Rana and Soumya Sarkar.
— Cricfreak (@crickfreak95) July 21, 2023
Ind A Vs Ban A#AsiaCup #INDvsBAN #Ashes pic.twitter.com/Q9IsyqCwXq
ಪಂದ್ಯ ಗೆದ್ದ ಭಾರತ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ನಾಯಕ ಯಶ್ ಧುಲ್ ಅವರ ಅರ್ಧಶತಕ ಹಾಗೂ ಅಭಿಷೇಕ್ ಶರ್ಮ ಅವರ 34 ರನ್ ನೆರವಿನಿಂದ 49.1 ಓವರ್‌ಗಳಲ್ಲಿ 211 ರನ್ನಿಗೆ ಆಲೌಟಾಯಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಮೊಹಮ್ಮದ್ ನೈಮ್ ಮತ್ತು ತಂಝಿದ್ ಹಸನ್ ಮೊದಲ ವಿಕೆಟಿಗೆ 12.4 ಓವರ್‌ಗಳಲ್ಲಿ 70 ರನ್ ಪೇರಿಸಿ ಗೆಲುವಿನ ಸೂಚನೆ ನೀಡಿದರು. ಆದರೆ ಈ ಜೋಡಿಯ ವಿಕೆಟ್ ಪತನದ ಬಳಿಕ ನಾಟಕೀಯ ಕುಸಿತ ಕಂಡು 34.2 ಓವರ್‌ಗಳಲ್ಲಿ 160 ರನ್ನಿಗೆ ಆಲೌಟಾಯಿತು. ಪಂದ್ಯ ಗೆದ್ದ ಭಾರತ ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ದ ಎದುರಾಳಿ ಪಾಕಿಸ್ತಾನದ ಸವಾಲು ಎದುರಿಸಲಿದೆ.