Site icon Vistara News

Emerging Asia Cup: ಒಂದೇ ಪಂದ್ಯವನ್ನಾಡಿ ಫೈನಲ್​ ಪ್ರವೇಶಿಸಿದ ಭಾರತ; ಫೈನಲ್​ನಲ್ಲಿ ಬಾಂಗ್ಲಾ ಎದುರಾಳಿ

ACC Womens Emerging Teams Asia Cup 2023

ಮಾಂಗ್‌ ಕಾಕ್‌ (ಹಾಂಕಾಂಗ್‌): ಎಸಿಸಿ ಮಹಿಳಾ ಎಮರ್ಜಿಂಗ್‌ ಏಷ್ಯಾ ಕಪ್‌(Emerging Asia Cup) ಟಿ20 ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತ ತಂಡ ಕೇವಲ ಒಂದು ಪಂದ್ಯವನ್ನಾಡಿ ಫೈನಲ್​ ಪ್ರವೇಶ ಪಡೆದಿದೆ. ಸೋಮವಾರ ಮಳೆಯಿಂದ ಮುಂದೂಡಿಕೆಯಾಗಿದ್ದ ಭಾರತ ಮತ್ತು ಶ್ರೀಲಂಕಾ ವಿರುದ್ಧದ ಸೆಮಿಫೈನಲ್​ ಮೀಸಲು ದಿನವಾದ ಮಂಗಳವಾರವೂ ಮಳೆಯಿಂದ ಟಾಸ್​ ಕೂಡ ಕಾಣದೆ ರದ್ದುಗೊಂಡಿತು. ಉತ್ತಮ ರನ್​ ರೇಟ್​ ಆಧಾರದಲ್ಲಿ ಭಾರತಕ್ಕೆ ಫೈನಲ್​ ಅದೃಷ್ಟ ಒಲಿಯಿತು. ಜೂನ್​ 21 ಬುಧವಾರ ನಡೆಯುವ ಫೈನಲ್​ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶದ(India A Women vs Bangladesh A Women, Final) ಸವಾಲು ಎದುರಿಸಲಿದೆ

ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಆತಿಥೇಯ ಹಾಂಕಾಂಗ್ ವಿರುದ್ಧ ಭರ್ಜರಿ 9 ವಿಕೆಟ್​ಗಳ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್(Shreyanka Patil) ಮೂರು ಓವರ್​ ಎಸೆದು ಕೇವಲ 2 ರನ್​ ನೀಡಿ 5 ವಿಕೆಟ್​ ಕಳಬಳಿಸಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ್ದ ಹಾಂಕಾಂಗ್ ಕೇವಲ 34 ರನ್​ಗಳಿಗೆ ಸರ್ವಪತನ ಕಂಡಿತ್ತು. ಗುರಿ ಬೆನ್ನಟ್ಟಿದ ಭಾರತ 1 ವಿಕೆಟ್​ಗೆ 38 ರನ್​ ಬಾರಿಸಿ ಗೆಲುವು ಸಾಧಿಸಿತ್ತು.

ಭಾರತ ದ್ವಿತೀಯ ಪಂದ್ಯ ನೇಪಾಳ ಮತ್ತು ಮೂರನೇ ಪಂದ್ಯವನ್ನು ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಆಡಬೇಕಿತ್ತು. ಆದರೆ ಈ ಎರಡೂ ಪಂದ್ಯಗಳು ಮಳೆಯಿಂದ ರದ್ದುಗೊಂಡ ಕಾರಣ ‘ಎ’ ಗೂಪ್​ನಲ್ಲಿ ಮೊದಲರಡು ಸ್ಥಾನದಲ್ಲಿದ್ದ ಭಾರತ ಮತ್ತು ಪಾಕ್​ ತಂಡಗಳು ನೇರವಾಗಿ ಸೆಮಿಫೈನಲ್​ ಪ್ರವೇಶ ಪಡೆದಿತ್ತು. ಅತ್ತ ‘ಬಿ’ ಗುಂಪಿನಿಂದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಸೆಮಿ ಟಿಕೆಟ್​ ಪಡೆದಿದ್ದವು.

ಇದನ್ನೂ ಓದಿ Cricket : ಕನ್ನಡತಿಯ ಮಾರಕ ಬೌಲಿಂಗ್​ಗೆ ಹಾಂಕಾಂಗ್​​ ತಂಡ ಚಿಂದಿ!

ಪಾಕ್​ ಮಣಿಸಿ ಫೈನಲ್​ಗೆ ಲಗ್ಗೆಯಿಟ್ಟ ಬಾಂಗ್ಲಾ

ಮೀಸಲು ದಿನವಾದ ಮಂಗಳವಾರ ನಡೆದ ದ್ವತೀಯ ಸೆಮಿಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಬಾಂಗ್ಲಾದೇಶ 6 ರನ್​ಗಳ ರೋಚಕ ಗೆಲುವು ಸಾಧಿಸಿ ಫೈನಲ್​ ಪ್ರವೇಶಿಸಿತು. ಈ ಪಂದ್ಯದಕ್ಕೂ ಆರಂಭದಲ್ಲಿ ಮಳೆ ಕಾಟ ಇದ್ದ ಕಾರಣ ಪಂದ್ಯವನ್ನು ಡಕ್​ವರ್ತ್​ ನಿಯಮದನ್ವಯ 9 ಓವರ್​ಗೆ ಸೀಮಿತಗೊಳಿಸಲಾಯಿತು. ಅದರಂತೆ ಮೊದಲು ಬ್ಯಾಟಿಂಗ್​ ನಡೆಸಿದ ಬಾಂಗ್ಲಾ 9 ಓವರ್​ಗಳಲ್ಲಿ 7 ವಿಕೆಟ್​ನಷ್ಟಕ್ಕೆ 59 ರನ್​ ಗಳಿಸಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ ತನ್ನ ಪಾಲಿನ ಆಟದಲ್ಲಿ 4 ವಿಕೆಟ್​ ಕಳೆದುಕೊಂಡು 53 ರನ್​ ಗಳಿಸಲಷ್ಟೇ ಶಕ್ತವಾಗಿ 6 ರನ್​ ಅಂತರದಿಂದ ಸೋಲು ಕಂಡಿತು.

Exit mobile version