Site icon Vistara News

Eng v/s Nz | ಒಂದು ಕ್ಲಾಸಿಕ್‌ ಟೆಸ್ಟ್‌ ಪಂದ್ಯ, ಇಂಗ್ಲೆಂಡ್‌ ಭರ್ಜರಿ ಗೆಲುವು

Eng v/s Nz

ನವ ದೆಹಲಿ: Eng v/s Nz | ನ್ಯೂಜಿಲೆಂಡ್‌ ವಿರುದ್ಧ ಇಂಗ್ಲೆಂಡ್‌ ಎರಡನೇ ಟೆಸ್ಟ್‌ ಪಂದ್ಯದಲ್ಲಿ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದೊಂದು ಅವಿಸ್ಮರಣೀಯ ಪಂದ್ಯವಾಗಿತ್ತು. ಅಬ್ಬಾ! ಅದೆಷ್ಟು ರನ್‌ಗಳು, ಅದೆಷ್ಟು ಸೆಂಚುರಿಗಳು, ಎಲ್ಲವೂ ಸೇರಿ ಇದೊಂದು ದಾಖಲೆಯ ಪಂದ್ಯವಾಗಿತ್ತು. ಒಂದು ಕ್ಲಾಸಿಕ್ ಟೆಸ್ಟ್‌ ಪಂದ್ಯಕ್ಕೆ ಇದು ಉದಾಹರಣೆಯಾಗಿದೆ.

ಈ ಪಂದ್ಯದ ಗೆಲುವಿನ ಮೂಲಕ ಇಂಗ್ಲೆಂಡ್‌ 3 ಪಂದ್ಯದ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನೆಡೆ ಸಾಧಿಸಿದೆ.

ಮೊದಲ ಇನ್ನಿಂಗ್ಸ್ 553 ರನ್‌

ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ ಬ್ಯಾಟಿಂಗ್‌ ಮಾಡಿ 553 ರನ್‌ ಬಾರಿಸಿತ್ತು. ಡಾರಿಲ್‌ ಮಿಷೆಲ್‌ ಭರ್ಜರಿ 190 ರನ್‌ ಮಾಡಿ ದಾಖಲೆ ಬರೆದರು. ಅಲ್ಲದೆ, ಟಾಮ್‌ ಬ್ಲಂಡಲ್‌ ಕೂಡ 106 ರನ್‌ ಬಾರಿಸಿ ಅದ್ಭುತವಾಗಿ ಆಡಿದರು. ಇವರಿಬ್ಬರ ಜೋಡಿ ಬ್ಯಾಟ್‌ ಮಾಡುವ ಶೈಲಿಯೇ ಆಕರ್ಷಕವಾಗಿತ್ತು. ತಂಡದ ಉಳಿದ ಆಟಗಾರರು ಕೂಡ ಸಮನಾಗಿ ಆಡಿದರು. ವಿಲ್‌ ಯಂಗ್‌ 47, ದೆವೊನ್‌ ಕಾನ್ವೇ 46, ಮೈಕಲ್‌ ಬ್ರೇಸ್‌ವೆಲ್‌ 49 ರನ್‌ ಗಳಿಸಿದ್ದರು.

ಇಂಗ್ಲೆಂಡ ತಂಡಕ್ಕೆ ಒಂದು ದೊಡ್ಡ ಸ್ಕೋರ್‌ ಕಣ್ಮುಂದಿತ್ತು. 553 ರನ್‌ ಬೆನ್ನತ್ತಿ, ಅದಕ್ಕಿಂತಲೂ ಹೆಚ್ಚು ರನ್‌ ಗಳಿಸಿ ಲೀಡ್‌ ಕೊಡಬೇಕಿತ್ತು. ಜೋ ರೂಟ್‌ ಹಾಗೂ ಒಲ್ಲೀ ಪೋಪ್‌ ಇಬ್ಬರು ಘಟಾನುಘಟಿಗಳು ಭರ್ಜರಿ ಶತಕ ಬಾರಿಸಿ ನಾವೂ ಕಮ್ಮಿಯಿಲ್ಲ ಎಂದು ಮೆರೆದರು. ಜೋ ರೂಟ್‌ 176 ರನ್‌ ಸೇರಿಸಿದರೆ, ಒಲ್ಲೀ ಪೋಪ್‌ 145 ರನ್‌ ಗಳಿಸುವ ಮೂಲಕ ತಂಡದ ಸ್ಕೋರನ್ನು 500ರ ಗಡಿ ದಾಟಿಸಲು ನೆರವಾದರು. ಮೊದಲ ಇನ್ನಿಂಗ್ಸ್‌ ಮುಗಿಯುವ ಹೊತ್ತಿಗೆ ಇಂಗ್ಲೆಂಡ್‌ 539 ರನ್‌ ಗಳಿಸಿ ಆಲೌಟ್‌ ಆಗಿತ್ತು.

ಎರಡನೇ ಇನ್ನಿಂಗ್ಸ್ ಭರ್ಜರಿ ರನ್‌

14 ರನ್‌ ಲೀಡ್‌ನಲ್ಲಿದ್ದ ನ್ಯೂಜಿಲೆಂಡ್‌ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ ಕೂಡ ಅದ್ಭುತ ಪ್ರದರ್ಶನ ನೀಡಿತು. ಈ ಬಾರಿ ಉತ್ತಮ ಟಾರ್ಗೆಟ್‌ ನೀಡುವುದೊಂದೇ ನ್ಯೂಜಿಲೆಂಡ್‌ನ ಗುರಿಯಾಗಿತ್ತು. ಕಳೆದ ಇನ್ನಿಂಗ್ಸ್‌ನಲ್ಲಿ ಇಬ್ಬರು ಆಟಗಾರರಿಂದ ಸೆಂಚುರಿ ಬಂದಿತ್ತು. ಆದರೆ ಈ ಬಾರಿ ಒಬ್ಬರೂ ಶತಕ ಬಾರಿಸಿಲ್ಲ. ಡೆರಿಲ್‌ ಮಿಷೆಲ್‌ ಬಾರಿಸಿದ 62 ರನ್‌ ಈ ಬಾರಿಯ ಹೆಚ್ಚಿನ ಸ್ಕೋರ್‌ ಆಗಿತ್ತು. ವಿಲ್‌ ಯಂಗ್‌ 56, ದೆವೊನ್‌ ಕಾನ್ವೇ 52 ರನ್‌ ಬಾರಿಸಿ ತಂಡದ ಸ್ಕೋರನ್ನು 284ಕ್ಕೆ ಕೊಂಡೊಯ್ದರು.

ಎರಡನೇ ಇನ್ನಿಂಗ್ಸ್‌ನಲ್ಲಿ 299 ರನ್‌ ಟಾರ್ಗೆಟ್‌ ಬೆನ್ನತ್ತಿದ್ದ ಇಂಗ್ಲೆಂಡ್‌ ತಂಡ ಆರಂಭದ ಮೂರು ದಿಗ್ಗಜರಾದ ಝಾಕ್‌ ಕ್ರಾಲಿ, ಒಲ್ಲೀ ಪೋಪ್‌ ಹಾಗೂ ಜೋ ರೂಟ್‌ ಅವರ ವಿಕೆಟ್‌ನ್ನು ಬಹಳ ಬೇಗ ಕಳೆದುಕೊಂಡಿತು. ಆದರೆ, ಗೆಲುವಿನ ಭರವಸೆಯನ್ನು ಕಳೆದುಕೊಂಡ ಸಂದರ್ಭದಲ್ಲಿ ಜಾನಿ ಬೇರ್‌ಸ್ಟೋ ಒಂದು ಭರವಸೆಯ ಕಿಚ್ಚಿನಂತೆ ಆವರಸಿಕೊಂಡರು. ಬೇರ್‌ಸ್ಟೋ ಹಾಗೂ ನಾಯಕ ಬೆನ್‌ ಸ್ಟೋಕ್ಸ್‌ ಅದ್ಭುತವಾದ ಜತೆಯಾಟ ನಡೆಸಿದರು. ಬೇರ್‌ಸ್ಟೋ 136 ರನ್‌ ಬಾರಿಸಿದರೆ, ಬೆನ್‌ ಸ್ಟೋಕ್ಸ್‌ 75 ರನ್‌ ಬಾರಿಸಿ ಅಬ್ಬರಿಸಿದರು. ಇವರಿಬ್ಬರು ಪಿಚ್‌ನಲ್ಲಿ ರನ್‌ಗಳ ಸುರಿಮಳೆ ತರಿಸಿ ಇಂಗ್ಲೆಂಡ್‌ ತಂಡವನ್ನು 5 ವಿಕೆಟ್‌ಗಳ ಗೆಲುವು ಸಾಧಿಸುವಂತೆ ಮಾಡಿದರು.

ಇವರಿಬ್ಬರ ಜತೆಯಾಟ ಕ್ರಿಕೆಟ್‌ ಅಭಿಮಾನಿಗಳಲ್ಲಿ ಬೆರಗು ಮೂಡಿಸಿತು.

ಈ ಪಂದ್ಯದ ವಿಶೇಷತೆ ಏನು?

ಹಿಂದೊಂದು ಕಾಲವಿತ್ತು. ಟೆಸ್ಟ್‌ ಮ್ಯಾಚ್‌ ಎಂದರೆ ಅಲ್ಲಿ ದೊಡ್ಡ ಸ್ಕೋರ್‌ ಹೊಡೆಯುವುದೇ ಸಹಜವಾಗಿತ್ತು. ನಂತರದಲ್ಲಿ ಅದು ಕಡಿಮೆಯಾಗಿತ್ತು. ಈಗ ಈ ಪಂದ್ಯದಲ್ಲಿ ಎರಡೂ ತಂಡಗಳ ಸ್ಕೋರ್‌ ನೋಡಿದಾಗ ಕಳೆದು ಹೋದ ಆ ದಿನಗಳು ಮತ್ತೆ ಮರಳದಿಂತಿದೆ.

ಈ ಪಂದ್ಯದಲ್ಲಿ ಸೆಂಚುರಿಗಳದ್ದೇ ಒಂದು ದಾಖಲೆ ಆಗಿಬಿಟ್ಟಿದೆ. ಎರಡೂ ಇನ್ನಿಂಗ್ಸ್‌ ಸೇರಿಸಿದರೆ ಒಟ್ಟೂ 5 ಶತಕಗಳು ಈ ಒಂದೇ ಪಂದ್ಯದಲ್ಲಿ ಕಂಡುಬಂದಿದೆ.

ನ್ಯೂಜಿಲೆಂಡ್‌:
ಡಾರಿಲ್‌ ಮಿಷೆಲ್‌ – 190
ಟಾಮ್‌ ಬ್ಲಂಡಲ್‌ ಕೂಡ 106

ಇಂಗ್ಲೆಂಡ್:
ಜೋ ರೂಟ್‌- 176
ಒಲ್ಲೀ ಪೋಪ್‌- 145
ಬೇರ್‌ಸ್ಟೋ- 136

Exit mobile version