ನವ ದೆಹಲಿ: ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಟ್ರೆಂಟ್ ಬೌಲ್ಟ್ ವಿಶ್ವ ದಾಖಲೆ ಬರೆದಿದ್ದಾರೆ. ಆದರೆ ಈ ಬಾರಿ ಬೌಲಿಂಗ್‌ನಲ್ಲಿ ಅಲ್ಲ, ಬ್ಯಾಟಿಂಗ್‌ನಲ್ಲಿ! 11ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಲ್ಲಿ ಈಗ ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಅವರದ್ದು ಅಗ್ರಸ್ಥಾನ.
ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದ್ದು, ಈ ಸರಣಿಯ ಎರಡನೇ ಪಂದ್ಯವು ಒಂದು ಕ್ಲಾಸಿಕ್ ಟೆಸ್ಟ್ ಪಂದ್ಯಕ್ಕೆ ಉದಾಹರಣೆಯಾಗಿತ್ತು. ಈ ಪಂದ್ಯದ ಐದನೇ ದಿನದಂದು ನ್ಯೂಜಿಲೆಂಡ್‌ನ ವೇಗಿ ಬೌಲರ್ ಟ್ರೆಂಟ್ ಬೌಲ್ಟ್ ಬ್ಯಾಟಿಂಗ್ ಮಾಡುತ್ತಿದ್ದರು. ಕೇವಲ 15 ಬಾಲ್‌ಗೆ 17 ರನ್ ಬಾರಿಸಿದ್ದರು. ಇದು ಒಂದು ಸಣ್ಣ ಸ್ಕೋರ್‌ನಂತೆ ಕಂಡರೂ ಅವರ ಪಾಲಿಗೆ ಇದು ಮಹತ್ವದ ಸ್ಕೋರ್! ಟ್ರೆಂಟ್ ಬೌಲ್ಟ್ ಈವರೆಗೆ ಒಟ್ಟು 69 ಪಂದ್ಯಗಳನ್ನಾಡಿ 640 ರನ್ ಗಳಿಸಿದ್ದಾರೆ. ಈ ಮೂಲಕ 11ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಅತಿ ಹೆಚ್ಚು ರನ್ ಗಳಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಇದೊಂದು ವಿಶ್ವ ದಾಖಲೆಯಾಯಿತು!
ಈ ಮೊದಲು ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 11ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ 87 ಪಂದ್ಯಗಳಲ್ಲಿ ಗಳಿಸಿದ 623 ರನ್ ಅತಿ ಹಚ್ಚು ರನ್ ಆಗಿತ್ತು. ಟ್ರೆಂಟ್ ಬೌಲ್ಟ್ ಈ ದಾಖಲೆಯನ್ನು ಮುರಿದು ಅಗ್ರಸ್ಥಾನಕ್ಕೆ ಏರಿದ್ದಾರೆ. ಮೂರನೇ ಸ್ಥಾನದಲ್ಲಿ 618 ರನ್ ಗಳಿಸಿದ ಇಂಗ್ಲೆಂಡ್‌ನ ಜೇಮ್ಸ್ ಆಂಡರ್‌ಸನ್ ಇದ್ದಾರೆ.
ಇದನ್ನೂ ಓದಿ: Eng v/s Nz | ಒಂದು ಕ್ಲಾಸಿಕ್ ಟೆಸ್ಟ್ ಪಂದ್ಯ, ಇಂಗ್ಲೆಂಡ್ ಭರ್ಜರಿ ಗೆಲುವು