ಪುಣೆ: ಯುದ್ಧ ಮುಗಿದ ಮೇಲೆ ಕೋಟೆ ಬಾಗಿಲು ಹಾಕಿದರಂತೆ ಎಂಬ ನಾಣ್ಣುಡಿಯಂತೆ ಹಾಲಿ ಚಾಂಪಿಯನ್ ಇಂಗ್ಲೆಂಡ್(England vs Netherlands) ತಂಡ ಟೂರ್ನಿಯಿಂದ ಹೊರಬಿದ್ದ ಬಳಿಕ ಅದ್ಭುತ ಪ್ರದರ್ಶನ ತೋರಿದೆ. ಬುಧವಾರ ನಡೆದ ವಿಶ್ವಕಪ್‌ನ 40ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ 160 ರನ್‌ಗಳ ಗೆಲುವು ದಾಖಲಿಸಿದೆ. ಸತತ 6 ಪಂದ್ಯಗಳ ಸೋಲಿನ ಬಳಿಕ ಒಲಿದ ಗೆಲುವಾಗಿದೆ.
ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರಿಕೆಟ್ ಸ್ಟೇಡಿಯಂ ಪುಣೆಯಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡ, ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್(108) ಅವರ ಭರ್ಜರಿ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 339 ರನ್ ಬಾರಿಸಿತು. ಬೃಹತ್ ಮೊತ್ತವನ್ನು ಒಂದು ಹಂತದವರೆಗೆ ಉತ್ತಮವಾಗಿ ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ಹಠಾತ್ ಕುಸಿತ ಕಂಡು 37.2 ಓವರ್‌ಗಳಲ್ಲಿ 179 ರನ್ಗೆ ಸರ್ವಪತನ ಕಂಡಿತು. ಮೊಯಿನ್ ಅಲಿ ಮತ್ತು ಆದಿಲ್ ರಶೀದ್ ತಲಾ ಮೂರು ವಿಕೆಟ್ ಕಿತ್ತು ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ ತಂಡ ಆರಂಭದಲ್ಲೇ 13 ರನ್ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಆ ಬಳಿಕ ಬಂದ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್(33) ಮತ್ತು ಆರಂಭಕಾರ ವೆಸ್ಲಿ ಬ್ಯಾರೆಸಿ(37) ಉತ್ತಮ ಇನಿಂಗ್ಸ್ ಕಟ್ಟಿದರು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಕ್ರಿಕ್ಸ್ ವೋಕ್ಸ್ ಮತ್ತು ಮೊಯಿನ್ ಅಲಿ ಬೇರ್ಪಡಿಸಿದರು. ಬ್ಯಾರೆಸಿ ಅವರನ್ನು ರನೌಟ್ ಮಾಡಿದರು. 5ನೇ ಕ್ರಮಾಂಕದಲ್ಲಿ ಆಡಲಿಳಿದ ನಾಯಕ ಸ್ಕಾಟ್ ಎಡ್ವರ್ಡ್ಸ್ ಕೆಲ ಕಾಲ ಕ್ರೀಸ್ ಆಕ್ರಮಿಸಿ 38 ರನ್‌ಗಳ ಕೊಡುಗೆ ನೀಡಿದರು.
ಇದನ್ನೂ ಓದಿ NZ vs SL: ವರುಣ ದೇವನ ಕೈಯಲ್ಲಿದೆ ನ್ಯೂಜಿಲ್ಯಾಂಡ್‌ನ ಸೆಮಿಫೈನಲ್ ಭವಿಷ್ಯ!
ತೇಜ ಏಕಾಂಗಿ ಹೋರಾಟ
ಅಂತಿಮ ಹಂತದಲ್ಲಿ ತೇಜ ನಿಡಮನೂರು ಏಕಾಂಗಿ ಹೋರಾಟ ನಡೆಸಿ ಅಜೇಯ 41 ರನ್ ಬಾರಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಬ್ಯಾಟಿಂಗ್ ಸಾಥ್ ಸಿಗದ ಕಾರಣ ಪಂದ್ಯ ಸೋಲು ಕಂಡಿತು. ಯಾರಾದರು ಇಬ್ಬರು ಆಟಗಾರರು ಇವರಿಗೆ ಮತ್ತೊಂದು ತುದಿಯಲ್ಲಿ ಬೆಂಬಲ ನೀಡುತ್ತಿದ್ದರೆ ಪಂದ್ಯ ಗೆಲ್ಲುವ ಸಾಧ್ಯತೆ ಇತ್ತು.
ಶತಕ ಬಾರಿಸಿದ ಸ್ಟೋಕ್ಸ್
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ ಅವರು ಶತಕ ಬಾರಿಸಿ ಸಂಭ್ರಮಿಸಿದರು. 6 ಸಿಕ್ಸರ್ ಮತ್ತು 6 ಬೌಂಡರಿ ಬಾರಿಸಿ 108 ರನ್ ಗಳಿಸಿ ಚೊಚ್ಚಲ ವಿಶ್ವಕಪ್ ಶತಕ ದಾಖಲಿಸಿದರು. ಗಾಯದ ಕಾರಣ ಅವರು ಆರಂಭಿಕ ಕೆಲ ಪಂದ್ಯಗಳಿಂದ ಹೊರಗುಳಿದಿದ್ದರು. ಕಳೆದ ಪಂದ್ಯದಲ್ಲಿಯೂ ಅರ್ಧಶತಕ ಬಾರಿಸಿದ್ದರು. ಜಾನಿ ಬೈರ್‌ಸ್ಟೋವ್ ಮತ್ತು ಡೇವಿಡ್ ಮಲಾನ್ ಉತ್ತಮ ಆರಂಭ ನೀಡಿದರು. ಆದರೆ, ತಂಡದ ಮೊತ್ತ 48 ರನ್‌ಗಳಾಗಿದ್ದಾಗ ಜಾನಿ ಬೈರ್‌ಸ್ಟೋವ್ 15 ರನ್ ಗಳಿಸಿ ಔಟಾದರು.
ಆಕರ್ಷಕ ಅರ್ಧಶತಕ ಬಾರಿಸಿದ ವೋಕ್ಸ್
ದ್ವಿತೀಯ ಕ್ರಮಾಂಕದಲ್ಲಿ ಆಡಲಿಳಿದ ಜೋ ರೂಟ್ ನಿಧಾನಗತಿಯ ಬ್ಯಾಟಿಂಗ್ ನಡೆಸಿ 35 ಎಸೆತಗಳಲ್ಲಿ 1 ಬೌಂಡರಿ ನೆರವಿನಿಂದ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆರಂಭಿಕ ಬ್ಯಾಟರ್ ಡೇವಿಡ್ ಮಲಾನ್ 74 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ 87 ರನ್ ಬಾರಿಸಿದರು. ಬರವಸೆಯ ಆಟಗಾರರಾದ ಹ್ಯಾರಿ ಬ್ರೂಕ್ (11), ನಾಯಕ ಜೋಸ್ ಬಟ್ಲರ್ (5), ಆಲ್‌ರೌಂಡರ್ ಮೊಯಿನ್ ಅಲಿ (4) ರನ್ ಗಳಿಸಿ ಘೋರ ವೈಫಲ್ಯ ಕಂಡರು. ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಕ್ರಿಸ್ ವೋಕ್ಸ್ 45 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 51 ರನ್ ಗಳಿಸಿ ತಂಡದ ಮೊತ್ತ 320ರ ಗಡಿ ದಾಟಿಸಿದರು.
ನೆದರ್ಲೆಂಡ್ಸ್ ಪರ ಬಾಸ್ ಡಿ ಲೀಡೆ 74 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಆರ್ಯನ್ ದತ್ 67 ರನ್ ನೀಡಿ 2 ವಿಕೆಟ್ ಪಡೆದರು. ಲೋಗನ್ ವ್ಯಾನ್ ಬೀಕ್ 88 ರನ್ ನೀಡಿ 2 ವಿಕೆಟ್ ಕಿತ್ತರು. ಪಾಲ್ ವ್ಯಾನ್ ಮೀಕೆರೆನ್ ಒಂದು ವಿಕೆಟ್ ಪಡೆದರು.