ಲಂಡನ್: ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಸೋಮವಾರ ಏಕದಿನ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದು, ಕ್ರಿಕೆಟ್ ಕ್ಷೇತ್ರಕ್ಕೆ ಆಘಾತ ಕೊಟ್ಟಿದ್ದಾರೆ.
ಜುಲೈ 19ಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮೊದಲ ಏಕದಿನ ಪಂದ್ಯ ಅವರ ಕೊನೇ ಒಡಿಐ ಪಂದ್ಯವಾಗಲಿದೆ. 31 ವರ್ಷದ ಆಟಗಾರ 2011ರಲ್ಲಿ ಐರ್ಲೆಂಡ್ ವಿರುದ್ಧ ಏಕದಿನ ಮಾದರಿಗೆ ಪದಾರ್ಪಣೆ ಮಾಡಿದ್ದರು. ಮೂರು ಮಾದರಿಯಲ್ಲಿ ಆಡುವುದು ಸುಸ್ಥಿರವಲ್ಲ ಎಂಬ ಹೇಳಿಕೆಯೊಂದಿಗೆ ಬೆನ್ ಸ್ಟೋಕ್ಸ್ ವಿದಾಯ ಘೋಷಣೆ ಮಾಡಿದ್ದಾರೆ.
ಬೆನ್ ಸ್ಟೋಕ್ಸ್ ವಿದಾಯ ಪತ್ರವನ್ನು ಟ್ವೀಟ್ ಮಾಡಿದ್ದು, ತವರು ನೆಲದಲ್ಲಿಯೇ ಕೊನೇ ಪಂದ್ಯವನ್ನು ಆಡುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ. ಸ್ಟೋಕ್ಸ್ ಇದುವರೆಗೆ 104 ಏಕದಿನ ಪಂದ್ಯಗಳಲ್ಲಿ ಆಡಿದ್ದು, 40ರ ಸರಾಸರಿಯಲ್ಲಿ 2919 ರನ್ ಬಾರಿಸಿದ್ದಾರೆ. ಅಜೇಯ 102 ರನ್ ಅವರ ವೈಯಕ್ತಿಕ ಗರಿಷ್ಠ ಸ್ಕೋರ್. ಅಂತೆಯೇ ಬೌಲಿಂಗ್ನಲ್ಲಿ 74 ವಿಕೆಟ್ಗಳನ್ನು ಕಬಳಿಸಿದ್ದು, ಒಂದು ಬಾರಿ ಐದು ವಿಕೆಟ್ ಗೊಂಚಲನ್ನೂ ಪಡೆದುಕೊಂಡಿದ್ದಾರೆ.
ಬೆನ್ ಸ್ಟೋಕ್ಸ್ 2019ರ ವಿಶ್ವ ಕಪ್ನ ಫೈನಲ್ ಪಂದ್ಯದಲ್ಲಿ ಬಾರಿಸಿದ ಅಜೇಯ 84 ರನ್ ಅವರ ವೃತ್ತಿ ಕ್ರಿಕೆಟ್ನ ಅಮೋಘ ಇನಿಂಗ್ಸ್. ಆ ಅಮೂಲ್ಯ ರನ್ಗಳ ನೆರವಿನಿಂದ ಇಂಗ್ಲೆಂಡ್ ತಂಡ ವಿಶ್ವ ಕಪ್ ತನ್ನದಾಗಿಸಿಕೊಂಡಿತ್ತು.
ಟೆಸ್ಟ್, ಒನ್ಡೇ ಗುರಿ
ಬೆನ್ ಸ್ಟೋಕ್ಸ್ ಪ್ರಸ್ತುತ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕರಾಗಿದ್ದಾರೆ. ಅವರ ನೇತೃತ್ವದ ಆಂಗ್ಲರ ಬಳಗ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿರುವ ಜತೆಗೆ ಭಾರತದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲೂ ಜಯ ಸಾಧಿಸಿತ್ತು.
ಮಂಗಳವಾರ ಡರ್ಹ್ಯಾಮ್ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವು ನನ್ನ ಕೊನೇ ಏಕದಿನ ಪಂದ್ಯವಾಗಿದ್ದು, ಆ ಬಳಿಕ ಈ ಮಾದರಿಯಿಂದ ನಿವೃತ್ತಿ ಪಡೆಯಲು ನಿರ್ಧರಿಸಿದ್ದೇನೆ. ಇದೊಂದು ಅಪೂರ್ವ ಯಾನವಾಗಿದ್ದು, ಇಂಗ್ಲೆಂಡ್ ತಂಡದ ಪರ ಆಡಿದ ಪ್ರತಿ ಕ್ಷಣವನ್ನೂ ಸಂತೋಷದಿಂದ ಕಳೆದಿದ್ದೇನೆ, ಎಂದು ಸ್ಟೋಕ್ಸ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | INDvsENG ODI: ಟಾಸ್ ಗೆದ್ದ ಭಾರತ, ವಿರಾಟ್ ಔಟ್, ಶ್ರೇಯಸ್ ಇನ್