Site icon Vistara News

Ashes 2023 : ಆಸ್ಟ್ರೇಲಿಯಾ ತಂಡದ ವಿರುದ್ಧ ಸಿಟ್ಟಿಗೆದ್ದು ಶತಕ ಬಾರಿಸಿದ ಇಂಗ್ಲೆಂಡ್​ ನಾಯಕ ಬೆನ್​ಸ್ಟೋಕ್ಸ್​!

Ben Storkes

ಲಂಡನ್​: ಆ್ಯಶಸ್​ ಸರಣಿಯ (Ashes 2023) ಎರಡನೇ ಪಂದ್ಯದ ನಾಲ್ಕನೇ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅದ್ಭುತ ಶತಕ ಬಾರಿಸಿದ್ದಾರೆ. ಅಮೋಘ 155 ರನ್ ಬಾರಿಸಿದ ಅವರು 2019ರಲ್ಲಿ ಹೆಡಿಂಗ್ಲೆಯಲ್ಲಿ ತಾವಾಡಿದ ಇನಿಂಗ್ಸ್ ಅನ್ನು ನೆನಪಿಸಿದರು. ಆ ಪಂದ್ಯದಲ್ಲಿ ಅವರು ಏಕಾಂಗಿ ಹೋರಾಟ ನಡೆಸಿ ವಿರೋಚಿತ ವಿಜಯ ತಂದುಕೊಟ್ಟಿದ್ದರು. ಆದರೆ ಹಾಲಿ ಪಂದ್ಯದಲ್ಲಿ ಅವರು 155 ರನ್​ಗಳಿಗೆ ಔಟಾದರು. ಹೀಗಾಗಿ ತಂಡ ಸೋಲಿನ ದವಡೆಗೆ ಸಿಲುಕಿತು. ಸ್ಟೋಕ್ಸ್ ನಿಧಾನಗತಿಯಲ್ಲಿ ಆಟ ಪ್ರಾರಂಭಿಸಿದರೂ, ಜಾನಿ ಬೇರ್​ಸ್ಟೋವ್​ ಅವರ ವಿವಾದಾತ್ಮಕ ರನ್ಔಟ್​ ಬಳಿಕ ಸಿಟ್ಟಿಗೆದ್ದು ಬೌಂಡರಿ, ಸಿಕ್ಸರ್​ಗಳ ಮೂಲಕ ರನ್ ಪೇರಿಸಿದರು.

ಸ್ಟೋಕ್ಸ್ ಇನಿಂಗ್ಸ್​ನ 56 ನೇ ಓವರ್​ನಲ್ಲಿ ಕ್ಯಾಮರೂನ್ ಗ್ರೀನ್ ಅವರ ಬೌಲಿಂಗ್​​ಗೆ ಸತತ ಮೂರು ಸಿಕ್ಸರ್​ಗಳನ್ನು ಬಾರಿಸುವ ಮೂಲಕ ಮೂರಂಕಿ ಮೊತ್ತ ದಾಟಿದರು. ಭೋಜನ ವಿರಾಮಕ್ಕೆ ಮೊದಲು ಅವರು ಶತಕ ಬಾರಿಸಿ ಸಂಭ್ರಮಿಸಿದರು.

ಕೊನೇ ದಿನದಾಟದ ಅರಂಭಕ್ಕೆ ಇಂಗ್ಲೆಂಡ್ ನಾಯಕ ನಿಧಾನಗತಿಯಲ್ಲಿ ಬ್ಯಾಟ್ ಮಾಡಿದರು. ತಂಡವನ್ನು ರಕ್ಷಿಸುವ ಉದ್ದೇಶ ಅವರಿಗೆ ಇತ್ತು. ಅದರೆ, ಮತ್ತೊಂದು ಬದಿಯಲ್ಲಿ ವಿಕೆಟ್​ ಉರುಳಲು ಆರಂಭಿಸಿದ ತಕ್ಷಣ ಫೋರ್​,ನಸಿಕ್ಸರ್ ಗಳ ಸುರಿಮಳೆ ಸುರಿಸಿದರು. ಅಂತಿಮವಾಗಿ 73ನೇ ಓವರ್​​ನಲ್ಲಿ ಜೋಶ್ ಹೇಜಲ್​ವುಡ್​ ಅವರ ಎಸೆತಕ್ಕ 155 ರನ್ ಸಿಡಿಸಿ ಔಟಾದರು. ಗಮನಾರ್ಹ ಸಾಧನೆಯ ಹೊರತಾಗಿಯೂ ಅವರಿಗೆ ಸಂಭ್ರಮಪಡಲು ಅವಕಾಶ ಸಿಗಲಿಲ್ಲ. ಅವರು ಔಟಾಗುವ ವೇಳೆಗೆ ತಂಡದ ಗುರಿ ದೂರವಿದ್ದ ಕಾರಣ ನಿರಾಸೆಯಿಂದ ಪೆವಲಿಯನ್ ಕಡೆಗೆ ಹೊರಟರು.

ಇದನ್ನೂ ಓದಿ : Ashes 2023 : ಐಪಿಎಲ್​ನಲ್ಲಿ ಫೇಲ್​, ಆ್ಯಶಸ್​​ನಲ್ಲೂ ವಿಚಿತ್ರ ರೀತಿಯಲ್ಲಿ ಔಟ್​; ಇಂಗ್ಲೆಂಡ್​ ಬ್ಯಾಟರ್​ನ ಬ್ಯಾಡ್​ಲಕ್​!

ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಪಂದ್ಯದ ಅಂತಿಮ ದಿನ ಇಂಗ್ಲೆಂಡ್ ಗೆಲುವಿಗೆ 257 ರನ್​ಗಳ ಅವಶ್ಯಕತೆಯಿತ್ತು. ಸ್ಟೋಕ್ಸ್​ ಮತ್ತು ಬೆನ್ ಡಕೆಟ್ ಅದ್ಭುತ ಜೊತೆಯಾಟದ ಕಾರಣ ಆತಿಥೇಯರಿಗೆ ಗೆಲುವಿನ ವಿಶ್ವಾಸ ಮೂಡಿತ್ತು. ಆದರೆ, ಜೋಶ್ ಹೇಜಲ್​ವುಡ್​, ಬೆನ್ ಡಕೆಟ್ ಅವರನ್ನು 83 ರನ್​ಗಳಿಗೆ ಔಟ್​ ಮಾಡಿದರು. ಇದರೊಂದಿಗೆ ಅವರ ಜತೆಯಾಟ ಮುರಿಯಿತು. ಬಳಿಕ ಸತತವಾಗಿ ಇಂಗ್ಲೆಂಡ್ ತಂಡ ವಿಕೆಟ್​ ಕಳೆದುಕೊಂಡಿತು. ಹೀಗಾಗಿ ಸೋಲಿನ ಸುಳಿಗೆ ಸಿಲುಕಿತು.

ವಿವಾದಾತ್ಮಕ ಔಟ್​

ವಿವಾದಾತ್ಮಕ ಔಟ್ ಮೂಲಕ ಜಾನಿ ಬೇರ್​ಸ್ಟೋವ್​ ಪೆವಿಲಿಯನ್​ಗೆ ತೆರಳುತ್ತಿದ್ದಂತೆ ಇಂಗ್ಲೆಂಡ್ ಆಟಗಾರರು ಹಾಗೂ ಪ್ರೇಕ್ಷಕರು ಕುದಿಯಲು ಆರಂಭಿಸಿದರು. ವಿಕೆಟ್​ ಕೀಪರ್​ ಅಲೆಕ್ಸ್ ಕ್ಯೇರಿ ಕುತಂತ್ರದಿಂದ ಔಟ್ ಮಾಡಿದ್ದಾರೆ ಎಂಬುದು ಅವರ ಆರೋಪ. ಗ್ರೀನ್ ಎಸೆದ ಚೆಂಡು ವಿಕೆಟ್​ ಕೀಪರ್ ಅಲೆಕ್ಸ್​ ಕೈ ಸೇರಿದ ಬಳಿಕ ಬೇರ್​ಸ್ಟೋವ್ ನಾನ್​ಸ್ಟ್ರೈಕ್ ಎಂಡ್​ ಕಡೆಗೆ ಹೊರಟಿದ್ದರು. ಈ ವೇಳೆ ಕ್ಯೇರಿ ವಿಕೆಟ್​ಗೆ ಚೆಂಡು ಎಸೆದು ಅಪೀಲ್ ಮಾಡಿದ್ದರು. ಮೂರನೇ ಅಂಪೈರ್ ಅದನ್ನು ಪುರಸ್ಕರಿಸಿದ್ದರು.

ಇದರಿಂದ ಸಿಟ್ಟಿಗೆದ್ದ ಸ್ಟೋಕ್ಸ್​, ಕ್ಯಾಮರೂನ್ ಗ್ರೀನ್ ಅವರನ್ನು ಗುರಿಯಾಗಿಸಲು ಪ್ರಾರಂಭಿಸಿದರು. ಅವರ ಓವರ್​ಗೆ ಮೂರು ಬೌಂಡರಿಗಳನ್ನು ಹೊಡೆದರು. ಅವರ ಮುಂದಿನ ಓವರ್​ನಲ್ಲಿ ಬೌಂಡರಿ ಮತ್ತು ಸತತ ಮೂರು ಸಿಕ್ಸರ್ ಗಳನ್ನು ಬಾರಿಸಿದರು. ಅಲ್ಲದೇ ಒಂದೇ ಓವರ್​ನಲ್ಲಿ 24 ರನ್ ಗಳಿಸಿದರು. ಇದು ಟೆಸ್ಟ್ ಕ್ರಿಕೆಟ್​ನ ಓವರ್​ ಒಂದರಲ್ಲಿ ಇಂಗ್ಲೆಂಡ್ ಬ್ಯಾಟರ್​ ಒಬ್ಬರು ಬಾರಿಸಿ ಜಂಟಿ ಎರಡನೇ ಅತಿ ಹೆಚ್ಚು ರನ್​ಗಳ ದಾಖಲೆ.

Exit mobile version