ಮುಂಬಯಿ : ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋರ್ಡಾನ್ ಐಪಿಎಲ್ 2023 ರ ಉಳಿದ ಭಾಗಕ್ಕೆ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಐಪಿಎಲ್ನಲ್ಲಿ ಐದು ಬಾರಿಯ ಚಾಂಪಿಯನ್ ಆಗಿರುವ ಕ್ರಿಸ್ ಜೋರ್ಡಾನ್ ಬದಲಿ ಆಟಗಾರನಾಗಿ ಮುಂಬಯಿ ಫ್ರಾಂಚೈಸಿ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ಯಾರ ಬದಲಿಗೆ ಆಡುತ್ತಿದ್ದಾರೆ ಎಂಬುದನ್ನು ತಂಡ ಪ್ರಕಟಿಸಿಲ್ಲ. ಜಸ್ಪ್ರಿತ್ ಬುಮ್ರಾ ಮತ್ತು ಜೇ ರಿಚರ್ಡ್ಸನ್ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡವ ಬೌಲಿಂಗ್ ವಿಭಾಗದಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಹೀಗಾಗಿ, ಜೋರ್ಡಾನ್ ಸೇರ್ಪಡೆಯಿಂದ ಬೌಲಿಂಗ್ ವಿಭಾಗ ಬಲಿಷ್ಠಗೊಳ್ಳಲಿದೆ.
ಜೋರ್ಡಾನ್ ಸೇರ್ಪಡೆಗೊಂಡಿರುವ ಮಾಹಿತಿ ಇನ್ನೂ ಅಧಿಕೃತಗೊಂಡಿಲ್ಲ. ಆದರೆ, ಜೋರ್ಡಾನ್ ಇತ್ತೀಚೆಗೆ ಮುಂಬೈ ಇಂಡಿಯನ್ಸ್ ತಂಡದ ಸದಸ್ಯರೊಂದಿಗೆ ಜರ್ಸಿಯಲ್ಲಿ ತರಬೇತಿ ಪಡೆಯುತ್ತಿರುವುದು ಕಂಡುಬಂದಿದೆ. ಏತನ್ಮಧ್ಯೆ, ಜೋಫ್ರಾ ಆರ್ಚರ್ ಅವರ ಗಾಯದ ಬಗ್ಗೆ ಹೊಸ ಮಾಹಿತಿಯೂ ಪ್ರಕಟಗೊಂಡಿಲ್ಲ. ವಾರದ ಆರಂಭದಲ್ಲಿ, ಆರ್ಚರ್ ತನ್ನ ಬಲ ಮೊಣಕೈಗೆ ಸಣ್ಣ ಶಸ್ತ್ರಚಿಕಿತ್ಸೆಗಾಗಿ ಬೆಲ್ಜಿಯಂಗೆ ಹೋಗಿದ್ದರು ಎಂಬ ವರದಿಗಳು ಹೊರಬಂದವು. ಅದರ ನಂತರ ಅವರು ಪಂಜಾಬ್ ಕಿಂಗ್ಸ್ ವಿರುದ್ಧ ಆಡಿದರೂ, ಗುಜರಾತ್ ಟೈಟಾನ್ಸ್ ವಿರುದ್ಧದ ಮುಂಬೈನ ಕೊನೆಯ ಪಂದ್ಯದಲ್ಲಿ ಅವರು ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಅವರ ಬದಲಿಗೆ ತಂಡ ಸೇರಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.
ಏಪ್ರಿಲ್ 30ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಸೆಣಸಲಿದೆ. ವಿಶೇಷವೆಂದರೆ, ರೋಹಿತ್ ಶರ್ಮಾ ನೇತೃತ್ವದ ತಂಡವು ಪ್ರಸ್ತುತ ಐಪಿಎಲ್ ಪಾಯಿಂಟ್ಸ್ ಟೇಬಲ್ನಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಹೀಗಾಗಿ ತಂಡಕ್ಕೆ ಮುಂದಿನ ಪಂದ್ಯಗಳಲ್ಲಿ ಗೆಲುವು ಅನಿವಾರ್ಯ. ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಹಿರಿಯ ಬ್ಯಾಟರ್ಗಳು ಫಾರ್ಮ್ನಲ್ಲಿ ಇಲ್ಲದಿರುವುದೇ ತಂಡದ ಹಿನ್ನಡೆಗೆ ಕಾರಣ. ಇಶಾನ್ ಕಿಶನ್ ಕೂಡ ಸ್ಕೋರ್ ಬಾರಿಸಲು ಹೆಣಗಾಡುತ್ತಿದ್ದಾರೆ. ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್ ಕೂಡ ವಿಫಲ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್ ವಿಷಯಕ್ಕೆ ಬಂದರೆ, ಪಿಯೂಷ್ ಚಾವ್ಲಾ ಹೊರತುಪಡಿಸಿ ಬೇರೆ ಯಾರೂ ಪ್ರಭಾವ ಬೀರಿಲ್ಲ.
ಇದನ್ನೂ ಓದಿ : INDvsAUS : ಸೂರ್ಯಕುಮಾರ್ ಯಾದವ್ ವೈಫಲ್ಯದ ಬಗ್ಗೆ ಚಿಂತೆಯಿಲ್ಲ ಎಂದ ನಾಯಕ ರೋಹಿತ್ ಶರ್ಮಾ
ಮತ್ತೊಂದೆಡೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಜಸ್ಥಾನ್ ಜಯ ಗಳಿಸಿದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಅವರ ಯುವ ಆಟಗಾರರಾದ ಧ್ರುವ್ ಜುರೆಲ್ ಮತ್ತು ಯಶಸ್ವಿ ಜೈಸ್ವಾಲ್ ಅಬ್ಬರದ ಪ್ರದರ್ಶನ ನೀಡುತ್ತಿದ್ದಾರೆ. ಜೋಸ್ ಬಟ್ಲರ್ ಮತ್ತು ಸಂಜು ಸ್ಯಾಮ್ಸನ್ ಯಾವುದೇ ಸಮಯದಲ್ಲಿ ಆಟಕ್ಕೆ ತಿರುವ ಕೊಡುವ ಸಾಮರ್ಥ್ಯ ಹೊಂದಿದ್ದಾರೆ. ರವಿಚಂದ್ರನ್ ಅಶ್ವಿನ್ ಹಾಗೂ ಸಂದೀಪ್ ಶರ್ಮಾ ಅವರ ಅದ್ಭುತ ಆಟದ ನೆರವಿನಿಂದ ರಾಜಸ್ಥಾನ್ ತಂಡ ಈ ಋತುವಿನಲ್ಲಿ ಆರನೇ ಗೆಲುವು ದಾಖಲಿಸುವ ವಿಶ್ವಾಸದಲ್ಲಿದೆ.
ಏತನ್ಮಧ್ಯೆ, ಮೊದಲ ಚಾಂಪಿಯನ್ ಮತ್ತು ಐದು ಬಾರಿಯ ಚಾಂಪಿಯನ್ಸ್ ನಡುವಿನ ಪಂದ್ಯವು ಐಪಿಎಲ್ ಇತಿಹಾಸದಲ್ಲಿ 1000 ನೇ ಪಂದ್ಯವಾಗಿದೆ.