ಮೆಲ್ಬೋರ್ನ್ : ಫೈನಲ್ ಹಣಾಹಣಿಯಲ್ಲಿ ಪಾಕಿಸ್ತಾನ ವಿರುದ್ಧ ೫ ವಿಕೆಟ್‌ಗಳ ಗೆಲುವು ಸಾಧಿಸಿದ ಇಂಗ್ಲೆಂಡ್ ತಂಡ ಟಿ೨೦ ವಿಶ್ವ ಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಆಂಗ್ಲರ ಪಡೆಗೆ ಇದು ಎರಡನೇ ಚುಟುಕು ಕ್ರಿಕೆಟ್‌ನ ವಿಶ್ವ ಕಪ್ ಆಗಿದ್ದು, ಈ ಹಿಂದೆ ೨೦೧೦ರಲ್ಲಿ ಇಂಗ್ಲೆಂಡ್ ತಂಡ ಚಾಂಪಿಯನ್‌ಪಟ್ಟ ಅಲಂಕರಿಸಿತ್ತು. ಅದೇ ರೀತಿ ೧೨ ವರ್ಷಗಳ ಅವಧಿಯಲ್ಲಿ ಮೂರನೇ ವಿಶ್ವ ಕಪ್ ಟ್ರೋಫಿ ಗೆದ್ದಂತಾಗಿದೆ. ೨೦೧೯ರಲ್ಲಿ ಇಯಾನ್ ಮಾರ್ಗನ್ ನೇತೃತ್ವದ ಇಂಗ್ಲೆಂಡ್ ತಂಡ ಏಕ ದಿನ ವಿಶ್ವ ಕಪ್ ಗೆದ್ದಿತ್ತು. ಹಾಲಿ ನಾಯಕ ಜೋಸ್ ಬಟ್ಲರ್‌ಗೆ ಚೊಚ್ಚಲ ನಾಯಕತ್ವದಲ್ಲೇ ವಿಶ್ವ ಕಪ್ ಲಭಿಸಿದ್ದು, ಈ ಮೂಲಕವೂ ಅವರು ದಾಖಲೆ ಮಾಡಿದ್ದರು.
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರೆ, ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ನಿಗದಿತ ೨೦ ಓವರ್‌ಗಳಲ್ಲಿ ೮ ವಿಕೆಟ್‌ಗೆ ೧೩೭ ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ೫ ವಿಕೆಟ್ ನಷ್ಟಕ್ಕೆ ೧೩೮ ರನ್ ಬಾರಿಸಿ ಜಯಶಾಲಿಯಾಯಿತು.
ಸಣ್ಣ ಮೊತ್ತದ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಅಲೆಕ್ಸ್ ಹೇಲ್ಸ್ (೧) ಅವರ ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತಕ್ಕೆ ಒಳಗಾಯಿತು. ಬಟ್ಲರ್ ಕೂಡ (೨೬) ಬೇಗ ವಿಕೆಟ್ ಒಪ್ಪಿಸಿದರು. ಫಿಲ್ ಸಾಲ್ಟ್(೧೦), ಹ್ಯಾರಿ ಬ್ರೂಕ್ (೨೦) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಈ ವೇಳೆ ಆಲ್‌ರೌಂಡರ್ ಬೆನ್ ಸ್ಟೋಕ್ಸ್ (೫೨*) ತಂಡವನ್ನು ಕಾಪಾಡಿದರು. ಮೊಯೀನ್ ಅಲಿ ೧೯ ರನ್ ಕೊಡುಗೆ ಕೊಟ್ಟರು.
ಪಾಕ್ಗೆ ಆರಂಭಿಕ ಆಘಾತ
ನ್ಯೂಜಿಲೆಂಡ್ ವಿರುದ್ಧದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿ ಮಿಂಚಿದ್ದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಈ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದರು. ಕೇವಲ 15 ರನ್ಗೆ ಆಟ ಮುಗಿಸಿದರು. ಈ ವಿಕೆಟ್ ಪತನದ ಬಳಿಕ ಆಡಲಿಳಿದ ಮೊಹಮ್ಮದ್ ಹ್ಯಾರಿಸ್(8) ಕೂಡ ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸಲು ವಿಫಲರಾದರು. ತಂಡದ ಮೊತ್ತ 50ರ ಗಡಿ ದಾಟುವ ಮೊದಲೇ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು ಪಾಕ್ ಆರಂಭಿಕ ಆಘಾತಕ್ಕೆ ಸಿಲುಕಿತು.
ಆರಂಭಿಕ ಎರಡು ವಿಕೆಟ್ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕಿದ ಪಾಕಿಸ್ತಾನ ತಂಡಕ್ಕೆ ನೆರವಾದದ್ದು ನಾಯಕ ಬಾಬರ್ ಅಜಂ. ತಾಳ್ಮೆಯುತ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸುವ ಪ್ರಯತ್ನ ಮಾಡಿದರು. ಆದರೆ ಇವರ ಆಟವೂ ಹೆಚ್ಚು ಕಾಲ ನಡೆಯಲಿಲ್ಲ. ಆದಿಲ್ ರಶೀದ್ ಅವರ ಎಸೆತವನ್ನು ಲಾಂಗ್ ಆನ್ ಕಡೆಗೆ ಬಾರಿಸುವ ಯತ್ನದಲ್ಲಿ ಬೆನ್ ಸ್ಟೋಕ್ಸ್ಗೆ ಕ್ಯಾಚ್ ನೀಡಿ ಔಟಾದರು. ಅವರ ಗಳಿಕೆ 32 ರನ್ಗೆ ಕೊನೆಕೊಂಡಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಶಾನ್ ಮಸೂದ್(38) ಮತ್ತು ಶಾದಾಬ್ ಖಾನ್(20) ಸಾಹಸದಿಂದ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸಿತು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 137 (ಬಾಬರ್ ಅಜಂ 32, ಶಾನ್ ಮಸೂದ್ 38, ಆದಿಲ್ ರಶೀದ್ 22ಕ್ಕೆ2, ಸ್ಯಾಮ್ ಕರನ್ 12ಕ್ಕೆ 3).
ಇಂಗ್ಲೆಂಡ್ : ೧೦ ಓವರ್‌ಗಳಲ್ಲಿ ೫ ವಿಕೆಟ್‌ಗೆ ೧೩೮ (ಬೆನ್ ಸ್ಟೋಕ್ಸ್ ೫೨*, ಜೋಸ್ ಬಟ್ಲರ್ ೨೬; ಹ್ಯಾರಿಸ್ ರವೂಫ್ ೨೩ಕ್ಕೆ೨).
ಇದನ್ನೂ ಓದಿ | PAK VS ENG | ಅಲ್ಪ ಮೊತ್ತಕ್ಕೆ ಕುಸಿದ ಪಾಕಿಸ್ತಾನ; ಇಂಗ್ಲೆಂಡ್ ಗೆಲುವಿಗೆ 138 ರನ್ ಗುರಿ