Site icon Vistara News

Explainer: ಬಿಸಿಸಿಐ ಗುತ್ತಿಗೆ ಪಟ್ಟಿಯಿಂದ ಹೊರಬಿದ್ದ ಅಯ್ಯರ್, ಕಿಶನ್​ಗೆ ಭಾರತ ಪರ ಆಡಬಹುದೇ?

ishan kishan and shreyas

ಮುಂಬಯಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 2023-24ರ ಋತುವಿಗಾಗಿ ಕೇಂದ್ರ ಗುತ್ತಿಗೆ(BCCI Annual Contract) ಪಡೆದ ಆಟಗಾರರ ಪಟ್ಟಿಯನ್ನು ಬುಧವಾರ ಪ್ರಕಟಿಸಿತ್ತು. ಈ ಪಟ್ಟಿಯಿಂದ ಇಶಾನ್​ ಕಿಶನ್(Ishan Kishan)​ ಮತ್ತು ಶ್ರೇಯಸ್​​ ಅಯ್ಯರ್(Shreyas Iyer)​ ಅವರನ್ನು ಕೈಬಿಡಲಾಗಿತ್ತು. ಇದೀಗ ಉಭಯ ಆಟಗಾರರು ಇನ್ನು ಮುಂದೆ ಭಾರತ ತಂಡದ ಪರ ಆಡಬಹುದೇ? ಎನ್ನುವ ಪ್ರಶ್ನೆಯೊಂದು ಕ್ರಿಕೆಟ್​ ಅಭಿಮಾನಿಗಳಿಗೆ ಕಾಡಿದೆ. ಇದಕ್ಕೆ ಉತ್ತರ ಇಲ್ಲಿದೆ.

ಬಿಸಿಸಿಐ ಕೇಂದ್ರೀಯ ಒಪ್ಪಂದದಿಂದ ಆಟಗಾರರನ್ನು ಕೈಬಿಟ್ಟರೂ ಕೂಡ ಆ ಆಟಗಾರರು ಭಾರತದ ಪರ ಆಡಲು ಲಭ್ಯವಿರುತ್ತಾರೆ. ಆಟಗಾರರ ಪ್ರದರ್ಶನ ಮತ್ತು ಫಿಟ್ನೆಸ್ ಮೇಲೆ ಅವರ ಆಯ್ಕೆ ನಿರ್ಧಾರವಾಗುತ್ತದೆ. ಈ ಬಾರಿ 11 ಆಟಗಾರರು ಮೊದಲ ಬಾರಿಗೆ ಕೇಂದ್ರ ಗುತ್ತಿಗೆಯಲ್ಲಿ ಸ್ಥಾನ ಪಡೆದಿದ್ದಾರೆ. ಇದಕ್ಕೂ ಮುನ್ನ ಈ ಆಟಗಾರರು ಭಾರತ ಪರ ಆಡುತ್ತಿದ್ದರು. ಹೀಗಾಗಿ ಭಾರತ ಪರ ಆಡಬೇಕೆಂದರೆ ಬಿಸಿಸಿಐ ಕೇಂದ್ರ ಗುತ್ತಿಗೆಗೆ ಒಳಪಡಬೇಕೆಂದಿಲ್ಲ. ಪ್ರದರ್ಶನದ ಆಧಾರದಲ್ಲಿಯೂ ಭಾರತ ತಂಡಕ್ಕೆ ಆಯ್ಕೆಯಾಗಬಹುದು. ಹೀಗಾಗಿ ಇಶಾನ್​ ಮತ್ತು ಶ್ರೇಯಸ್​ ಅವರು ದೇಶೀಯ ಹಾಗೂ ಐಪಿಎಲ್​ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದರೆ ಭಾರತ ತಂಡಕ್ಕೆ ಆಯ್ಕೆಯಾಗಬಹುದು.

ವೇತನ ಶ್ರೇಣಿ ಹೇಗೆ?


ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಪ್ರನಿಧಿಸುವ ಆಟಗಾರರಿಗೆ ಬಿಸಿಸಿಐ ಪ್ರತಿ ವರ್ಷ ಅಂದರೆ 12 ತಿಂಗಳಿಗೆ ಅನ್ವಯವಾಗುವಂತೆ ವೇತನ ಒಪ್ಪಂದವನ್ನು ನೀಡುತ್ತದೆ. ಈ ಒಪ್ಪಂದದ ಪ್ರಕಾರ ಆಟಗಾರರು ಈ ವರ್ಷದಲ್ಲಿ ಭಾರತ ಪರ ಆಡಲಿ ಅಥವಾ ಇಲ್ಲದಿರಲಿ ಅವರಿಗೆ ನಿಗದಿಪಡಿಸಿದ ಮೊತ್ತವನ್ನು ಬಿಸಿಸಿಐ ನೀಡುತ್ತದೆ. ಅದಂರಂತೆ ಬಿಸಿಸಿಐ ನಾಲ್ಕು ಗ್ರೇಡ್​ಗಳಾಗಿ ಆಟಗಾರರನ್ನು ವಿಂಗಡಿಸುತ್ತದೆ. A+ ಗ್ರೇಡ್​ ಪಡೆದ ಆಟಗಾರರು ವರ್ಷಕ್ಕೆ 7 ಕೋಟಿ ರೂ. ಮೊತ್ತ ಪಡೆದರೆ, A ಗ್ರೇಡ್​ ಆಟಗಾರರು 5 ಕೋಟಿ ರೂ, B ಗ್ರೇಡ್​ ಆಟಗಾರರು 3 ಕೋಟಿ ಮತ್ತು C ದರ್ಜೆಯ ಆಟಗಾರರು ವಾರ್ಷಿಕ 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

ಇದನ್ನೂ ಓದಿ WPL 2024: ಮೈದಾನಕ್ಕೆ ಓಡಿ ಬಂದವನ ಹೆಡೆಮುರಿ ಕಟ್ಟಿದ ಯುಪಿ ತಂಡದ ನಾಯಕಿ ಅಲಿಸ್ಸಾ ಹೀಲಿ

ರಾಹುಲ್​-ಗಿಲ್​ಗೆ ಬೋನಸ್​


ಕಳೆದ ಬಾರಿಯಂತೆ ಈ ಬಾರಿಯೂ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಹಾಗೂ ರವಿಂದ್ರ ಜಡೇಜಾ ಅವರನ್ನು ಎ+ ಗುತ್ತಿಗೆಯ ಪಟ್ಟಿಯಲ್ಲಿ ಪರಿಗಣಿಸಲಾಗಿದೆ. ಈ ಪಟ್ಟಿಗೆ ಯಾವುದೇ ಹೊಸ ಆಟಗಾರನ ಸೇರ್ಪಡೆಯಾಗಿಲ್ಲ. ಎ ಗ್ರೇಡ್​ನಲ್ಲಿ ಕೆಲ ಬದಲಾವಣೆಗಳು ಸಂಭವಿಸಿದೆ. ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಶುಭಮನ್ ಗಿಲ್ ಅವರಿಗೆ ‘ಎ’ ಗ್ರೇಡ್‌ ಪಟ್ಟಿಗೆ ಭಡ್ತಿ ನೀಡಲಾಗಿದೆ. ಕಳೆದ ವರ್ಷ ಉಭಯ ಆಟಗಾರರು ‘ಬಿ’ ಗ್ರೇಡ್​ನಲ್ಲಿದ್ದರು.

ಟೆಸ್ಟ್​ ಕ್ರಿಕೆಟ್​ನಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಎಡಗೈ ಬ್ಯಾಟರ್​ ಯಶಸ್ವಿ ಜೈಸ್ವಾಲ್ ತಮ್ಮ ಚೊಚ್ಚಲ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಅನುಭವಿ ಆಟಗಾರರನ್ನು ಹಿಂದಿಕ್ಕಿ ‘ಬಿ’ ಪಡೆದಿದ್ದಾರೆ. ರಿಂಕು ಸಿಂಗ್, ತಿಲಕ್ ವರ್ಮಾ, ಋತುರಾಜ್ ಗಾಯಕ್ವಾಡ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ಮುಖೇಶ್ ಕುಮಾರ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ರಜತ್ ಪಾಟಿದಾರ್ ಈ ಬಾರಿಯ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಚೊಚ್ಚಲ ಸ್ಥಾನ ಪಡೆದ ಆಟಗಾರರಾಗಿದ್ದಾರೆ.

2022-23 ಋತುವಿನಲ್ಲಿ ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಸ್ಥಾನ ಪಡೆದಿದ್ದ ಅನುಭವಿ ಆಟಗಾರರಾದ ಚೇತೇಶ್ವರ್ ಪೂಜಾರ, ಉಮೇಶ್ ಯಾದವ್, ಶಿಖರ್ ಧವನ್, ದೀಪಕ್ ಹೂಡಾ, ಯಜುವೇಂದ್ರ ಚಹಲ್ ಮತ್ತು ಅಜಿಂಕ್ಯ ರಹಾನೆ ಈ ಬಾರಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಇವರನ್ನು ಪ್ರಸಕ್ತ ಸಾಲಿನ ಆಟಗಾರರ ಒಪ್ಪಂದ ಪಟ್ಟಿಯಿಂದ ಬಿಸಿಸಿಐ ಕೈಬಿಟ್ಟಿದೆ. ಆಯ್ಕೆ ಸಮಿತಿಯು ವೇಗದ ಬೌಲಿಂಗ್ ಒಪ್ಪಂದಗಳಿಗಾಗಿ ಚೊಚ್ಚಲ ಟೆಸ್ಟ್​ ಆಡಿದ ಆಕಾಶ್ ದೀಪ್, ವಿಜಯ್ ಕುಮಾರ್ ವೈಶಾಕ್, ಉಮ್ರಾನ್ ಮಲಿಕ್, ಯಶ್ ದಯಾಳ್ ಮತ್ತು ವಿದ್ವತ್ ಕಾವೇರಪ್ಪ ಅವರ ಹೆಸರನ್ನು ಶಿಫಾರಸು ಮಾಡಿದೆ.

ಬಿಸಿಸಿಐ ಕೇಂದ್ರ ಒಪ್ಪಂದಗಳ ಪಟ್ಟಿ

ಗ್ರೇಡ್ A+ (4 ಕ್ರಿಕೆಟಿಗರು): ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್​ಪ್ರೀತ್​ ಬುಮ್ರಾ ಮತ್ತು ರವೀಂದ್ರ ಜಡೇಜಾ.

ಗ್ರೇಡ್ ಎ (6 ಕ್ರಿಕೆಟಿಗರು): ಆರ್ ಅಶ್ವಿನ್, ಮೊಹಮ್ಮದ್​ ಶಮಿ, ಮೊಹಮ್ಮದ್ ಸಿರಾಜ್, ಕೆ.ಎಲ್ ರಾಹುಲ್, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.

ಗ್ರೇಡ್ ಬಿ (5 ಕ್ರಿಕೆಟಿಗರು) ಸೂರ್ಯಕುಮಾರ್ ಯಾದವ್, ರಿಷಭ್​ ಪಂತ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್.

ಗ್ರೇಡ್ ಸಿ (15 ಕ್ರಿಕೆಟಿಗರು) ರಿಂಕು ಸಿಂಗ್, ತಿಲಕ್ ವರ್ಮಾ, ಋತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆ.ಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟಿದಾರ್.

Exit mobile version