ಮುಂಬಯಿ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ(Sania Mirza) ಅವರು ಕೆಲ ದಿನಗಳ ಹಿಂದೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಮಲಿಕ್(Shoaib Malik) ಅವರಿಗೆ ವಿಚ್ಚೇದನ ನೀಡಿದ್ದರು. ಈ ಮೂಲಕ 13 ವರ್ಷದ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಿದ್ದರು. ಇದರ ಬೆನ್ನಲ್ಲೇ ಕೆಲ ಕಿಡಿಗೇಡಿಗಳು ಕ್ರಿಕೆಟಿಗ ಮೊಹಮ್ಮದ್ ಶಮಿ(Mohammed Shami) ಮತ್ತು ಸಾನಿಯಾ ಮಿರ್ಜಾ ನಿಶ್ಚಿತಾರ್ಥ ಮಾಡಿಕೋಂಡಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ(Fact Check) ಹಬ್ಬಿದ್ದಾರೆ.
ಡೀಪ್‌ಫೇಕ್(Deepfake) ಮೂಲಕ ಶಮಿ ಮತ್ತು ಸಾನಿಯಾ ಮಿರ್ಜಾ ಅವರ ಮುಖವನ್ನು ಯಾರದ್ದೋ ಮದುವೆಯ ಫೋಟೊಗೆ ಎಡಿಟ್ ಮಾಡಿ ಶಮಿ ಮತ್ತು ಸಾನಿಯಾ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೋಂಡಿದ್ದಾರೆ ಎಂದು ಟ್ವೀಟರ್ ಎಕ್ಸ್ನಲ್ಲಿ ಕಿಡಿಗೇಡಿಗಳು ವೈರಲ್ ಮಾಡಿದ್ದಾರೆ. ಈ ಮೂಲಕ ಕೀಳು ಮಟ್ಟದ ಮನೋಭಾವ ತೋರಿದ್ದಾರೆ. ಶಮಿ ಮತ್ತು ಸಾನಿಯಾ ಮಿರ್ಜಾ ಅವರ ಡೀಪ್‌ಫೇಕ್ ಫೋಟೊ ಕಂಡ ಕೆಲ ನೆಟ್ಟಿಗರು, ಈ ವಿಕೃತಿ ತೋರಿದರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಕೆಲವರು ಖಾಸಗಿತನವನ್ನು ಗೌರವಿಸುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ Sania Mirza: ವಿಚ್ಛೇದನದ ಬಳಿಕ ಮೊದಲ ಫೋಟೊ ಹಂಚಿಕೊಂಡ ಸಾನಿಯಾ ಮಿರ್ಜಾ
Md Shami Bhai let's go Saniya Mirza 🤝#ShoaibMalik #SanaJaved 😳🌟 pic.twitter.com/J7zAOLmY3q
— Fatima Khan (@afficasm) January 20, 2024
ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೊ ದೇಶಾದ್ಯಂತ ಭಾರಿ ಸಂಚಲನ ಉಂಟು ಮಾಡಿತ್ತು. ಪ್ರಮುಖ ಸೆಲೆಬ್ರಿಟಿಗಳು ಕೃತ್ಯವನ್ನು ಖಂಡಿಸಿದ್ದರ ಜತೆಗೆ ಕ್ರಮಕ್ಕೆ ಆಗ್ರಹಿಸಿದ್ದರು. ಇದಾದ ನಂತರ ದೆಹಲಿ ಪೊಲೀಸರು ಭಾರತೀಯ ದಂಡ ಸಂಹಿತೆಯ 465 (ನಕಲು), 469 (ಗೌರವಕ್ಕೆ ಧಕ್ಕೆ), ಮಾಹಿತಿ ತಂತ್ರಜ್ಞಾನ ಕಾಯ್ದೆ (2000)ಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಪ್ರಕರಣದ ಪ್ರಮುಖ ಆರೋಪಿಯನ್ನು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದರು. ರಶ್ಮಿಕಾ ಮಂದಣ್ಣ ಅವರ ಬಳಿಕ ಕತ್ರಿನಾ ಕೈಫ್, ಕಾಜೋಲ್, ಆಲಿಯಾ ಭಟ್, ಸಚಿನ್ ತೆಂಡೂಲ್ಕರ್ ಸೇರಿ ಹಲವರ ಡೀಪ್‌ಫೇಕ್ ವಿಡಿಯೊಗಳು ಸುದ್ದಿಯಾಗಿದ್ದವು. ಇದೀಗ ಶಮಿ ಮತ್ತು ಸಾನಿಯಾ ಮಿರ್ಜಾ ಅವರ ಡೀಪ್‌ಫೇಕ್ ಫೋಟೊಗಳು ವೈರಲ್ ಆಗಿದೆ.
ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರ ಚಿಂತನೆ
ಡೀಪ್‌ಫೇಕ್ ವಿಡಿಯೊಗಳು ಆತಂಕ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ವಿಡಿಯೊ ಪಸರಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಡೀಪ್‌ಫೇಕ್ ಈಗ ಸಮಾಜಕ್ಕೆ ಮಾರಕವಾಗುತ್ತಿದೆ. ಇದು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ, ಕ್ಷಿಪ್ರವಾಗಿ ಕಠಿಣ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಇದರ ದಿಸೆಯಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಮುಂಬರುವ ದಿನಗಳಲ್ಲಿ ಡೀಪ್‌ಫೇಕ್ ನಿಯಂತ್ರಣದ, ಕ್ರಮ ತೆಗೆದುಕೊಳ್ಳುವುದರ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಮುಂಬರುವ ಡಿಸೆಂಬರ್‌ನಲ್ಲಿ ಇದರ ಕುರಿತು ಮತ್ತಷ್ಟು ಚರ್ಚಿಸಲಾಗುತ್ತದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನೂ ಇದಕ್ಕಾಗಿ ಬಳಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.