ಜೈಪುರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಐಪಿಎಲ್ ಇತಿಹಾಸದಲ್ಲಿ 4000 ರನ್ ಪೂರೈಸಿದ್ದಾರೆ. ಐಪಿಎಲ್ 16ನೇ ಆವೃತ್ತಿಯ 60ನೇ ಪಂದ್ಯದಲ್ಲಿ (IPL 2023) ರಾಜಸ್ಥಾನ್ ರಾಯಲ್ಸ್ ವಿರುದ್ಧ ಈ ಸಾಧನೆ ಮಾಡಿದ್ದಾರೆ. ಈ ಮೈಲಿಗಲ್ಲನ್ನು ಸಾಧಿಸಲು ದಕ್ಷಿಣ ಆಫ್ರಿಕಾದ ಬಲಗೈ ಬ್ಯಾಟರ್ 128 ಪಂದ್ಯಗಳನ್ನು ಆಡಿದ್ದಾರೆ. ಅವರು ಪ್ರಸ್ತುತ ಋತುವಿನಲ್ಲಿ 12 ಪಂದ್ಯಗಳಲ್ಲಿ 641 ರನ್ ಬಾರಿಸಿ ಐಪಿಎಲ್ ಆರೆಂಜ್ ಕ್ಯಾಪ್ ಹೊಂದಿದ್ದಾರೆ.
ಫಾಫ್ ಡು ಪ್ಲೆಸಿಸ್ ಸಮರ್ಥ ನಾಯಕತ್ವದಲ್ಲಿ ಆಡುತ್ತಿರುವ ಆರ್ಸಿಬಿ 2022ರ ಆವೃತ್ತಿಯಲ್ಲಿ ಐಪಿಎಲ್ ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿತ್ತು. ಹಾಲಿ ಋತುವಿನಲ್ಲಿಯೂ ಪ್ಲೇಆಫ್ಗೇರುವ ಅವಕಾಶ ಹೊಂದಿದೆ. 38ರ ವರ್ಷದ ಡು ಪ್ಲೆಸಿಸ್ ಅವರಿಗೆ ಆರ್ಸಿಬಿ ತಂಡವನ್ನು ನಾಕೌಟ್ ಹಂತಕ್ಕೆ ಕೊಂಡೊಯ್ಯುವ ಅನುಭವವೂ ಇದೆ. ಆದಾಗ್ಯೂ, ಮೂರು ಬಾರಿಯ ಫೈನಲಿಸ್ಟ್ ರಾಜಸ್ಥಾನ್ ರಾಯಲ್ಸ್ ವಿರುದ್ಧ 112 ರನ್ಗಳ ಬೃಹತ್ ಅಂತರದ ಗೆಲುವು ದಾಖಲಿಸಿರುವ ಆರ್ಸಿಬಿಗೆ ಇನ್ನುಳಿದಿರುವ ಪಂದ್ಯಗಳಲ್ಲಿ ಗೆಲುವು ಅನಿವಾರ್ಯ. ಜತೆಗೆ ಲಕ್ನೊ ಹಾಗೂ ಮುಂಬಯಿ ಇಂಡಿಯನ್ಸ್ ತಂಡಗಳ ಉಳಿದ ಪಂದ್ಯಗಳ ಫಲಿತಾಂಶವೂ ಮುಖ್ಯ. ಆರ್ಸಿಬಿ ತಂಡ ಸನ್ರೈಸರ್ಸ್ ಹೈದರಾಬಾದ್ (ಮೇ 18) ಮತ್ತು ಗುಜರಾತ್ ಟೈಟನ್ಸ್ (ಮೇ 21) ವಿರುದ್ಧ ಆಡಲಿದೆ.
ಪ್ಲೆಸಿಸ್ ಐಪಿಎಲ್ ಸಾಧನೆ
2012 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಫಾಫ್ ಡು ಪ್ಲೆಸಿಸ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿತು. ಚೊಚ್ಚಲ ಋತುವಿನಲ್ಲಿ, ಆರಂಭಿಕ ಆಟಗಾರನಾಗಿ ಆಡಿದ ಫಾಫ್ 13 ಪಂದ್ಯಗಳಲ್ಲಿ 130.92 ಸ್ಟ್ರೈಕ್ ರೇಟ್ನಲ್ಲಿ 398 ರನ್ ಗಳಿಸಿದರು. ಅವರು ಮುಂದಿನ ಹತ್ತು ವರ್ಷಗಳ ಕಾಲ ಫ್ರಾಂಚೈಸಿಯನ್ನು ಪ್ರತಿನಿಧಿಸಿದ್ದರು. ಈ ಹಂತದಲ್ಲಿ 2935 ರನ್ ಗಳಿಸಿದ್ದಾರೆ ಹಾಗೂ ಮೂರು ಬಾರಿ ಟ್ರೋಫಿ ಗೆದ್ದಿದ್ದಾರೆ. 2021 ರಲ್ಲಿ ಸಿಎಸ್ಕೆ ತಂಡ ಐಪಿಎಲ್ನಲ್ಲಿ ತನ್ನ ನಾಲ್ಕನೇ ಪ್ರಶಸ್ತಿಯನ್ನು ಗೆದ್ದಾಗ, ಡು ಪ್ಲೆಸಿಸ್ 16 ಪಂದ್ಯಗಳಲ್ಲಿ 633 ರನ್ ಗಳಿಸಿದ್ದರು. ಅಲ್ಲದೆ, ಆರೆಂಜ್ ಕ್ಯಾಪ್ ರೇಸ್ನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದರು.
ಅವರ ಅದ್ಭುತ ಪ್ರದರ್ಶನಕ್ಕೆ ಮೋಡಿಗೊಳಗದ ಸಿಎಸ್ಕೆ ಫ್ರಾಂಚೈಸಿ ಅವರನ್ನು 2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಮತ್ತೆ ತನ್ನ ತಂಡಕ್ಕೆ ಸೇರಿಸಿಕೊಳ್ಳುವುದಕ್ಕೆ ಯತ್ನಿಸಿತು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅವರಿಗೆ 7 ಕೋಟಿ ರೂ.ಗಳನ್ನು ನೀಡಿ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಆರ್ಸಿಬಿ ಬಿಡ್ ಸರಿಗಟ್ಟಲು ಸಿಎಸ್ಕೆ ತಂಡಕ್ಕೆ ಸಾಧ್ಯವಾಗಲಿಲ್ಲ. ತಂಡಕ್ಕೆ ಸೇರಿಸಿಕೊಂಡ ಆರ್ಸಿಬಿ ಅವರಿಗೆ ನಾಯಕತ್ವದ ಹೊಣೆಗಾರಿಕೆ ನೀಡಿತು. ಆರ್ಸಿಬಿ ತಂಡದ ಪರವಾಗಿಯೂ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.