ನವದೆಹಲಿ: ಏಕದಿನ ವಿಶ್ವಕಪ್ ಟೂರ್ನಿಯ (ICC World Cup 2023) ಭಾರತ ಹಾಗೂ ಅಫಘಾನಿಸ್ತಾನ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಆ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಪಂದ್ಯ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿದೆ. ಹಾಗೆಯೇ, ವಿರಾಟ್ ಕೊಹ್ಲಿ (Virat Kohli) ಅಫಘಾನಿಸ್ತಾನದ ನವೀನ್ ಉಲ್ ಹಕ್ ಅವರು ಸಿಟ್ಟು, ಸೆಡವು ಮರೆತು ಒಂದಾಗಿದ್ದಾರೆ. ಆ ಮೂಲಕ ಕೊಹ್ಲಿಯು ಶಾಂತಿ, ಸೌಹಾರ್ದತೆ ಹಾಗೂ ಕ್ರೀಡಾ ಸ್ಫೂರ್ತಿಯ ಸಂದೇಶ ರವಾನಿಸಿದ್ದಾರೆ. ಆದರೆ, ಮೈದಾನದಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಭಾರತದ ಕ್ರಿಕೆಟ್ ಅಭಿಮಾನಿಗಳು (Indian Cricket Fans) ಮಾತ್ರ ಹೊಡೆದಾಡಿಕೊಂಡಿದ್ದಾರೆ.
ಭಾರತದ ಕ್ರಿಕೆಟ್ ಅಭಿಮಾನಿಗಳ ಮಧ್ಯೆಯೇ ಭಾರತ-ಅಫಘಾನಿಸ್ತಾನ ಪಂದ್ಯದ ವೇಳೆ ಜಗಳ ನಡೆದಿದೆ. ಕೆಲವರು ಭಾರತ ಕ್ರಿಕೆಟ್ ತಂಡದ ಜೆರ್ಸಿ ತೊಟ್ಟಿದ್ದು, ಇನ್ನೂ ಕೆಲವರು ಸಾಮಾನ್ಯ ಉಡುಪಿನಲ್ಲಿದ್ದಾರೆ. ಎರಡು ಗುಂಪುಗಳ ಮಧ್ಯೆ ಮೊದಲು ವಾಗ್ವಾದ ಆರಂಭವಾಗಿದೆ. ಇದಾದ ಬಳಿಕ ಕೈ ಕೈ ಮಿಲಾಯಿಸಿಕೊಳ್ಳುವಷ್ಟರ ಮಟ್ಟಿಗೆ ಜಗಳ ತಾರಕಕ್ಕೇರಿದೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಿಂದ ಟೀಕೆಗಳು ವ್ಯಕ್ತವಾಗಿವೆ. ಮೈದಾನದಲ್ಲಿ ಪ್ರತಿಸ್ಪರ್ಧಿ ಆಟಗಾರರೊಂದಿಗೇ ಭಾರತದ ಆಟಗಾರರು ಸೌಹಾರ್ದತಯುತವಾಗಿ ಇರುವಾಗ, ನಾವೇ ಹೀಗೆ ಕಿತ್ತಾಡಿಕೊಂಡರೆ ಹೇಗೆ ಎಂದು ಜನ ಜಾಡಿಸಿದ್ದಾರೆ.
ದುರ್ವರ್ತನೆ ತೋರಿದ ಫ್ಯಾನ್ಸ್
Lafda bhi ho gya pic.twitter.com/qFSm6dufCr
— KUNAL DABAS (@kunaldabas_) October 11, 2023
ಕೊಹ್ಲಿ-ನವೀನ್ ಭಾಯಿಭಾಯಿ
ಕಳೆದ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ಮಧ್ಯೆ ಉಂಟಾದ ವಾಗ್ವಾದದ ಬಳಿಕ ಇಬ್ಬರ ಮಧ್ಯೆ ಉಂಟಾಗಿದ್ದ ಬಿರುಕನ್ನು ಭಾರತ-ಆಫ್ಘನ್ ಪಂದ್ಯದಲ್ಲಿ ಸರಿ ಮಾಡಿಕೊಳ್ಳುವ ಮೂಲಕ ಇಬ್ಬರೂ ಆಟಗಾರರು ಕ್ರೀಡಾ ಸ್ಫೂರ್ತಿ ಮೆರೆದರು. ಕೊಹ್ಲಿ ಹಾಗೂ ನವಿನ್ ಕೈ ಕುಲುಕಿ ಮಾತನಾಡುವ ವಿಡಿಯೊ ಮೈದಾನವನ್ನೇ ಸ್ತಬ್ಧಗೊಳಿಸಿತು. ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಬೇಸರ ಮೂಡಿತು. ಆದರೆ, ಕೊಹ್ಲಿಯ ಅಪ್ಪಟ ಅಭಿಮಾನಿಗಳು ಆಟಗಾರನ ಹಿರಿತನ ಹಾಗೂ ಕ್ರೀಡಾಸ್ಫೂರ್ತಿಯನ್ನು ಕೊಂಡಾಡಿದರು. ಅಂತೆಯೇ ಅವರಿಬ್ಬರು ಕೈ ಕುಲುಕುವ ದೃಶ್ಯದ ವಿಡಿಯೊಗಳು ಲಕ್ಷಾಂತರ ಲೈಕ್ಗಳನ್ನು ಪಡೆದುಕೊಂಡಿವೆ.
Virat & Navin ul HaQ 🤝 #INDvsAFG pic.twitter.com/xC6AXGfd4R
— HARDIK THACKER (@iamHardik42) October 11, 2023
ಹಿರಿಯ ಕ್ರಿಕೆಟಿಗರು ಕೂಡ ಕೊಹ್ಲಿಯ ನಡೆಯನ್ನು ಮಾದರಿ ಎಂದಿದ್ದಾರೆ. ಮೈದಾನದಲ್ಲಿ ನಡೆದ ಘಟನೆಗಳನ್ನು ಅಲ್ಲೇ ಮುಗಿಸುವುದು ಕ್ರೀಡಾಪಟುವೊಬ್ಬನ ದೊಡ್ಡ ಗುಣ ಎಂದು ಹೊಗಳಿದ್ದಾರೆ. ಮತ್ತೊಂದೆಡೆ, ನಾಯಕ ರೋಹಿತ್ ಶರ್ಮಾ (131) ಅವರ ದಾಖಲೆಯ ಶತಕ ಹಾಗೂ ವಿರಾಟ್ ಕೊಹ್ಲಿಯ (55) ಅಜೇಯ ಅಜೇಯ ಅರ್ಧ ಶತಕದ ನೆರವಿನಿಂದ ಮಿಂಚಿದ ಭಾರತ ತಂಡ ವಿಶ್ವ ಕಪ್ನ ತನ್ನ ಎರಡನೇ ಪಂದ್ಯದಲ್ಲಿ ಅಪಘಾನಿಸ್ತಾನ ವಿರುದ್ಧ 8 ವಿಕೆಟ್ಗಳ ಸುಲಭ ವಿಜಯ ದಾಖಲಿಸಿದೆ.
ಇದನ್ನೂ ಓದಿ: Rohit Sharma : ಕಪಿಲ್ ದೇವ್ 40 ವರ್ಷದ ಹಿಂದೆ ಸೃಷ್ಟಿಸಿದ್ದ ದಾಖಲೆ ಮುರಿದ ರೋಹಿತ್
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಅಫಘಾನಿಸ್ತಾನ ತಂಡ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗೆ 272 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ ಇನ್ನೂ 90 ಎಸೆತಗಳು ಬಾರಿ ಇರುವಂತೆಯೇ 2 ವಿಕೆಟ್ ನಷ್ಟಕ್ಕೆ 273 ರನ್ ಬಾರಿಸಿ ಗೆಲುವು ಸಾಧಿಸಿತು. ಬೌಲಿಂಗ್ ವೇಳೆ 39 ರನ್ಗಳಿಗೆ 4 ವಿಕೆಟ್ ಉರುಳಿಸಿದ ಜಸ್ಪ್ರಿತ್ ಬುಮ್ರಾ ಕೂಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.