Site icon Vistara News

ಅಂಪೈರ್‌ಗಳ ಪಟ್ಟಿ ಕಂಡು ನಿಟ್ಟುಸಿರು ಬಿಟ್ಟ ಟೀಮ್​ ಇಂಡಿಯಾ ಅಭಿಮಾನಿಗಳು; ಕಾರಣ ಏನು?

umpire kettleborough

ಮುಂಬಯಿ: ಏಕದಿನ ವಿಶ್ವಕಪ್‌ನ(ICC World Cup 2023) ಸೆಮಿಫೈನಲ್‌ ಪಂದ್ಯಗಳಿಗೆ(semi final umpires) ಐಸಿಸಿ ಅಂಪೈರ್‌ಗಳ ಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ. ಈ ಪಟ್ಟಿ ಕಂಡ ಟೀಮ್‌ ಇಂಡಿಯಾ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದು ರೋಹಿತ್‌ ಶರ್ಮ ಪಡೆಗೆ ಈ ಬಾರಿ ಫೈನಲ್‌ ಪ್ರವೇಶ ಖಚಿತ ಎಂದಿದ್ದಾರೆ. ಭಾರತ ಮತ್ತು ನ್ಯೂಜಿಲ್ಯಾಂಡ್(IND vs NZ)​ ತಂಡಗಳು ಬುಧವಾರ(ನ.15) ನಡೆಯುವ ಸೆಮಿಫೈನಲ್‌ನಲ್ಲಿ ಸೆಣಸಾಟ ನಡೆಸಲಿದೆ. ಈ ಪಂದ್ಯಕ್ಕೆ ರಿಚರ್ಡ್‌ ಕೆಟಲ್‌ಬರೋ(Richard Kettleborough) ಅಂಪೈರ್‌ ಆಗದಿರುವುದೇ ಭಾರತದ ಕ್ರಿಕೆಟ್‌ ಅಭಿಮಾನಗಳ ಸಂತಸಕ್ಕೆ ಕಾರಣ.

ಹೌದು, ಐಸಿಸಿ ಕೂಟಗಳಲ್ಲಿ ರಿಚರ್ಡ್‌ ಕೆಟಲ್‌ಬರೋ ಟೀಮ್ ಇಂಡಿಯಾ ಪಾಲಿಗೆ ಐರನ್ ಲೆಗ್ ಎನಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ರಿಚರ್ಡ್‌ ಕೆಟಲ್‌ಬರೋ ಕಾರ್ಯನಿರ್ವಹಿಸಿದ ಎಲ್ಲ ಮಹತ್ವದ ಪಂದ್ಯದಲ್ಲಿಯೂ ಭಾರತ ತಂಡ ಸೋಲುಕಂಡಿದೆ. ಆದರೆ ಇದೀಗ ಭಾರತ ಮತ್ತು ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯಕ್ಕೆ ಅವರ ಹೆಸರು ಇಲ್ಲದಿರುವುದರಿಂದ ಭಾರತ ಈ ಬಾರಿ ಫೈನಲ್‌ಗೇರುವುದು ಖಚಿತ ಎನ್ನುತ್ತಾರೆ ಅಭಿಮಾನಿಗಳು.

ಇದನ್ನೂ ಓದಿ IND vs NZ: ಮುಂದಿದೆ ಟೇಬಲ್​ ಟಾಪ್​ ಕಂಟಕ; ಪಾರಾದೀತೇ ಭಾರತ?

ರಿಚರ್ಡ್‌ ಕೆಟಲ್‌ಬರೋ ಅಂಪೈರಿಂಗ್‌ನಲ್ಲಿ ಭಾರತ ಸೋತ ವಿವರ ಇಲ್ಲಿದೆ

2014 ರಿಂದ ರಿಚರ್ಡ್‌ ಕೆಟಲ್‌ಬರೋ ಅಂಪೈರಿಂಗ್‌ ಮಾಡಿದ ಎಲ್ಲ ಪ್ರಮುಖ ಪಂದ್ಯಗಳಲ್ಲಿಯೂ ಟೀಮ್‌ ಇಂಡಿಯಾ ಸೋಲು ಕಂಡಿದೆ. 2014ರ ಟಿ20 ವಿಶ್ವ ಕಪ್ ಫೈನಲ್, 2015ರ ಏಕದಿನ ವಿಶ್ವ ಕಪ್ ಸೆಮಿಫೈನಲ್, 2016ರ ಟಿ20 ವಿಶ್ವ ಕಪ್ ಸೆಮಿಫೈನಲ್, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್, 2019ರ ಏಕದಿನ ವಿಶ್ವ ಕಪ್ ಸೆಮಿಫೈನಲ್, 2021ರ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ಸೋತಿತ್ತು. ಹೀಗಾಗಿ ಭಾರತ ತಂಡ ಆಡುವ ಪ್ರಮುಖ ಪಂದ್ಯಗಳಲ್ಲಿ ರಿಚರ್ಡ್‌ ಕೆಟಲ್‌ಬರೋ ಅಂಪೈರ್ ಆದರೆ ಭಾರತ ಸೋಲುವುದು ಖಚಿತ ಎಂಬ ಅಭಿಪ್ರಾಯ ಅಭಿಮಾನಿಗಳದ್ದಾಗಿತ್ತು. ಇದೀಗ ನ್ಯೂಜಿಲ್ಯಾಂಡ್​ ವಿರುದ್ಧದ ಸೆಮಿಫೈನಲ್‌ಗೆ ಅವರು ಸಿಗದಿರುವುದು ಟೀಮ್​ ಇಂಡಿಯಾ ಅಭಿಮಾನಿಗಳಿಗೆ ಸಂತಸ ತಂದಿದೆ.

ಇದನ್ನೂ ಓದಿ ವಿಶ್ವಕಪ್​ ಇತಿಹಾಸದಲ್ಲಿ ನ್ಯೂಜಿಲ್ಯಾಂಡ್​ ತಂಡದ ಸೆಮಿಫೈನಲ್​ ಸಾಧನೆ ಹೇಗಿದೆ?

ಧೋನಿ ರನೌಟ್​ ಕಂಡು ಬೇಸರಗೊಂಡಿದ್ದ ಕೆಟಲ್‌ಬರೋ

ಅದು, ಮ್ಯಾಂಚೆಸ್ಟರ್‌ನಲ್ಲಿ ನಡೆದ ಮುಖಾಮುಖಿಯಾಗಿತ್ತು. ಮೊದಲು ಬ್ಯಾಟಿಂಗ್​ ನಡೆಸಿದ ನ್ಯೂಜಿಲ್ಯಾಂಡ್​ ತಂಡ 8ಕ್ಕೆ 239 ರನ್‌ ಗಳಿಸಿತು. ಮೀಸಲು ದಿನದಲ್ಲಿ ಭಾರತ ಗೆಲುವಿಗೆ 239 ರನ್‌ ಚೇಸಿಂಗ್‌ ಲಭಿಸಿತ್ತು. ಇನಿಂಗ್ಸ್​ ಆರಂಭಗೊಂಡು 5 ರನ್​ ಗಳಿಸುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡ ವಿರಾಟ್​ ಕೊಹ್ಲಿ ಬಳಗಕ್ಕೆ ಭಾರೀ ಗಂಡಾಂತರ ಎದುರಾಗಿತ್ತು. ಆದರೆ ಮಹೇಂದ್ರ ಸಿಂಗ್​ ಧೋನಿ ಮತ್ತು ರವೀಂದ್ರ ಜಡೇಜಾ ಸೇರಿಕೊಂಡು ಇನ್ನಿಂಗ್ಸ್‌ ಒಂದನ್ನು ಕಟ್ಟತೊಡಗಿದರು. ಶತಕದ ಜತೆಯಾಟ ದಾಖಲಾಯಿತು. ಭಾರತ ಗೆಲುವಿನ ಹಾದಿಗೆ ಮರಳುತ್ತಿತ್ತು. ಇದೇ ವೇಳೆ ಜಡೇಜಾ ನಿರ್ಗಮನ. ಆ ಬಳಿಕವೂ ಧೋನಿ ಹೋರಾಟವನ್ನು ಜಾರಿಯಲ್ಲಿರಿಸಿದ್ದರು.

ಇದನ್ನೂ ಓದಿ ICC World Cup 2023: ಮರುಕಳಿಸದಿರಲಿ 2019ರ ಸೆಮಿಫೈನಲ್ ಸೋಲಿನ​ ನೋವು…

49ನೇ ಓವರ್‌ನಲ್ಲಿ ಧೋನಿ ಅರ್ಧ ಶತಕ ಪೂರೈಸಿದರು. ಧೋನಿ ಸ್ಟ್ರೈಕ್​ನಲ್ಲಿರುವವರೆಗೆ ಭಾರತಕ್ಕೆ ಗೆಲುವ ಖಚಿತ ಎಂದು ಎಲ್ಲ ಭಾರತೀಯರು ನಂಬಿದ್ದರು. ಆದರೆ ಎರಡು ರನ್​ ಓಡುವಾಗ ಮಾರ್ಟಿನ್‌ ಗಪ್ಟಿಲ್‌ ಅವರ ಡೈರೆಕ್ಟ್‌ ಥ್ರೋ ಧೋನಿಯನ್ನು ರನೌಟ್‌ ಮಾಡಿತು. ಅಲ್ಲಿಗೆ ಭಾರತದ ಫೈನಲ್‌ ಕನಸು ಕಮರಿ ಹೋಯಿತು. ಧೋನಿಯ ರನೌಟ್​ ಕಂಡು ಫೀಲ್ಡ್​ ಅಂಪೈರ್​ ಕೆಟಲ್‌ಬರೋ ಕೂಡ ಬೇಸರಗೊಂಡರು. ಈ ದೃಶ್ಯವನ್ನು ಐಸಿಸಿ ತನ್ನ ಅಧಿಕೃತ ಟ್ವೀಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿತ್ತು. ಧೋನಿ ಕಣ್ಣೀರು ಸುರಿಸುತ್ತಾ ಪೆವಿಲಿಯನ್‌ ಕಡೆಗೆ ನಡೆದರು.

ಸೆಮಿಫೈನಲ್‌ ಪಂದ್ಯಗಳ ಅಂಪೈರ್​ಗಳ ಪಟ್ಟಿ

ಭಾರತ- ನ್ಯೂಜಿಲ್ಯಾಂಡ್‌

ಫೀಲ್ಟ್​ ಅಂಪಾಯರ್: ರಿಚರ್ಡ್‌ ಇಲ್ಲಿಂಗ್‌ವರ್ತ್‌, ರಾಡ್‌ ಟ್ಯುಕರ್‌

ಥರ್ಡ್‌ ಅಂಪಾಯರ್‌: ಜೋಯೆಲ್‌ ವಿಲ್ಸನ್‌

ಫೋರ್ತ್‌ ಅಂಪಾಯರ್‌: ಅಡ್ರಿಯನ್‌ ಹೋಲ್ಡ್‌ಸ್ಟಾಕ್‌

ಮ್ಯಾಚ್‌ ರೆಫ್ರಿ: ಆ್ಯಂಡಿ ಪೈಕ್ರಾಫ್ಟ್

ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ

ಫೀಲ್ಡ್​ ಅಂಪಾಯರ್: ರಿಚರ್ಡ್‌ ಕೆಟಲ್‌ಬರೋ, ನಿತಿನ್‌ ಮೆನನ್‌

ಥರ್ಡ್‌ ಅಂಪಾಯರ್‌ ;ಕ್ರಿಸ್‌ ಗಫಾನಿ

ಫೋರ್ತ್‌ ಅಂಪಾಯರ್‌: ಮೈಕಲ್‌ ಗಾಫ್

ಮ್ಯಾಚ್‌ ರೆಫ್ರಿ:ಜಾವಗಲ್‌ ಶ್ರೀನಾಥ್‌

Exit mobile version