Site icon Vistara News

Deepfake: ಡೀಪ್‌ಫೇಕ್ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಾರಾ ತೆಂಡೂಲ್ಕರ್

sara tendulkar Deepfake

ಮುಂಬಯಿ: ಡೀಪ್‌ಫೇಕ್(Deepfake) ಮೂಲಕ ವಿಡಿಯೊ ಮತ್ತು ಫೋಟೊಗಳನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡುವ ತಂತ್ರಜ್ಞಾನದ ಬಗ್ಗೆ ಕ್ರಿಕೆಟ್ ದಿಗ್ಗಜ ಸಚಿನ್​ ತೆಂಡೂಲ್ಕರ್(Sachin Tendulkar)​ ಅವರ ಪುತ್ರಿ ಸಾರಾ ತೆಂಡೂಲ್ಕರ್(sara tendulkar)​ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಸತ್ಯವನ್ನು ತಿರುಚಿ ಮಾಡುವ ಈ ಮನರಂಜನೆ ಬಹಳ ಅಪಾಯಕಾರಿ ಎಂದು ಹೇಳಿದ್ದಾರೆ.

ಡೀಪ್‌ಫೇಕ್ ಮತ್ತು ನಕಲಿ ಖಾತೆಗಳ ಮೂಲಕ ಸಾರಾ ತೆಂಡೂಲ್ಕರ್​ ಅವರ ಹೆಸರನ್ನು ಕೆಲ ನೆಟ್ಟಿಗರು ದುರುಪಯೋಗ ಪಡಿಸಿಕೊಂಡಿದ್ದಾರೆ. ಇದರಿಂದ ಬೇಸತ್ತ ಸಾರಾ ಅಚವರು ಈಗಾಗಲೇ ತಮ್ಮ ಹೆಸರಿನಲ್ಲಿರುವ ನಕಲಿ ಟ್ವಿಟರ್​ ಎಕ್ಸ್​ ಖಾತೆಯನ್ನು ರದ್ದುಗೊಳಿಸಲು ಎಕ್ಸ್ ಸಂಸ್ಥೆಗೆ ಪತ್ರವನ್ನು ಬರೆದಿದ್ದಾರೆ.

ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಡೀಪ್‌ಫೇಕ್ ಬಗ್ಗೆ ಪೋಸ್ಟ್​ ಮಾಡಿರುವ ಸಾರಾ, ‘ನಮ್ಮೆಲ್ಲರಿಗೂ ನಮ್ಮ ಸಂತೋಷ, ದುಃಖ ಮತ್ತು ದೈನಂದಿನ ಚಟುವಟಿಕೆಗಳನ್ನು ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮ ಉತ್ತಮ ವೇದಿಕೆ. ಆದರೆ, ಇಲ್ಲಿ ತಂತ್ರಜ್ಞಾನದ ದುರುಪಯೋಗವಾಗುತ್ತಿರುವುದನ್ನು ಕಂಡು ತುಂಬಾ ಬೇಸರ ಮತ್ತು ಭಯ ಪಡುವಂತೆ ಮಾಡಿದೆ. ನನ್ನದೇ ಕೆಲವು ಡೀಪ್‌ಫೇಕ್ ಫೋಟೊ ಮತ್ತು ವಿಡಿಯೊ ನೋಡಿ ನಾನು ಗಾಬರಿಯಾಗಿದ್ದೇನೆ. ಇದು ಮುಂದಿನ ದಿನಗಳಲ್ಲಿ ತುಂಬಾ ಅಪಾಯಕಾರಿಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಬಗ್ಗೆ ಸಾಮಾಜಿಕ ಜಾಲತಾಣದ ಬಳಕೆಗೆ ಕೆಲ ನಿರ್ಬಂಧ ವಿಧಿಸಿದರೆ ಉತ್ತಮ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ S. Sreesanth: ಕ್ರಿಕೆಟಿಗ ಎಸ್‌.ಶ್ರೀಶಾಂತ್‌ ವಿರುದ್ಧ ಎಫ್‌ಐಆರ್‌ ದಾಖಲು; ಮತ್ತೆ ಬಂಧನ ಭೀತಿ!

ಸಾರಾ ತೆಂಡೂಲ್ಕರ್​ ಮತ್ತು ಶುಭಮನ್​ ಗಿಲ್​ ಅವರ ಫೋಟೊಗಳನ್ನು ಬಳಸಿ ಡೀಪ್‌ಫೇಕ್ ಎಡಿಟ್​ ಮಾಡಿ ಇವರಿಬ್ಬರು ಜತೆಯಾಗಿ ಹಲವು ಕಡೆ ತಿರುಗಾಟ ನಡೆಸುತ್ತಿರುವಂತೆ ಬಿಂಬಿಸಿ ಹಲವು ಪೋಸ್ಟ್​ಗಳನ್ನು ಮಾಡಲಾಗಿದೆ. ಇದೆಲ್ಲವನ್ನು ಕಂಡು ಸಾರಾ ಡೀಪ್‌ಫೇಕ್ ತಂತ್ರಜ್ಞಾನದ ಕಳವಳ ವ್ಯಕ್ತಪಡಿಸಿದ್ದಾರೆ.

ಅಗತ್ಯ ಕ್ರಮದ ಅಗತ್ಯವಿದೆ ಎಂದ ಪ್ರಧಾನಿ ಮೋದಿ

ಡೀಪ್‌ಫೇಕ್‌ ವಿಡಿಯೊಗಳು ವೈರಲ್‌ ಆಗಿರುವುದು ತಂತ್ರಜ್ಞಾನದ ದುರ್ಬಳಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೇ ಆತಂಕ ವ್ಯಕ್ತಪಡಿಸಿ ಇದರ ಬಗ್ಗೆ ಕ್ರಮದ ಅಗತ್ಯವಿದೆ ಎಂದಿದ್ದಾರೆ. ಇದರ ಬೆನ್ನಲ್ಲೇ ಡೀಪ್‌ಫೇಕ್‌ ತಂತ್ರಜ್ಞಾನದ ದುರ್ಬಳಕೆ ಕುರಿತು ಚರ್ಚಿಸಲು ಸಾಮಾಜಿಕ ಜಾಲತಾಣಗಳ ಪ್ರಮುಖರು, ಕೃತಕ ಬುದ್ಧಿಮತ್ತೆ ಆಧಾರಿತ (AI) ಕಂಪನಿಗಳು, ನಾಸ್ಕಾಮ್‌ ಸೇರಿ ಹಲವು ಐಟಿ ದಿಗ್ಗಜರ ಜತೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಅವರು ಸಭೆ ನಡೆಸಿದ್ದಾರೆ. ಅಲ್ಲದೆ, ಸಭೆಯ ಬಳಿಕ ಮಾಹಿತಿ ನೀಡಿದ ಅಶ್ವಿನಿ ವೈಷ್ಣವ್‌, “ಡೀಪ್‌ಫೇಕ್‌ ವಿಡಿಯೊ ಮಾಡುವವರಿಗೆ ಕ್ರಮ ತೆಗೆದುಕೊಳ್ಳುವುದು ಸೇರಿ ಹಲವು ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಹೇಳಿದರು.

“ಡೀಪ್‌ಫೇಕ್‌ ಈಗ ಸಮಾಜಕ್ಕೆ ಮಾರಕವಾಗುತ್ತಿದೆ. ಇದು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ, ಕ್ಷಿಪ್ರವಾಗಿ ಕಠಿಣ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಇದರ ದಿಸೆಯಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಮುಂಬರುವ ದಿನಗಳಲ್ಲಿ ಡೀಪ್‌ಫೇಕ್‌ ನಿಯಂತ್ರಣದ, ಕ್ರಮ ತೆಗೆದುಕೊಳ್ಳುವುದರ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಮುಂಬರುವ ಡಿಸೆಂಬರ್‌ನಲ್ಲಿ ಇದರ ಕುರಿತು ಮತ್ತಷ್ಟು ಚರ್ಚಿಸಲಾಗುತ್ತದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನೂ ಇದಕ್ಕಾಗಿ ಬಳಸಲಾಗುತ್ತದೆ” ಎಂದು ತಿಳಿಸಿದರು.

ಇದನ್ನೂ ನಂ.1 ಬ್ಯಾಟರ್​ ಶುಭಮನ್​ಗೆ ಲವ್ಲಿಯಾಗಿ ಅಭಿನಂದಿಸಿದ ಸಾರಾ ತೆಂಡೂಲ್ಕರ್

Exit mobile version