ಮುಂಬಯಿ: ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್ ಕೆ. ಎಲ್ ರಾಹುಲ್ ಕಳೆದ ಕೆಲವು ತಿಂಗಳಿಂದ ಫಾರ್ಮ್ ಕಳೆದುಕೊಂಡಿದ್ದಾರೆ. ಹೀಗಾಗಿ ಅವರ ಆಟದ ಬಗ್ಗೆ ಭಾರತದ ಕ್ರಿಕೆಟ್ ಕಾರಿಡಾರ್ನಲ್ಲಿ ಚರ್ಚೆಗಳು ನಡೆಯುತ್ತಿವೆ. ಅಂತೆಯೇ ಕೆಲವರು ಮಾವ ಸುನೀಲ್ ಶೆಟ್ಟಿ ಅವರ ಬಳಿಯೂ ಇದೇ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದರೆ, ರಾಹುಲ್ ಕ್ರಿಕೆಟ್ ಫಾರ್ಮ್ ಬಗ್ಗೆ ಮಾತನಾಡಲು ಸುನೀಲ್ ಶೆಟ್ಟಿ ಬಯಸುತ್ತಿಲ್ಲ. ಅವೆಲ್ಲರೂ ನಮ್ಮ ವ್ಯಾಪ್ತಿಯಿಂದ ಹೊರಗಿರುವ ಸಂಗತಿ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.
ಸುನೀಲ್ ಶೆಟ್ಟಿ ಅವರು ರೇಡಿಯೊ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆಯೂ ಅವರಿಗೆ ರಾಹುಲ್ ಫಾರ್ಮ್ ಕುರಿತು ಪ್ರಶ್ನೆಯನ್ನು ಕೇಳಲಾಗಿದೆ. ಈ ವೇಳೆ ಅವರು, ನಾವು ಕ್ರಿಕೆಟ್ನಲ್ಲಿನ ವೈಫಲ್ಯದ ಕುರಿತು ಮನೆಯಲ್ಲಿ ಮಾತನಾಡುವುದಿಲ್ಲ. ಯಾಕೆಂದರೆ ನಮ್ಮ ಮಕ್ಕಳು ಹೋರಾಟಗಾರರು ಎಂಬುದು ನಮಗೆ ಗೊತ್ತಿದೆ. ನಾವು ಅವರಿಗೆ ಹೆಚ್ಚು ಪ್ರೀತಿ ತೋರಿಸುತ್ತೇವೆ. ನಾವು ಬೇರೆ ಬೇರೆ ವಿಚಾರಗಳನ್ನು ಮಾತನಾಡುತ್ತಾ ಅವರ ಮನಸ್ಸು ಒಂದರ ಬಗ್ಗೆಯೇ ಚಿಂತನೆ ಮಾಡದಂತೆ ನೋಡಿಕೊಳ್ಳುತ್ತೇವೆ. ಅದಕ್ಕೂ ಮಿಗಿಲಾಗಿ ನಾವೇನು ರಾಹುಲ್ಗೆ ಕ್ರಿಕೆಟ್ ಕಲಿಸಲು ಸಾಧ್ಯವಿಲ್ಲ. ಯಾಕೆಂದರೆ ಅವರು ಆಡುವುದು ದೇಶಕ್ಕಾಗಿ. ಅವರೇನೂ ಗಲ್ಲಿ ಕ್ರಿಕೆಟ್ ಆಡುತ್ತಿಲ್ಲ. ಬೇರೊಬ್ಬರು ಅದರ ಬಗ್ಗೆ ಟೀಕೆ ಅಥವಾ ವಿಮರ್ಶೆ ಮಾಡಲೂ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : IPL 2023 : ಕೆ. ಎಲ್ ರಾಹುಲ್ ಹೀಗೆ ಆಡಿದರೆ ಲಕ್ನೊ ಸೂಪರ್ ಜಯಂಟ್ಸ್ ತಂಡಕ್ಕೆ ಕಷ್ಟ
ಇದೇ ವೇಳೆ ಅವರು ರಾಹುಲ್ ಅವರಿಗೆ ಕ್ರಿಕೆಟ್ನಲ್ಲಿ ಕೆಟ್ಟ ದಿನಗಳು ಬಂದಿವೆ ಎಂಬುದನ್ನು ಒಪ್ಪಿಕೊಂಡರು. ಅಲ್ಲದೆ, ಅದನ್ನವರು ತಮ್ಮ ಬ್ಯಾಟ್ ಮೂಲಕವೇ ಸರಿಪಡಿಸಿಕೊಳ್ಳಲಿದ್ದಾರೆ ಎಂದು ಹೇಳಿಕೊಂಡರು.
ಕೆ . ಎಲ್ ರಾಹುಲ್ಗೆ ಕೆಟ್ಟ ದಿನಗಳ ನಡೆಯುತ್ತಿವೆ ಎಂಬುದ ನಮಗೆಲ್ಲರಿಗೂ ಗೊತ್ತಿರುವ ಸಂಗತಿ. ಹಾಗೆಂದು ಅವರು ಅದಕ್ಕೆ ಶರಣಾಗುವುದಿಲ್ಲ. ಎದ್ದು ನಿಂತು ಉತ್ತರ ಕೊಡಲಿದ್ದಾರೆ. ಇದು ಸಿನಿಮಾವಲ್ಲ. ಬೇಕಾದ ಹಾಗೆ ಕ್ರಿಕೆಟ್ ಆಡಲು. ಚೆಂಡಿಗೆ ಉತ್ತರಿಸಿದರೆ ಮಾತ್ರ ಯಶಸ್ಸು ಸಿಗಬಹುದು. ಅದನ್ನು ರಾಹುಲ್ ಮಾಡಲಿದ್ದಾರೆ ಎಂದು ಹೇಳಿಕೊಂಡರು.
ಇವೆಲ್ಲದರ ನಡುವೆ ಲಕ್ನೊ ಸೂಪರ್ ಜಯಂಟ್ಸ್ ತಂಡ ಹಾಲಿ ಆವೃತ್ತಿಯಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದು ಇನ್ನೊಂದರಲ್ಲಿ ಸೋತಿದೆ. ರಾಹುಲ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವೈಫಲ್ಯ ಕಂಡಿದ್ದಾರೆ.