ಭುವನೇಶ್ವರ: ಮೂರು ವರ್ಷದ ಬಳಿಕ ತವರಿನಲ್ಲಿ ನಡೆದ ಫೆಡರೇಷನ್ ಕಪ್‌ನಲ್ಲಿ(Federation Cup) ಕಣಕ್ಕಿಳಿದ್ದ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ, ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ(82.27 ಮೀ.), ಕನ್ನಡಿಗ ಡಿಪಿ ಮನು ಅವರಿಂದ ತೀವ್ರ ಪೈಪೋಟಿ ಎದುರಿಸಿ ಕೊನೆಗೂ ಚಿನ್ನದ ಪದಕ ಗೆದ್ದರು. ಮನು(82.06 ಮೀ) ಬೆಳ್ಳಿ ಪದಕ್ಕೆ ತೃಪ್ತಿಪಟ್ಟರು. ಮತೋರ್ವ ಪದಕ ಭರವಸೆಯ ಕಿಶೋರ್ ಜೆನಾ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಪದಕ ಗೆಲ್ಲುವಲ್ಲಿ ವಿಫಲರಾದರು. ಉತ್ತಮ್ ಪಾಟೀಲ್(78.39 ಮೀ) ಮೂರನೇ ಸ್ಥಾನ ಪಡೆದರು.
ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ (84.14 ಮೀ.) 6ನೇ ಸ್ಥಾನ ಪಡೆದಿದ್ದ ಮನು ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ಗೆ ತೀವ್ರ ಪೈಪೋಟಿ ನೀಡಿದರು. ನೀರಜ್ ಚೋಪ್ರಾ ತಮ್ಮ ಮೊದಲ ಪ್ರಯತ್ನದಲ್ಲಿ 82 ಮೀ. ದೂರ ಜಾವೆಲಿನ್ ಎಸೆದರೆ, ಡಿಪಿ ಮನು 82.06 ಮೀ ದೂರಕ್ಕೆ ಜಾವೆಲಿನ್ ಎಸೆದು ಮೊದಲ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡರು. ದ್ವಿತೀಯ ಸುತ್ತಿನಲ್ಲಿ ಮನು 77.23 ದೂರ ಎಸೆದರು. ಆದರೆ ಇವರ ಪ್ರತಿಸ್ಪರ್ಧಿ ನೀರಜ್ ಈ ಎಸೆತವನ್ನು ಉದ್ದೇಶಪೂರ್ವಕವಾಗಿ ಫೌಲ್ ಮಾಡಿದರು. ಈ ಥ್ರೋ ಅಷ್ಟು ಉತ್ತಮವಾಗಿರದ ಕಾರಣ ನೀರಜ್ ಈ ತಂತ್ರ ಬಳಸಿದರು.
ಮೂರನೇ ಎಸೆತದಲ್ಲಿ ಮನು 81.43 ಮೀ. ದೂರ ದಾಖಲಿಸಿದರೆ, ಮತ್ತೆ ಎಡವಿದ ನೀರಜ್ 81.29 ಮೀ ದಾಖಲಿಸಿ ಹಿನ್ನಡೆಯಲ್ಲೇ ಉಳಿದರು. ಆದರೆ, ನಾಲ್ಕನೇ ಪ್ರಯತ್ನದಲ್ಲಿ ಪುಟಿದೆದ್ದ ನೀರಜ್ 82.27 ಮೀ ದೂರ ಜಾವೆಲಿನ್ ಎಸೆದು ಅಗ್ರಸ್ಥಾನವನ್ನು ವಶಪಡಿಸಿಕೊಂಡರು. ಮನು ಈ ಸುತ್ತಿನಲ್ಲಿ 81.47 ಮೀ. ಎಸೆದರು. 28 ವರ್ಷದ ಕಿಶೋರ್ ಜೆನಾ ತಾವೆಸೆದ 4 ಎಸೆತಗಳ ಪೈಲಿ ಮೂರರಲ್ಲಿ ಫೌಲ್ ಆಗಿ ಅತ್ಯಂತ ಕಳಪೆ ಪ್ರದರ್ಶನ ತೋರಿದರು. ಕನಿಷ್ಠ ಮೂರನೇ ಸ್ಥಾನ ಪಡೆಯುವಲ್ಲಿಯೂ ವಿಫಲರಾದರು.
ಉತ್ತಮವಾಗಿ ಆಡುತ್ತಿದ್ದ ಮನು 5ನೇ ಮತ್ತು ಅಂತಿಮ 6 ಸುತ್ತಿನ ಎಸೆತವನ್ನು ಫೌಲ್ ಮಾಡಿದರು. ಅಂತಿಮವಾಗಿ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದರು. ನೀರಜ್ ಬಹಳ ಕಷ್ಟಪಟ್ಟು ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಚೋಪ್ರಾ ಅವರು ಈ ಟೂರ್ನಿಯಲ್ಲಿ ಕೊನೆಯ ಬಾರಿಗೆ ಸ್ಪರ್ಧಿಸಿದ್ದು ಮಾರ್ಚ್ 17, 2021 ರಲ್ಲಿ. ಈ ವೇಳೆ ಅವರು 87.80 ಮೀ ಎಸೆಯುವ ಮೂಲಕ ಚಿನ್ನ ಗೆದಿದ್ದರು. ಈ ಬಾರಿ 82.27 ಮೀ. ಎಸೆದರು. ಕಳೆದ ಕೆಲವು ಟೂರ್ನಿಗೆ ಹೋಲಿಸಿದರೆ ನೀರಜ್ ಅವರ ಕಳಪೆ ಪ್ರದರ್ಶನ ಇದಾಗಿದೆ.
ಕಾಶಿನಾಥ ನಾಯ್ಕ್ ತರಬೇತಿ
2020ರಲ್ಲಿ ಡಿ.ಪಿ.ಮನು ಅವರಿಗೆ ಮಹತ್ವದ ತಿರುವು ಸಿಕ್ಕಿತು. ಅವರು ಪುಣೆಯಲ್ಲಿರುವ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಹವಾಲ್ದಾರ್ ಕೆಲಸಕ್ಕೆ ಸೇರಿದರು. ಇದೇ ವೇಳೆ ಕಾಶಿನಾಥ ನಾಯ್ಕ್ ಎಂಬ ಜಾವೆಲಿನ್ ತರಬೇತುದಾರರ ಪರಿಚಯವೂ ಆಯಿತು. ಕಾಶಿನಾಥ ಅವರ ಬಳಿ ಸತತ ತರಬೇತಿ ಪಡೆದ ಡಿ.ಪಿ. ಮನು, 65 ಮೀಟರ್ ದೂರ ಭರ್ಜಿ ಎಸೆತದಿಂದ 80 ಮೀಟರ್ ದಾಟುವಂತಾದರು.
ನೀರಜ್ ಮತ್ತು ಕಿಶೋರ್ ಈಗಾಗಲೇ ಪ್ಯಾರಿಸ್ ಒಲಿಂಪಿಕ್ಸ್ ಟಿಕೆಟ್ ಪಡೆದಿದ್ದರು. ಮನು ಭಾರತದ ಮೂರನೇ ಸ್ಫರ್ಧಿಯಾಗಿ ಒಲಿಂಪಿಕ್ಸ್ ಅರ್ಹತೆ ಪಡೆಲು ಅವರಿಗೆ ಈ ಟೂರ್ನಿಯಲ್ಲಿ 85.50 ಮೀ. ಎಸೆತದ ಮಾನದಂಡ ನೀಡಲಾಗಿತ್ತು. ಆದರೆ ಈ ಗುರಿಯನ್ನು ತಲುಪಲು ಅವರಿಂದ ಸಾಧ್ಯವಾಗಲಿಲ್ಲ.
ಮನು ಮಾಡಿದ ಸಾಧನೆಗಳು
- 2022ರ ಜೂನ್‌ನಲ್ಲಿ ನಡೆದ ರಾಷ್ಟ್ರೀಯ ಅಂತಾರಾಜ್ಯ ಹಿರಿಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್‌ನಲ್ಲಿ ಚಿನ್ನದ ಪದಕ
- 2023ರ ಏಪ್ರಿಲ್‌ನಲ್ಲಿ ಬೆಂಗಳೂರಿನ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಚಿನ್ನ
- 2022ರ ಏಪ್ರಿಲ್‌ನಲ್ಲಿ ಕೇರಳದ ತಿರುವನಂಪುರಂನಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಬಂಗಾರದ ಪದಕ
- 2022ರ ಆಗಸ್ಟ್‌ನಲ್ಲಿ ನಡೆದ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಐದನೇ ಸ್ಥಾನಕ್ಕೆ ತೃಪ್ತಿ
- 2023ರ ಜುಲೈನಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್‌ನಲ್ಲಿ ಬೆಳ್ಳಿ
- 2022ರ ಅಕ್ಟೋಬರ್‌ನಲ್ಲಿ ಗುಜರಾತ್‌ನಲ್ಲಿ ನಡೆದ ಇಂಡಿಯನ್ ನ್ಯಾಷನಲ್ ಗೇಮ್ಸ್‌ನಲ್ಲಿ ಚಿನ್ನ