Site icon Vistara News

AIFF BAN | ಅಖಿಲ ಭಾರತ ಫುಟ್ಬಾಲ್‌ ಒಕ್ಕೂಟದ ಮೇಲಿನ ನಿಷೇಧ ವಾಪಸ್‌, ವಿಶ್ವ ಕಪ್‌ ನಿರಾತಂಕ

AIFF BAN

ನವ ದೆಹಲಿ : ಅಖಿಲ ಭಾರತ ಫುಟ್ಬಾಲ್‌ ಒಕ್ಕೂಟದ ಮೇಲೆ ಹೇರಿದ್ದ ನಿಷೇಧವನ್ನು (AIFF BAN) ಅಂತಾರಾಷ್ಟ್ರೀಯ ಫುಟ್ಬಾಲ್‌ ಒಕ್ಕೂಟ (FIFA) ವಾಪಸ್‌ ಪಡೆದಿದೆ. ಇದರೊಂದಿಗೆ ೧೭ರ ವಯೋಮಿತಿಯ ಮಹಿಳೆಯರ ವಿಶ್ವ ಕಪ್‌ ಆಯೋಜನೆಯ ಆತಿಥ್ಯ ಭಾರತದಲ್ಲೇ ಉಳಿದುಕೊಂಡಿದೆ. ಎಐಎಫ್‌ಎಫ್‌ ಮೇಲ್ವಿಚಾರಣೆಗೆ ನೇಮಿಸಲಾಗಿದ್ದ ಆಡಳಿತಾತ್ಮಕ ಸಮಿತಿಯನ್ನು ವಿಸರ್ಜಿಸಲಾಗದೆ ಎಂದು ಕೇಂದ್ರ ಸರಕಾರ, ಫಿಫಾಗೆ ಖಾತರಿಪಡಿಸಿದ ಬಳಿಕ ನಿಷೇಧವನ್ನು ವಾಪಸ್‌ ಪಡೆಯಲಾಗಿದೆ.

ಎಐಎಫ್‌ಎಫ್‌ ಕಾರ್ಯಚಟವಟಿಕೆಗಳಲ್ಲಿ ಮೂರನೇ ವ್ಯಕ್ತಿ ಮೂಗು ತೂರಿಸುತ್ತಿದ್ದಾರೆ ಎಂದು ಕಾರಣ ನೀಡಿ ಆಗಸ್ಟ್‌ ೧೫ರಂದು ಫಿಫಾ ನಿಷೇಧವನ್ನು ಪ್ರಕಟಿಸಿತ್ತು. ಜತೆಗೆ ವಿಶ್ವ ಕಪ್‌ ಆಯೋಜನೆಯ ಆತಿಥ್ಯವನ್ನೂ ಅಮಾನತಿನಲ್ಲಿಟ್ಟಿತ್ತು. ನಿಷೇಧ ವಾಪಸ್‌ ಪಡೆದ ಹಿನ್ನೆಲೆಯಲ್ಲಿ ಕಳೆದ ೧೦ ದಿನದಿಂದ ಉಂಟಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ.

ಯಾಕೆ ಸಮಸ್ಯೆ

ಅಖಿಲ ಭಾರತ ಫುಟ್ಬಾಲ್‌ ಒಕ್ಕೂಟಕ್ಕೆ ಹೊಸ ಸಂವಿಧಾನ ರಚಿಸಿ ಕ್ರೀಡಾಪಟುಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡಿದ ಸುಪ್ರೀಮ್‌ ಕೋರ್ಟ್‌ ೨೦೨೦ರಲ್ಲಿ ಆದೇಶ ಹೊರಡಿಸಿತ್ತು. ಅಂತೆಯೇ ಆಡಳಿತಾತ್ಮಕ ಸಮಿತಿಯನ್ನೂ ರಚಿಸಿತ್ತು. ಆ ಸಮಿತಿ ಸಂವಿಧಾನ ರಚಿಸುವ ಜತೆಗೆ ಆಗಸ್ಟ್‌ ೨೮ರಂದು ಹೊಸ ಕಾರ್ಯಕಾರಿ ಸಮಿತಿ ರಚನೆಗೆ ಚುನಾವಣೆ ದಿನಾಂಕ ಪ್ರಕಟಿಸಿತ್ತು. ಏತನ್ಮಧ್ಯೆ, ಹಲವು ವರ್ಷಗಳಿಂದ ಭಾರತೀಯ ಫುಟ್ಬಾಲ್‌ ಒಕ್ಕೂಟವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ಅಧ್ಯಕ್ಷ ಸ್ಥಾನದಲ್ಲಿ ಕುಳಿತಿದ್ದ ಪ್ರಫುಲ್‌ ಪಟೇಲ್‌, ತಮ್ಮ ಪ್ರಭಾವ ಕಡಿಮೆಯಾಗುತ್ತದೆ ಎಂಬ ಆತಂಕದಿಂದ ಫಿಫಾದ ಮೂಲಕ ನಿಷೇಧ ಹೇರಿಸಿದ್ದರು. ಬಳಿಕ ಕೇಂದ್ರ ಸರಕಾರದ ಮನವಿ ಮೇರೆಗೆ ಸುಪ್ರೀಮ್‌ ಕೋರ್ಟ್‌ ಆಡಳಿತಾತ್ಮಕ ಸಮಿತಿ ವಿಸರ್ಜಿಸಿ ಚುನಾವಣೆಯನ್ನು ಒಂದು ವಾರಗಳ ಕಾಲ ಮುಂದೂಡಿಕೆ ಮಾಡಿತ್ತು. ಕೇಂದ್ರ ಕ್ರೀಡಾ ಸಚಿವಾಲಯ ಈ ಮಾಹಿತಿಯನ್ನು ಫಿಫಾಗೆ ಸಲ್ಲಿಸಿದ ಬಳಿಕ ನಿಷೇಧ ಅಂತ್ಯವಾಗಿದೆ.

ಇದನ್ನೂ ಓದಿ | ವಿಸ್ತಾರ Explainer | FIFA ban: ಪ್ರಫುಲ್‌ ಪಟೇಲ್‌ ಕಳ್ಳಾಟಕ್ಕೆ ಫಿಫಾದ ಕಾಲ್ಚೆಂಡಾದ ಭಾರತೀಯ ಫುಟ್ಬಾಲ್‌

Exit mobile version