Site icon Vistara News

FIFA Women’s World Cup: ಚೊಚ್ಚಲ ಫಿಫಾ ವಿಶ್ವಕಪ್​ ಗೆದ್ದ ಸ್ಪೇನ್​ ಮಹಿಳಾ ತಂಡ

World Champion Spain Women’s football team

ಸಿಡ್ನಿ: ಅತ್ಯಂತ ಜಿದ್ದಾಜಿದ್ದಿನಿಂದ ಭಾನುವಾರ ಸಿಡ್ನಿ ಅಂಗಳದಲ್ಲಿ ನಡೆದ ಫಿಫಾ ಮಹಿಳಾ ಫುಟ್ಬಾಲ್ ವಿಶ್ವಕಪ್​​(FIFA Women’s World Cup) ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್​ ತಂಡವನ್ನು 1-0 ಅಂತರದಿಂದ ಮಣಿಸಿದ ಸ್ಪೇನ್(Spain beat England)​ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ತಂಡದ ನಾಯಕಿ ಓಲ್ಗಾ ಕಾರ್ಮೋನಾ ಏಕೈಕ ಗೋಲು ದಾಖಲಿಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು. ಟೂರ್ನಿಯುದ್ದಕ್ಕೂ ಅವರು ನಡೆಸಿದ ಹೋರಾಟಕ್ಕೆ ಅಂತಿಮವಾಗಿ ಫಲ ಸಿಕ್ಕಿದಂತಾಗಿದೆ.

ಮೊದಲಾರ್ಧದಲ್ಲೇ ಗೋಲು

ಪಂದ್ಯ ಆರಂಭಗೊಂಡ 29ನೇ ನಿಮಿಷದಲ್ಲೇ ಓಲ್ಗಾ ಕಾರ್ಮೋನಾ(Olga Carmona) ಆಕರ್ಷಕ ಗೋಲು ಸಿಡಿಸಿದ್ದರು. ಬಳಿಕ ರಕ್ಷಣಾತ್ಮ ಆಟಕ್ಕೆ ಒತ್ತು ಕೊಟ್ಟ ಸ್ಪೇನ್​ ಆಟಗಾರ್ತಿಯರು ಚಕ್ರವ್ಯೂಹವೊಂದನ್ನು ನಿರ್ಮಿಸಿದಂತೆ ಎದುರಾಳಿ ಆಟಗಾರ್ತಿಯರಿಗೆ ಗೋಲು ಪಟ್ಟಿಗೆಯ ತನಕ ನುಸುಳಲು ಅವಕಾಶವನ್ನೇ ನೀಡಲಿಲ್ಲ. ಅಂತಿಮ ಕ್ಷಣದದಲ್ಲಿ ಇಂಗ್ಲೆಂಡ್​ಗೆ ಗೋಲು ಬಾರಿಸಿ ಸಮಬಲ ಸಾಧಿಸುವ ಅವಕಾಶ ಲಭಿಸಿತು. ಆದರೆ ಲೌರೆನ್‌ ಹೆಂಪ್‌ ಬಾರಿಸಿದ ಈ ಚೆಂಡು ಗೋಲ್​ ಕಂಬಕ್ಕೆ ಬಡಿಯಿತು. ಅದೃಷ್ಟ ಸ್ಪೇನ್​ಗೆ ಒಲಿಯಿತು. ಒಂದು ಗೋಲಿನ ಮುನ್ನಡೆ ಕಾಯ್ದುಕೊಂಡು ಪ್ರಶಸ್ತಿಯನ್ನು ಎತ್ತಿ ಹಿಡಿದು ಮರೆದಾಡಿದರು. ಈ ಟೂರ್ನಿಯಲ್ಲಿ ಅತ್ಯಧಿಕ 18 ಗೋಲು ಬಾರಿಸಿದ ಸಾಧನೆಯೂ ಸ್ಪೇನ್​ ತಂಡದ್ದಾಗಿದೆ.

ವಿಶ್ವ ಕಪ್​ ಗೆದ್ದ 5ನೇ ತಂಡ

ಉಭಯ ತಂಡಗಳಿಗೂ ಇದು ಮೊದಲ ಫೈನಲ್​ ಪಂದ್ಯವಾಗಿತ್ತು. ಫೈನಲ್‌ ಪಂದ್ಯಕ್ಕೆ 75 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಸ್ಟೇಡಿಯಂನಲ್ಲಿ ಹಾಜರಿದ್ದರು. ಈ ಗೆಲುವಿನೊಂದಿಗೆ ಸ್ಪೇನ್‌ ತಂಡ ಫಿಫಾ ವಿಶ್ವಕಪ್‌ ಟ್ರೋಫಿ ಜಯಿಸಿದ 5ನೇ ತಂಡ ಎನಿಸಿಕೊಂಡಿತು. ಅಮೆರಿಕ ಸರ್ವಾಧಿಕ ನಾಲ್ಕು ಬಾರಿ ಟ್ರೋಫಿ ಜಯಿಸಿದ್ದರೆ, ಜರ್ಮನಿ 2 ಬಾರಿ ಹಾಗೂ ಜಪಾನ್‌ ಮತ್ತು ನಾರ್ವೆ ತಂಡಗಳು ತಲಾ ಒಂದೊಂದು ಬಾರಿ ಟ್ರೋಫಿ ಗೆದ್ದಿದೆ.

ಇದನ್ನೂ ಓದಿ FIFA World Cup 2026: ಫಿಫಾ ಫುಟ್ಬಾಲ್​ ವಿಶ್ವಕಪ್​ನಲ್ಲಿ ಮಹತ್ವದ ಬದಲಾವಣೆ; ಏನದು?

ಸೆಮಿಯಲ್ಲಿ ಸ್ವೀಡನ್​ಗೆ ಆಫಾತವಿಕ್ಕಿದ್ಧ ಸ್ಪೇನ್​

ಬುಧವಾರ ನಡೆದಿದ್ದ ಸೆಮಿಫೈನಲ್​ ಪಂದ್ಯದಲ್ಲಿ ಸ್ಪೇನ್​ ತಂಡ ಸ್ವೀಡನ್​ಗೆ ಸೋಲಿನ ಆಘಾತವಿಕ್ಕಿ ಫೈನಲ್​ ಪ್ರವೇಶಿಸಿತ್ತು. ಈಡನ್‌ ಪಾರ್ಕ್‌ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಸ್ಪೇನ್‌ ಮತ್ತು ಸ್ವೀಡನ್‌ ಪ್ರಬಲ ಹೋರಾಟ ಸಂಘಟಿಸಿದ್ದವು. 81 ನಿಮಿಷಗಳವರೆಗೆ ಗೋಲು ರಹಿತವಾಗಿ ಪಂದ್ಯ ಸಾಗಿತ್ತು. ಈ ಹಂತದಲ್ಲಿ ಸ್ಪೇನ್‌ನ ಸಲ್ಮಾ ಪ್ಯಾರಾಲ್ಯುಲೊ ಅಮೋಘ ಗೋಲನ್ನು ಹೊಡೆದು ಪಂದ್ಯಕ್ಕೆ ಜೀವ ತುಂಬಿದರು. ಸ್ಪೇನ್‌ ಮುನ್ನಡೆ ಸಾಧಿಸಿದನ್ನು ಕಂಡ ಸ್ವೀಡನ್‌ ಆಟಗಾರ್ತಿಯರು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿ 88ನೇ ನಿಮಿಷದಲ್ಲಿ ರೆಬೆಕಾ ಬ್ಲೋಮ್‌ಕ್ವಿಸ್ಟ್‌ ಗೋಲನ್ನು ಹೊಡೆದು ಸಮಬಲ ತಂದರು. ಆದರೆ ಎರಡು ನಿಮಿಷದ ಅಂತರದಲ್ಲಿ ನಾಯಕಿ ಒಲ್ಗಾ ಕಾರ್ಮೊನಾ ಅದ್ಭುತ ಗೋಲು ಹೊಡೆದು ಸ್ಪೇನ್‌ಗೆ ಗೆಲುವು ತಂದು ಕೊಟ್ಟಿದ್ದರು.

Exit mobile version