ದೋಹಾ: ಅರ್ಜೆಂಟೀನಾ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಅವರು ಸ್ಪರ್ಧಾತ್ಮಕ ಫುಟ್ಬಾಲ್ ಆಟಕ್ಕೆ ನಿವೃತ್ತಿ ಘೋಷಿಸಲಿದ್ದು, ಭಾನುವಾರ ನಡೆಯಲಿರುವ ಕತಾರ್ ವಿಶ್ವಕಪ್(Fifa World Cup) ಫೈನಲ್ ಪಂದ್ಯ ಅವರಿಗೆ ಕೊನೆಯ ಮ್ಯಾಚ್ ಆಗಲಿದೆ. ಹಾಗಾಗಿ, ಅವರ ಅಭಿಮಾನಿಗಳು ಈ ಪಂದ್ಯವನ್ನು ಬಹಳ ಕಾತರದಿಂದ ಎದುರು ನೋಡುತ್ತಿದ್ದಾರೆ. ಮೆಸ್ಸಿ ಅವರು ದಾಖಲೆಯ 26ನೇ ವಿಶ್ವಕಪ್ ಪಂದ್ಯವನ್ನು ಆಡುತ್ತಿರುವುದು ವಿಶೇಷವಾಗಿದೆ.
ಮೆಸ್ಸಿ ಪಾಲಿಗಂತೂ ಇದು ಪ್ರತಿಷ್ಠೆಯ ಕದನ. ದೇಶಕ್ಕೆ ಮತ್ತು ತನಗಾಗಿ ಸ್ವತಃ ತಾನೇ ಟ್ರೋಫಿ ಗೆದ್ದು ತರಬೇಕಾದ ತೀರಾ ಸಂದಿಗ್ಧ ಕಾಲ. ಏಕೆಂದರೆ ಅವರು ಈ ಪಂದ್ಯದ ಬಳಿಕ ವಿದಾಯ ಹೇಳಲಿದ್ದಾರೆ. ಇಲ್ಲಿ ಎಡವಿದರೆ ಮತ್ತೆ ಈ ಸುವರ್ಣ ಅವಕಾಶ ಮೆಸ್ಸಿಗೆ ಸಿಗದು.
ಈಗಾಗಲೇ 37 ಕ್ಲಬ್ ಟ್ರೋಫಿಗಳು, 7 ಬ್ಯಾಲನ್ ಡಿ ಓರ್ ಪ್ರಶಸ್ತಿ, 6 ಯುರೋಪಿಯನ್ ಗೋಲ್ಡನ್ ಬೂಟ್ಸ್, ಒಂದು ಕೊಪಾ ಅಮೆರಿಕ ಚಾಂಪಿಯನ್ ಪಟ್ಟ, ಒಂದು ಒಲಿಂಪಿಕ್ ಚಿನ್ನದ ಪದಕ 18 ವರ್ಷಗಳ ಈ ಸುದೀರ್ಘ ಫುಟ್ಬಾಲ್ ಬಾಳ್ವೆಯಲ್ಲಿ ಇಷ್ಟೆಲ್ಲ ಪ್ರಶಸ್ತಿ ಪಡೆದರೂ ಮೆಸ್ಸಿ ಪಾಲಿಗೆ ವಿಶ್ವಕಪ್ ಎಂಬುದು ಮರೀಚಿಕೆಯೇ ಆಗಿ ಉಳಿದಿದೆ. 2014ರಲ್ಲೇ ಇದಕ್ಕೊಂದು ಅವಕಾಶ ಇತ್ತಾದರೂ ಜರ್ಮನಿ ಸವಾಲು ಮೀರಲು ಸಾಧ್ಯವಾಗಲಿಲ್ಲ. ಹೀಗಾಗಿ ಮೆಸ್ಸಿ ಪಾಲಿಗೆ ಕತಾರ್ನಲ್ಲಿ ವಿಶ್ವಕಪ್ ಗೆಲ್ಲಲು ಇರುವ ಕಟ್ಟಕಡೆಯ ಅವಕಾಶ, ಆದ್ದರಿಂದ ಮೆಸ್ಸಿ ಪಾಲಿಗೆ ಇದು ಸ್ಮರಣೀಯ ಪಂದ್ಯವಾಗಿದೆ.
ಸಚಿನ್ ಅವರಂತೆ ಸಿಗಲಿದೆಯಾ ವಿಶ್ವ ಕಪ್ ಗೆಲುವಿನ ವಿದಾಯ
ಅಂದು ಟೀಮ್ ಇಂಡಿಯಾದ ಮಾಜಿ ಆಟಗಾರ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡ ಇಂಥದೇ ಸುದೀರ್ಘ ನಿರೀಕ್ಷೆಯಲ್ಲಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ಬಾಳ್ವೆಯಲ್ಲಿ 22 ವರ್ಷ ಆಡಿದರೂ ಏಕ ದಿನ ವಿಶ್ವಕಪ್ ಮಾತ್ರ ಅವರಿಗೆ ದೂರವೇ ಉಳಿದಿತ್ತು. ಕೊನೆಗೂ 2011ರ ಅಂತಿಮ ಅವಕಾಶದಲ್ಲಿ ಕ್ರಿಕೆಟ್ ದೇವರಿಗೆ ವಿಶ್ವ ಕಪ್ ಎತ್ತುವ ಭಾಗ್ಯ ಲಭಿಸಿತು. ಅವರ ಕ್ರಿಕೆಟ್ ಬದುಕು ಸಾರ್ಥಕ್ಯ ಕಂಡಿತ್ತು. ಇದೀಗ ಮೆಸ್ಸಿಗೂ ಇಂಥದೇ ಗೆಲುವಿನ ವಿದಾಯ ಲಭಿಸೀತೇ ಎಂದು ಕಾದು ನೋಡಬೇಕಿದೆ.
ಅದೃಷ್ಟ ಕೈ ಹಿಡಿಯಬೇಕು
ಅರ್ಜೆಂಟೀನಾ 1986ರ ಬಳಿಕ ವಿಶ್ವಕಪ್ ಎತ್ತಿಲ್ಲ. ಅದು ಮರಡೋನಾ ಕಾಲವಾಗಿತ್ತು. ಇದೀಗ 35ರ ಹರೆಯದ ಮೆಸ್ಸಿ ಈ ಬಾರಿ ಮರಡೋನಾ ರೀತಿಯಲ್ಲೇ ತಂಡವನ್ನು ಮುನ್ನಡೆಸಿ ಫೈನಲ್ಗೆ ತಂದು ನಿಲ್ಲಿಸಿದ್ದಾರೆ. ಆದರೆ ಇಲ್ಲಿ ಅದೃಷ್ಟ ಎಂಬುವುದು ಕೈ ಹಿಡಿಯಬೇಕು. ಏಕೆಂದರೆ ಹಲವು ಕ್ರೀಡಾ ದಿಗ್ಗಜರು ಕ್ರೀಡಾಕ್ಷೇತ್ರದಲ್ಲಿ ಮಿಂಚಿದ್ದರೂ ಫೈನಲ್ ಪಂದ್ಯದಲ್ಲಿ ಅದೃಷ್ಟ ಕೈ ಹಿಡಿಯದೆ ಸೋಲಿನ ವಿದಾಯ ಕಂಡ ಹಲವು ನಿದರ್ಶನಗಳಿಗೆ. ಆದರೆ ಮೆಸ್ಸಿ ವಿಷಯದಲ್ಲಿ ಹೀಗಾಗದಿರಲಿ ಎನ್ನುವುದು ಅಭಿಮಾನಿಗಳ ಪ್ರಾರ್ಥನೆಯಾಗಿದೆ.
ಮೆಸ್ಸಿ ವಿಶ್ವ ಕಪ್ ದಾಖಲೆ
4 ಬೇರೆ ಬೇರೆ ವಿಶ್ವ ಕಪ್ಗಳಲ್ಲಿ ಗೋಲು ಬಾರಿಸುವ ಜತೆಗೆ ಗೋಲಿಗೆ ನೆರವು ನೀಡಿದ ಏಕೈಕ ಆಟಗಾರ.
ವಿಶ್ವ ಕಪ್ ಒಂದರಲ್ಲಿ ಅತ್ಯಧಿಕ 5 ಗೋಲು ಹೊಡೆದ ಅತೀ ಹಿರಿಯ ಆಟಗಾರ (35 ವರ್ಷ).
ವಿಶ್ವಕಪ್ ಕೂಟವೊಂದರ ಪ್ರಿ ಕ್ವಾರ್ಟರ್ ಫೈನಲ್, ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್‌ನಲ್ಲಿ ಗೋಲು ಹೊಡೆದ 6ನೇ ಆಟಗಾರ.
ವಿಶ್ವಕಪ್‌ನಲ್ಲಿ ಆರ್ಜೆಂಟೀನಾ ಪರ ಅತ್ಯಧಿಕ 11 ಗೋಲು ಹೊಡೆದ ದಾಖಲೆ.
ವಿಶ್ವಕಪ್‌ನಲ್ಲಿ ತಂಡವೊಂದನ್ನು ಅತ್ಯಧಿಕ 18 ಸಲ ಮುನ್ನಡೆಸಿದ ದಾಖಲೆ.
ಇದನ್ನೂ ಓದಿ | Fifa World Cup | ಫಿಫಾ ವಿಶ್ವಕಪ್ ಫೈನಲ್; ಮೆಸ್ಸಿಗೆ ಸಿಗಲಿದೆಯಾ ಗೆಲುವಿನ ವಿದಾಯ?