ದೋಹಾ: ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವ ಕಪ್ (Fifa World Cup) ಟೂರ್ನಿಯಲ್ಲಿ ತಮ್ಮ ನೆಚ್ಚಿನ ಆಟಗಾರರನ್ನು ನೋಡುವ ಸಲುವಾಗಿಯೇ ಲಕ್ಷಾಂತರ ಫುಟ್ಬಾಲ್ ಅಭಿಮಾನಿಗಳು ಕತಾರ್ ತಲುಪಿದ್ದಾರೆ. ಆದರೆ ಐವರು ಮಕ್ಕಳ ತಾಯಿಯೊಬ್ಬರು ಕೇರಳದಿಂದ ಕತಾರ್‌ಗೆ ಅರ್ಜೆಂಟೀನಾ ಆಟಗಾರ ಲಿಯೊನೆಲ್ ಮೆಸ್ಸಿ ಅವರ ಆಟ ನೋಡಲು ತಮ್ಮ ಎಸ್‌ಯುವಿ ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸಿ ಎಲ್ಲಡೆ ಸುದ್ದಿಯಾಗಿದ್ದಾರೆ.
ಮೆಸ್ಸಿ ಆಟಕ್ಕೆ ಮನಸೋತು ಅವರನ್ನು ಕಾಣಲೇಬೇಕು ಎಂಬ ಹಟಕ್ಕೆ ಬಿದ್ದ ಕೇರಳದ ನಾಝಿ ನೌಶಿ ಅವರು ಅಕ್ಟೋಬರ್ 15ರಿಂದ ಕೇರಳದಿಂದ ಕೊಲ್ಲಿ ರಾಷ್ಟ್ರಗಳ ಪ್ರವಾಸ ಆರಂಭಿಸಿ ಇದೀಗ ಯುನೈಟೆಡ್ ಅರಬ್ ಎಮಿರೇಟ್ಸ್ ತಲುಪಿದ್ದಾರೆ. ನೌಶಿ ಯುಎಇ ತಲುಪಿದ ವಿಚಾರವನ್ನು ಖಲೀಜ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಈ ಬಗ್ಗೆ ಮಾತನಾಡಿದ ನೌಶಿ, ‘ನನ್ನ ಅಚ್ಚುಮೆಚ್ಚಿನ ಹೀರೊ ಮೆಸ್ಸಿ ಆಡುವುದನ್ನು ನೋಡಲೇಂದೆ ಇಲ್ಲಿಗೆ ಬಂದೆ. ಸೌದಿ ಅರೇಬಿಯಾ ತಂಡದ ವಿರುದ್ಧ ಮೆಸ್ಸಿಯ ಅರ್ಜೆಂಟೀನಾ ತಂಡವು ಸೋತಿದ್ದು ಮನಸ್ಸಿಗೆ ಬಹಳ ನೋವಾಯಿತು. ಆದರೆ ಮುಂದಿನ ಹಂತದಲ್ಲಿ ತಂಡ ಪುಟಿದೇಳುತ್ತದೆ. ವಿಶ್ವಕಪ್ ಗೆಲ್ಲುತ್ತದೆ’ ಎಂದು ಹೇಳಿದ್ದಾರೆ .
ಎಸ್‌ಯುವಿ ಕಾರಿನಲ್ಲಿ ಏಕಾಂಗಿಯಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ಪ್ರವಾಸ ಮಾಡುತ್ತಿರುವ ಅವರು ಮಸ್ಕತ್‌ನಿಂದ ಪ್ರಯಾಣ ಆರಂಭಿಸಿ ಹೆಟ್ಟಾ ಬಾರ್ಡರ್ ಮುಖಾಂತರ ಪ್ರಯಾಣ ಮಾಡಿರುವ ಅವರು ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ನೋಡಲು ದುಬೈನಲ್ಲಿ ತಂಗಿದ್ದಾರೆ.
ಕಾರಿನೊಳಗೆ ಅಡುಗೆಮನೆ
ತನ್ನ ಎಸ್‌ಯುವಿ ಕಾರಿನಲ್ಲಿ ಕೇರಳದಿಂದ ಮುಂಬೈಗೆ ಪ್ರಯಾಣ ಬೆಳೆಸಿದ ನೌಶಿ ಅಲ್ಲಿಂದ ಹಡಗಿನ ಮೂಲಕ ಒಮಾನ್ ತಲುಪಿದ್ದಾರೆ. ನಂತರ ಮಸ್ಕತ್‌ನಿಂದ ತನ್ನ ಪ್ರಯಾಣವನ್ನು ಮುಂದುವರೆಸಿದ ನೌಶಿ, ಹಟಾ ಗಡಿ ಮೂಲಕ ಯುಎಇ ತಲುಪಿದ್ದಾರೆ. ಜತೆಗೆ ತಮ್ಮ ಕಾರನ್ನು ಕೂಡ ಅವರು ವಿಶೇಷವಾಗಿ ವಿನ್ಯಾಸಗೊಳಿಸಿದ್ದಾರೆ. ಅದರಲ್ಲಿ ಸುಸಜ್ಜಿತವಾದ ಅಡುಗೆಮನೆ ಇದೆ. ಛಾವಣಿಯ ಮೇಲೆ ಟೆಂಟ್ ಹಾಕಿಕೊಳ್ಳುವ ವ್ಯವಸ್ಥೆ ಇದೆ. ಇದರಿಂದ ಊಟ ಮತ್ತು ವಸತಿ ವ್ಯವಸ್ಥೆ ಮಾಡಿಕೊಳ್ಳಲು ಅನುಕೂಲವಾಗಿದೆ. ಅಡುಗೆ ತಯಾರಿಗಾಗಿ ಅಕ್ಕಿ, ನೀರು, ಹಿಟ್ಟು, ಮಸಾಲೆ ಮತ್ತು ಇತರ ಒಣ ವಸ್ತುಗಳನ್ನು ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ | Fifa World Cup | ಮೆಕ್ಸಿಕೋ ವಿರುದ್ಧ ಅರ್ಜೆಂಟೀನಾಕ್ಕೆ ಗೆಲುವು; ಡೀಗೊ ಮರಡೋನಾ ದಾಖಲೆ ಸರಿಗಟ್ಟಿದ ಮೆಸ್ಸಿ