ದೋಹಾ: ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ಫುಟ್ಬಾಲ್ ವಿಶ್ವ ಕಪ್(Fifa World Cup) ಟೂರ್ನಿಯಲ್ಲಿ ಉರುಗ್ವೆ ತಂಡವನ್ನು 2-0 ಗೋಲುಗಳಿಂದ ಮಣಿಸಿದ ಪೋರ್ಚುಗಲ್ ತಂಡ ಅಂತಿಮ 16ರ ಘಟ್ಟಕ್ಕೆ ಮುನ್ನಡೆದಿದೆ. ಮಿಡ್‍ಫೀಲ್ಡರ್ ಬ್ರೂನೊ ಫೆರ್ನಾಂಡಿಸ್ ಅವರ ಅಮೋಘ 2 ಗೋಲುಗಳು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಮಂಗಳವಾರ ನಡೆದ ಎಚ್ ಗುಂಪಿನ 2ನೇ ಪಂದ್ಯದಲ್ಲಿ ಪೋರ್ಚುಗಲ್ ಜಯ ಸಾಧಿಸಿದ್ದರಿಂದ ಇನ್ನೂ ಒಂದು ಪಂದ್ಯ ಉಳಿದಿರುವಂತೆಯೇ ಮುಂದಿನ ಹಂತಕ್ಕೆ ತೇರ್ಗಡೆಯಾಯಿತು. ಈಗಾಗಲೇ ಫ್ರಾನ್ಸ್ ಹಾಗೂ ಬ್ರೆಜಿಲ್ ನಾಕೌಟ್ ಹಂತಕ್ಕೆ ಮುನ್ನಡೆದಿವೆ.
ಉಭಯ ತಂಡಗಳು ಆರಂಭದಲ್ಲಿ ರಕ್ಷಣಾತ್ಮಕ ಆಟದ ಮೊರೆ ಹೋದ ಕಾರಣ ಮೊದಲಾರ್ಧ ಗೋಲು ರಹಿತವಾಗಿ ಅಂತ್ಯಗೊಂಡಿತು. ದ್ವಿತೀಯಾರ್ಧದ ಆಟದಲ್ಲಿ 54ನೇ ನಿಮಿಷದಲ್ಲಿ ಫೆರ್ನಾಂಡಿಸ್ ಪೋರ್ಚುಗಲ್ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಬಳಿಕ ಪಂದ್ಯ ಅಂತ್ಯದ ವೇಳೆಗೆ ಪೆನಾಲ್ಟಿ ಮೂಲಕ ಮತ್ತೊಂದು ಗೋಲು ಬಾರಿಸಿದ ಫರ್ನಾಂಡಿಸ್ ಎರಡನೇ ಗೋಲು ಗಳಿಸಿ ಗೆಲುವಿನ ಅಂತರ ಹಿಗ್ಗಿಸಿದರು.
ಸದ್ಯ ಪೋರ್ಚುಗಲ್ ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಆರು ಅಂಕ ಪಡೆದು ನೇರವಾಗಿ ಮುಂದಿನ ಹಂತಕ್ಕೇರಿದೆ. ಇದೇ ಗುಂಪಿನಲ್ಲಿ ಮೂರು ಅಂಕ ಹೊಂದಿರುವ ಘಾನಾ ತಂಡದ ವಿರುದ್ಧ ಶುಕ್ರವಾರ ನಡೆಯುವ ಮುಂದಿನ ಪಂದ್ಯದಲ್ಲಿ ಉರುಗ್ವೆ ಸೆಣಸಾಟ ನಡೆಸಲಿದೆ. ಇಲ್ಲಿ ಗೆದ್ದರಷ್ಟೆ ಉರುಗ್ವೆ ತಂಡಕ್ಕೆ ಮುಂದಿನ ಹಂತಕ್ಕೇರುವ ಅವಕಾಶವೊಂದಿದೆ. ಸದ್ಯ 16ರ ಘಟ್ಟ ತಲುಪಿ ನಿರಾಳವಾಗಿರುವ ರೊನಾಲ್ಡೊ ಪಡೆ ಶುಕ್ರವಾರ ದಕ್ಷಿಣ ಕೊರಿಯಾ ವಿರುದ್ಧ ಆಡಲಿದೆ.
ಇದನ್ನೂ ಓದಿ | FIFA World Cup | ಮೆಕ್ಸಿಕೊ ತಂಡದ ಜರ್ಸಿ ತುಳಿದು ಮೆಸ್ಸಿ ಬಳಗದ ಸಂಭ್ರಮಾಚರಣೆ; ಭಾರಿ ವಿರೋಧ