ದೋಹಾ: ಕೊನೆಯ ವಿಶ್ವ ಕಪ್ ಆಡುತ್ತಿರುವ ಲಿಯೋನಲ್ ಮೆಸ್ಸಿ ಮತ್ತು ಅರ್ಜೆಂಟೀನಾ ತಂಡದ ವಿಶ್ವಕಪ್ ಟ್ರೋಫಿಯ ಕನಸಿಗೆ ಇನ್ನೆರಡು ಹರ್ಡಲ್ಸ್ ದಾಟಬೇಕಿದೆ. ಇದಕ್ಕೆ ಮಂಗಳವಾರ ತಡರಾತ್ರಿ ನಡೆಯುವ ಕತಾರ್ ಫಿಫಾ ವಿಶ್ವ ಕಪ್(Fifa World Cup) ನ ಮೊದಲ ಸೆಮಿಫೈನಲ್ ಕಾದಾಟದಲ್ಲಿ ಬಲಿಷ್ಠ ಕ್ರೊವೇಶಿಯಾ ಸವಾಲನ್ನು ಮೆಟ್ಟಿನಿಲ್ಲಬೇಕಿದೆ.
ಆರಂಭದ ಲೀಗ್ ಹಂತದಲ್ಲಿ ಸೌದಿ ಅರೇಬಿಯ ವಿರುದ್ಧ ಸೋತಾಗ ಅರ್ಜೆಂಟೀನಾ ಈ ಬಾರಿ ಕೂಟದಿಂದ ಹೊರಬೀಳುವ ಮೊದಲ ತಂಡ ಎಂದು ಎಲ್ಲರು ನಂಬಿದ್ದರು. ಜತೆಗೆ ಮಸ್ಸಿಗೆ ಸೋಲಿನ ವಿದಾಯ ಎಂದೇ ಪರಿಗಣಿಸಲಾಗಿತ್ತು. ಆದರೆ ಇವೆಲ್ಲದರಿಂದ ಮೇಲೆದ್ದು ಬಂದ ಆರ್ಜೆಂಟೀನಾ ಇದೀಗ ಸೆಮಿಫೈನಲ್ ಹಂತಕ್ಕೆ ಬಂದು ನಿಂತಿದೆ. ಅದರಂತೆ ಇನ್ನೆರಡು ಪಂದ್ಯ ಗೆದ್ದರೆ ಕತಾರ್ನಲ್ಲಿ ಕಪ್ ಮುಡಿಗೇರಿಸಿಕೊಳ್ಳಲಿದೆ. ಆದರೆ ಇದು ಅಷ್ಟು ಸುಲಭದ ಮಾತಲ್ಲ ಕಾರಣ ಎದುರಾಳಿ ಬಲಿಷ್ಠ ಕ್ರೊವೇಶಿಯಾ ಎನ್ನುವುದನ್ನು ಮರೆಯುವಂತಿಲ್ಲ.
ಕಳೆದ ಬಾರಿಯ ಫೈನಲಿಸ್ಟ್ ಆದರೂ ಈ ಕೂಟದಲ್ಲಿ ಅಂಡರ್ಡಾಗ್ಸ್ ಎಂದೇ ಬಿಂಬಿಸಲಾಗಿದ್ದ ಕ್ರೊವೇಶಿಯಾ ಬಲಿಷ್ಠ ತಂಡಗಳಿಗೆ ಸೋಲಿನ ಕಿಕ್ ಔಟ್ ನೀಡಿದೆ. ಇದೀಗ ಈ ಪಂದ್ಯದಲ್ಲಿಯೂ ಅರ್ಜೆಂಟೀನಾವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸುವ ಯೋಜನೆಯಲ್ಲಿದೆ.
“ಬ್ರೆಜಿಲ್‌ಗೆ ಸರಿಸಾಟಿಯಾಗಿ ನಿಂತ ಕ್ರೊವೇಶಿಯಾ ಬಲಿಷ್ಠ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಮಿಡ್‌ಫೀಲ್ಡ್‌ನಲ್ಲಿ ಆಡುವ ಎಲ್ಲ ಆಟಗಾರರೂ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ ಎದುರಾಳಿ ವಿರುದ್ಧ ನಮ್ಮ ರಣತಂತ್ರ ಬೇರೆಯೇ ಇದೆ ಎಂದು ಮೆಸ್ಸಿ ಪಂದ್ಯಕ್ಕೂ ಮುನ್ನ ಹೇಳಿದ್ದಾರೆ.
ಮೆಸ್ಸಿ ಪಾಲಿಗೆ ಇದು ಪ್ರತಿಷ್ಠೆಯ ಕದನ
ಅರ್ಜೆಂಟೀನಾ 1986ರ ಬಳಿಕ ವಿಶ್ವಕಪ್ ಎತ್ತಿಲ್ಲ. ಇದೀಗ ಮೆಸ್ಸಿ ಈ ಬಾರಿ ಅಂದಿನ ವಿಶ್ವ ಕಪ್ ಕಿಂಗ್ ಮರಡೋನಾ ರೀತಿಯಲ್ಲೇ ತಂಡವನ್ನು ಮುನ್ನಡೆಸಿ ಉಪಾಂತ್ಯಕ್ಕೆ ತಂದು ನಿಲ್ಲಿಸಿದ್ದಾರೆ. ಆದ್ದರಿಂದ ಸಹಜವಾಗಿಯೇ ಆರ್ಜೆಂಟೀನಾ ಮೇಲೆ ನಿರೀಕ್ಷೆ ಹೆಚ್ಚಿದೆ. ಜತೆಗೆ ಕೊನೆಯ ವಿಶ್ವ ಕಪ್ ಆಡುತ್ತಿರುವ ಮೆಸ್ಸಿ ಪಾಲಿಗಂತೂ ಇದು ಪ್ರತಿಷ್ಠೆಯ ಕದನ ಎಂದರೂ ತಪ್ಪಾಗಲಾರದು. ದೇಶಕ್ಕೆ ಮತ್ತು ತನಗಾಗಿ ಸ್ವತಃ ತಾನೇ ಟ್ರೋಫಿ ಗೆದ್ದು ತರಬೇಕಾದ ಒತ್ತಡ ಅವರ ಮೇಲಿರುವುದು ಸಹಜ.
ಬಲಿಷ್ಠ ಕ್ರೊವೇಶಿಯಾ
ಕ್ರೊವೇಶಿಯಾ ಪರ ರಕ್ಷಣಾ ವಿಭಾಗದಲ್ಲಿ ಮಾರ್ಸೆಲೊ ಬೊಝೋವಿಕ್, ಮ್ಯಾಟಿಯೊ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇವರ ಚಕ್ರವ್ಯೂಹವನ್ನು ಅಷ್ಟು ಸುಲಭವಾಗಿ ಭೇದಿಸಲು ಸಾಧ್ಯವಿಲ್ಲ. ಆದ್ದರಿಂದ ಕ್ರೊವೇಶಿಯಾ ಬಲಿಷ್ಠ ಎನ್ನಲಡ್ಡಿಯಿಲ್ಲ. ಉಳಿದಂತೆ 37 ವರ್ಷದ ಲುಕಾ ಮಾಡ್ರಿಚ್ ಅವರ ಅನುಭವ ಕ್ರೊವೇಶಿಯಾಕ್ಕೆ ನೆರವಾಗಲಿದೆ.
ಉಭಯ ತಂಡಗಳು ಒಟ್ಟಾರೆಯಾಗಿ ಐದು ಸಲ ಪರಸ್ಪರ ಎದುರಾಗಿದೆಯಾದರೂ, ವಿಶ್ವಕಪ್‌ನಲ್ಲಿ ಎರಡು ಸಲ ಮಾತ್ರ ಸೆಣಸಾಟ ನಡೆಸಿವೆ. 1998ರ ಟೂರ್ನಿಯ ಲೀಗ್ ಹಂತದಲ್ಲಿ ಅರ್ಜೆಂಟೀನಾ 1-0 ರಲ್ಲಿ ಗೆದ್ದಿದೆ. ಆದರೆ ಕಳೆದ 2018ರ ಟೂರ್ನಿಯ ಲೀಗ್ ಪಂದ್ಯದಲ್ಲಿ ಕ್ರೊವೇಶಿಯಾ 3-0 ರಲ್ಲಿ ಜಯಿಸಿತ್ತು. ಇದೀಗ ಮತ್ತೆ ಅರ್ಜೆಂಟೀನಾವನ್ನು ಮಣಿಸಿತೇ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ | Fifa World Cup| ಫಿಫಾ ವಿಶ್ವಕಪ್ ಸೋಲಿನ ಬಳಿಕ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ನೇಮರ್