ದೋಹಾ: ನಾಯಕ ಲಿಯೊನೆಲ್ ಮೆಸ್ಸಿ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಬಾರಿಸಿದ ದಾಖಲೆಯ ಗೋಲಿನ ನೆರವಿನಿಂದ ಅರ್ಜೆಂಟೀನಾ ತಂಡ ಕ್ವಾರ್ಟರ್ ಫೈನಲ್ ತಲುಪಿದೆ. ಜತೆಗೆ ಮೆಸ್ಸಿ ತಮ್ಮ ವೃತ್ತಿ ಜೀವನದ 1000ನೇ ಪಂದ್ಯವನ್ನು ಸ್ಮರಣೀಯಗೊಳಿಸಿದರು.
ಭಾನುವಾರ ಅಹ್ಮದ್ ಬಿನ್ ಅಲಿ ಸ್ಟೇಡಿಯಂನಲ್ಲಿ ನಡೆದ 16ರ ಘಟ್ಟದ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 2-1 ಗೋಲುಗಳಿಂದ ಮಣಿಸಿದ ಅರ್ಜೆಂಟೀನಾ ಎರಡನೇ ತಂಡವಾಗಿ ಕ್ವಾರ್ಟರ್ ಫೈನಲ್ ತಲುಪಿತು. ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ನೆದರ್ಲೆಡ್ಸ್ ತಂಡ ಅಮೆರಿಕವನ್ನು 3-1 ಗೋಲುಗಳಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಮುಂದಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೆಸ್ಸಿ ಪಡೆ ನೆದರ್ಲೆಂಡ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ಈ ಪಂದ್ಯ ಡಿ.10 ರಂದು ನಡೆಯಲಿದೆ.
ವೃತ್ತಿಜೀವನದ 789ನೇ ಗೋಲನ್ನು ಗಳಿಸಿದ ಅರ್ಜೆಂಟೀನಾ ನಾಯಕ ಮೆಸ್ಸಿ, ತಂಡಕ್ಕೆ ಆರಂಭದಲ್ಲೇ ಮುನ್ನಡೆ ದೊರಕಿಸಿಕೊಟ್ಟರು. 35ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ವಿರಾಮದ ವೇಳೆಗೆ ಅರ್ಜೆಂಟೀನಾ ತಂಡ 1-0 ಗೋಲುಗಳಿಂದ ಮುಂದಿತ್ತು. ಬಳಿಕ ಜ್ಯೂಲಿಯನ್ ಅಲ್ವೆರೆಝ್ ದ್ವಿತೀಯಾರ್ಧದಲ್ಲಿ ಗೋಲು ಗಳಿಸಿ ಮುನ್ನಡೆ ಹಿಗ್ಗಿಸಿದರು.
ಪಂದ್ಯದುದ್ದಕ್ಕೂ ಉಭಯ ತಂಡಗಳು ಬಿಗಿಹಿಡಿದ ಸಾಧಿಸಿದ್ದ ಕಾರಣ ಗೋಲಿನ ಸಂಖ್ಯೆ ಹೆಚ್ಚಾಗಲಿಲ್ಲ. ಎರಡು ಬಾರಿಯ ಚಾಂಪಿಯನ್ ತಂಡಕ್ಕೆ 77ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಆಸ್ಟ್ರೇಲಿಯಾ ಒಂದು ಹಂತದಲ್ಲಿ ಎಚ್ಚರಿಕೆ ನೀಡಿತ್ತಾದರೂ ಅಂತಿಮವಾಗಿ ಪಂದ್ಯದಲ್ಲಿ ಹಿಡಿದ ಸಾಧಿಸುವಲ್ಲಿ ವಿಫಲವಾಯಿತು.
ಮರಡೋನಾ ದಾಖಲೆ ಮುರಿದ ಮೆಸ್ಸಿ
ಫುಟ್ಬಾಲ್ ಮಾಂತ್ರಿಕ ಅರ್ಜೆಂಟೀನಾ ತಂಡದ ಡಿಗೋ ಮರೊಡೋನಾ ಅವರ ದಾಖಲೆಯೊಂದನ್ನು ಮೆಸ್ಸಿ ಈ ಪಂದ್ಯದಲ್ಲಿ ಮುರಿದರು. 5 ನೇ ಮತ್ತು ಅಂತಿಮ ಫಿಫಾ ವಿಶ್ವ ಕಪ್ಆಡುತ್ತಿರುವ ಮೆಸ್ಸಿ ಇದೇ ಮೊದಲ ಬಾರಿಗೆ ನಾಕೌಟ್ ಹಂತದಲ್ಲಿ ಗೋಲು ಬಾರಿಸಿದ್ದಲ್ಲದೇ ವಿಶ್ವಕಪ್ನಲ್ಲಿ 9ನೇ ಗೋಲು ಬಾರಿಸುವ ಮೂಲಕ ಮರಡೋನಾ ಅವರ 8 ಗೋಲ್ಗಳ ದಾಖಲೆಯನ್ನು ಹಿಂದಿಕ್ಕಿದರು. ಜತೆಗೆ ಒಂದು ಸಾವಿರ ಪಂದ್ಯವನ್ನಾಡಿದ ಮೆಸ್ಸಿ ತಮ್ಮ ಫುಟ್ಬಾಲ್ ವೃತ್ತಿ ಜೀವನದಲ್ಲಿ ಒಟ್ಟಾರೆ 789 ಗೋಲ್ಗಳನ್ನು ಗಳಿಸಿದ್ದಾರೆ.
ಇದನ್ನೂ ಓದಿ | FIFA World Cup | ಅಮೆರಿಕ ತಂಡವನ್ನು ಮಣಿಸಿದ ನೆದರ್ಲೆಂಡ್ಸ್ ಕ್ವಾರ್ಟರ್ ಫೈನಲ್ಸ್‌ಗೆ ಪ್ರವೇಶ