ಬ್ಯೂನಸ್ ಐರಿಸ್: ಕತಾರ್ ಫಿಫಾ ವಿಶ್ವ ಕಪ್(Fifa World Cup) ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಅರ್ಜೆಂಟೀನಾ ತಂಡದ ಸಂಭ್ರಮಾಚರಣೆ ಇನ್ನೂ ಮುಗಿದಿಲ್ಲ. ಆಟಗಾರರು ತಮ್ಮ ಕುಟುಂಬದವರೊಂದಿಗೆ ಭಾರಿ ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಈ ಮಧ್ಯೆ ಅರ್ಜೆಂಟೀನಾ ತಂಡದ ಆಟಗಾರ ಆ್ಯಂಜಲ್ ಡಿ ಮರಿಯ, ಫೈನಲ್ ಪಂದ್ಯಕ್ಕೂ ಮುನ್ನ ತಮ್ಮ ಪತ್ನಿಯೊಂದಿಗೆ ನಡೆಸಿದ ವಾಟ್ಸಪ್ ಚಾಟ್ ಇದೀಗ ಭಾರಿ ವೈರಲ್ ಆಗಿದೆ.
ಫ್ರಾನ್ಸ್ ವಿರುದ್ಧದ ಫೈನಲ್ ಪಂದ್ಯಕ್ಕೂ ಮುನ್ನ ಡಿ’ ಮರಿಯ ತಮ್ಮ ಪತ್ನಿ ಜೋರ್ಜೆಲಿನಾ ಕಾರ್ಡೋಸೊ ಅವರಿಗೆ ವಾಟ್ಸಪ್ ಸಂದೇಶ ಕಳುಹಿಸಿದ್ದರು. ಇದರಲ್ಲಿ ಎಲ್ ಫಿಡೆಯೋ ಅವರು ಫ್ರಾನ್ಸ್ ತಂಡವನ್ನು ಸೋಲಿಸಿ ಅರ್ಜೆಂಟೀನಾ ತಂಡ ಫಿಫಾ ವಿಶ್ವಕಪ್‌ಗೆ ಮುತ್ತಿಕ್ಕಲಿದೆ ಎಂದು ಭವಿಷ್ಯ ನುಡಿದಿದ್ದರು. ಅಲ್ಲದೇ ಫೈನಲ್ ಪಂದ್ಯದಲ್ಲಿ ತಾನು ಗೋಲು ಗಳಿಸುವುದು ಖಚಿತ. ನಾನು ನಾಳೆ ಉತ್ತಮ ಪ್ರದರ್ಶನ ತೋರಲಿದ್ದೇನೆ ಎಂದು ನನಗೆ ಅನಿಸುತ್ತಿದೆ ಎಂದು ಪತ್ನಿಗೆ ವಾಟ್ಸಪ್ ಸಂದೇಶ ಕಳುಹಿಸಿದ್ದರು. ಈ ಸಂದೇಶದ ವಾಟ್ಸಪ್ ಚಾಟ್‌ನ ಸ್ಕ್ರೀನ್‌ಶಾಟ್‌ನ್ನು ಜೋರ್ಜೆಲಿನಾ ಕಾರ್ಡೋಸೊ ಅವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
“ನಾನು ವಿಶ್ವ ಚಾಂಪಿಯನ್ ಆಗುತ್ತೇನೆ. ಫೈನಲ್ ಪಂದ್ಯದ ಪ್ರಮುಖ ಘಟ್ಟದಲ್ಲಿ ನಾನು ಗೋಲು ಗಳಿಸುತ್ತೇನೆ. ಏಕೆಂದರೆ ಇದನ್ನು ಮೊದಲೇ ಬರೆಯಲಾಗಿದೆ” ಎಂದು ಡಿ ಮಾರಿಯಾ ತಮ್ಮ ಪತ್ನಿಗೆ ವಾಟ್ಸಪ್ ಸಂದೇಶ ಕಳುಹಿಸಿದ್ದಾರೆ. ಇದಕ್ಕೆ ಉತ್ತರವಾಗಿ ಜೋರ್ಜೆಲಿನಾ ಕಾರ್ಡೋಸೊ ಅವರು “ನಾನು ಏನು ಹೇಳಬೇಕೆಂದು ತೋಚುತ್ತಿಲ್ಲ” ಎಂದು ಉತ್ತರ ನೀಡಿದ್ದಾರೆ.
ಇದಕ್ಕೆ ಉತ್ತರಿಸಿರುವ ಡಿ ಮಾರಿಯಾ “ನೀನು ಏನನ್ನೂ ಹೇಳಬೇಕಾಗಿಲ್ಲ. ನಾಳೆ ಮೈದಾನದಲ್ಲಿ ಇಡೀ ಕುಟುಂಬ ಒಟ್ಟಾಗಿ ಪಂದ್ಯವನ್ನು ಆನಂದಿಸಿ. ನಾವು ವಿಶ್ವ ಚಾಂಪಿಯನ್ ಆಗುತ್ತೇವೆ. ಏಕೆಂದರೆ ಇಲ್ಲಿರುವ 26 ಆಟಗಾರರ ಕುಟುಂಬ ವರ್ಗ ಮತ್ತು ಸಮಸ್ತ ಅರ್ಜೆಂಟೀನಾ ಜನತೆ ಇದಕ್ಕೆ ಅರ್ಹರು” ಎಂದು ಮರು ಸಂದೇಶ ಕಳುಹಿಸಿದ್ದಾರೆ.
ಡಿ ಮಾರಿಯಾ ಹೇಳಿದಂತೆಯೇ ಫೈನಲ್ ಪಂದ್ಯದಲ್ಲಿ ಗೋಲು ಗಳಿಸಿದ್ದರು. ಬಳಿಕ ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ ತಂಡ ಫ್ರಾನ್ಸ್ ತಂಡವನ್ನು ಸೋಲಿಸಿ ಫಿಫಾ ವಿಶ್ವಕಪ್‌ಗೆ ಮುತ್ತಿಕ್ಕಿತು. ಇದೀಗ ಅವರ ಭವಿಷ್ಯವಾಣಿ ಎಲ್ಲಡೆ ವೈರಲ್ ಆಗಿದೆ.
ಇದನ್ನೂ ಓದಿ | Fifa World Cup Record | ಅತಿ ಹೆಚ್ಚು ಬಾರಿ ಫಿಫಾ ವಿಶ್ವ ಕಪ್ ಗೆದ್ದ ತಂಡಗಳು