ದೋಹಾ: ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವ ಕಪ್(Fifa World Cup)ನ ಮಂಗಳವಾರದ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 4-1 ಅಂತರದ ಭರ್ಜರಿ ಜಯ ಸಾಧಿಸಿದ ಬ್ರೆಜಿಲ್ ಈ ಗೆಲುವನ್ನು ತಮ್ಮ ತಂಡದ ಮಾಜಿ ಆಟಗಾರ ಪೀಲೆಗೆ ಸಮರ್ಪಿಸಿದೆ.
ಕರುಳಿನ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಪೀಲೆ ಸದ್ಯ ಸಾವೊ ಪಾಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚೇತರಿಕೆಗಾಗಿ ದಕ್ಷಿಣ ಕೊರಿಯಾ ವಿರುದ್ಧದ ಗೆಲುವಿನ ಬಳಿಕ ಬ್ರೆಜಿಲ್ ಆಟಗಾರರು ಮೈದಾನದಲ್ಲಿ ಪೀಲೆಯ ಚಿತ್ರವಿರುವ ಬ್ಯಾನರ್ ಹಿಡಿದು ಅವರಿಗೆ ಗೌರವ ಸಲ್ಲಿಸಿದರು. ಬ್ರೆಜಿಲ್ ತಂಡ ಈ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದೆ.
“ಪೀಲೆ ಅವರು ಈಗ ಅನುಭವಿಸುತ್ತಿರುವ ನೋವಿನ ಕುರಿತು ಮಾತನಾಡುವುದು ಕಷ್ಟ, ಆದರೆ ಅವರು ಶೀಘ್ರ ಗುಣಮುಖರಾಗುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಬ್ರೆಜಿಲ್ ತಂಡದ ನಾಯಕ ನೇಮರ್ ಹೇಳಿದರು.
“ಪೀಲೆ ಅವರಿಗೆ ನಮ್ಮಿಂದ ಸಾಕಷ್ಟು ಶಕ್ತಿ ಬೇಕು. ಇದಕ್ಕಾಗಿ ನಾವು ಮತ್ತಷ್ಟು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಈ ಗೆಲುವನ್ನು ಅವರಿಗೆ ಸಮರ್ಪಿಸುತ್ತೇವೆ. ಅವರು ಈ ಪರಿಸ್ಥಿತಿಯಿಂದ ಹೊರಬರುತ್ತಾರೆ. ಅವರ ಮಹಾದಾಸೆಯಂತೆ ಈ ಬಾರಿ ಫಿಫಾ ವಿಶ್ವಕಪ್ ಗೆದ್ದು ಅವರ ಬಯಕೆಯನ್ನು ತೀರಿಸುತ್ತೇವೆ” ಎಂದು ತಂಡದ ಮತ್ತೊಬ್ಬ ಆಟಗಾರ ವಿನಿಶಿಯಸ್ ಹೇಳಿದ್ದಾರೆ.
ಇದನ್ನೂ ಓದಿ | Fifa World Cup | ಬ್ರೆಜಿಲ್ ಬೊಂಬಾಟ್ ಆಟಕ್ಕೆ ತಲೆಬಾಗಿದ ದಕ್ಷಿಣ ಕೊರಿಯಾ; ಕ್ವಾರ್ಟರ್ ಫೈನಲ್ ತಲುಪಿದ ನೇಮರ್ ಪಡೆ