ದೋಹಾ : ಕ್ರೀಡಾ ಕ್ಷೇತ್ರದ ಮಹಾ ಸಮರ ಎಂದೇ ಬಿಂಬಿತವಾಗಿರುವ ಫಿಫಾ ಫುಟ್ಬಾಲ್ (Fifa World Cup) ವಿಶ್ವ ಕಪ್ ಭಾನುವಾರ (ನವೆಂಬರ್ 20) ರಂದು ಆತಿಥೇಯ ಕತಾರ್ ಹಾಗೂ ಈಕ್ವೆಡಾರ್‌ಗಳ ನಡುವಿನ ಪಂದ್ಯದೊಂದಿಗೆ ಚಾಲನೆ ಪಡೆಯಲಿದೆ. ಈ ಸಮರ ೨೯ ದಿನಗಳ ಕಾಲ ಅಂದರೆ ಡಿಸೆಂಬರ್ ೧೮ರವರೆಗೆ ನಡೆಯಲಿದ್ದು, ೩೨ ತಂಡಗಳು ಹಾಗೂ ೫ ಕಾನ್ಫೆಡರೇಷನ್‌ಗಳು ಟ್ರೋಫಿ ಗೆಲ್ಲುವುದಕ್ಕಾಗಿ ಪರಸ್ಪರ ಸೆಣಸಾಡಲಿವೆ.
ಕತಾರ್ ದೇಶವು ಫಿಫಾ ವಿಶ್ವ ಕಪ್ ಆಯೋಜನೆ ಮಾಡುತ್ತಿರುವ ಮೊದಲ ಮಧ್ಯ ಪ್ರಾಚ್ಯ ದೇಶ ಎಂಬ ಹೆಗ್ಗಳಿಕೆಯನ್ನು ದಾಖಲಿಸಿಕೊಂಡಿದೆ. ಜತೆಗೆ ಈ ವಿಶ್ವಕಲ್ ಜೂನ್-ಜುಲೈ ತಿಂಗಳನ್ನು ಹೊರತುಪಡಿಸಿ ಬೇರೆ ಸಮಯದಲ್ಲಿ ನಡೆಯುವ ಟೂರ್ನಮೆಂಟ್ ಎಂಬ ಖ್ಯಾತಿಯನ್ನೂ ಪಡೆದುಕೊಂಡಿದೆ.
ಎಂಟು ಸ್ಟೇಡಿಯಮ್‌ಗಳಲ್ಲಿ ವಿಶ್ವ ಕಪ್ ಆಯೋಜನೆ ಮಾಡಲಾಗಿದ್ದು, ಒಟ್ಟಾರೆಯಾಗಿ ೬೪ ಪಂದ್ಯಗಳು ಫೈನಲ್ ಹಾಗೂ ಸೆಮಿಫೈನಲ್ ಸೇರಿದಂತೆ ಒಟ್ಟು ೬೪ ಪಂದ್ಯಗಳು ನಡೆಯಲಿವೆ. ಅಂತೆಯೇ ನವೆಂಬರ್ ೨೦ರಂದು ಗುಂಪು ಎ ನಲ್ಲಿರುವ ಕತಾರ್ ಹಾಗೂ ಇಕ್ವೆಡಾರ್ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ.
ಉದ್ಘಾಟನೆ ಎಷ್ಟು ಗಂಟೆಗೆ?
ಭಾರತೀಯ ಕಾಲಮಾಣ ಪ್ರಕಾರ ಸಂಜೆ ೭.೩೦ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಆ ಬಳಿಕ ಮೊದಲು ಪಂದ್ಯ ನಡೆಯಲಿದೆ. ಅಲ್ ಬಯಾತ್ ಸ್ಟೇಡಿಯಮ್‌ನಲ್ಲಿ ಉದ್ಘಾಟನಾ ಕಾರ್ಯಕ್ರಮ ಆಯೋಜನೆಗೊಂಡಿದ್ದು, ೬೦ ಸಾವಿರ ಪ್ರೇಕ್ಷಕರು ಏಕಕಾಲಕ್ಕೆ ಪಂದ್ಯವನ್ನು ನೋಡಲು ಸಾಧ್ಯವಿದೆ.
ಉದ್ಘಾಟನಾ ಸಮಾರಂಭವನ್ನು ಎಲ್ಲಿ ವೀಕ್ಷಿಸಬೇಕು?
ಸಮಾರಂಭವು ಭಾರತದಲ್ಲಿ Sports18 ಮತ್ತು Sports18 HD TV ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗಲಿದೆ. ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಉಚಿತವಾಗಿ ಲಭ್ಯವಿರುತ್ತದೆ.
ಉದ್ಘಾಟನಾ ಸಮಾರಂಭದಲ್ಲಿ ಯಾರು ಪ್ರದರ್ಶನ ನೀಡಲಿದ್ದಾರೆ?
ಫಿಫಾ ಇನ್ನೂ ಪ್ರದರ್ಶಕರ ಸಂಪೂರ್ಣ ಪಟ್ಟಿ ಘೋಷಿಸದಿದ್ದರೂ, ದಕ್ಷಿಣ ಕೊರಿಯಾದ ಬಾಯ್ ಬ್ಯಾಂಡ್ BTS ನ ಜಂಗ್‌ಕುಕ್ ಸಮಾರಂಭದಲ್ಲಿ ‘ಡ್ರೀಮರ್ಸ್’ ಅನ್ನು ಪ್ರದರ್ಶಿಸುತ್ತಾರೆ. ಟೆಲಿಗ್ರಾಫ್ ಪ್ರಕಾರ, ಇತರ ಸಂಭಾವ್ಯ ಪ್ರದರ್ಶನಕಾರರಲ್ಲಿ ಬ್ಲ್ಯಾಕ್ ಐಡ್ ಪೀಸ್, ರಾಬಿ ವಿಲಿಯಮ್ಸ್ ಮತ್ತು ನೋರಾ ಫತೇಹಿ ಸೇರಿದ್ದಾರೆ. ಏತನ್ಮಧ್ಯೆ, ಬ್ರಿಟಿಷ್ ಗಾಯಕ ದುವಾ ಲಿಪಾ ಮತ್ತು ಕೊಲಂಬಿಯಾದ ಗಾಯಕಿ ಶಕೀರಾ ಕತಾರ್‌ನಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಲು ನಿರಾಕರಿಸಿದ್ದರು ಎನ್ನಲಾಗಿದೆ.
ಮೊದಲ ಪಂದ್ಯ ಯಾವಾಗ ಆರಂಭ?
ಆತಿಥೇಯ ಕತಾರ್ ಮತ್ತು ಈಕ್ವೆಡಾರ್ ನಡುವಿನ ಉದ್ಘಾಟನಾ ಪಂದ್ಯವು ಭಾರತೀಯ ಕಾಲಮಾನ ಪ್ರಕಾರ ರಾತ್ರಿ 9.30ಕ್ಕೆ ಆರಂಭವಾಗಲಿದೆ.
ಇದನ್ನೂ ಓದಿ | fifa world cup history | ಫಿಫಾ ವಿಶ್ವಕಪ್ ಇತಿಹಾಸದ ಮೊದಲ 5 ಚಾಂಪಿಯನ್ ತಂಡಗಳ ಪರಿಚಯ