ದೋಹಾ: ನಾಲ್ಕು ಬಾರಿಯ ಫಿಫಾ ವಿಶ್ವ ಕಪ್(Fifa World Cup) ಚಾಂಪಿಯನ್ ಜರ್ಮನಿ ತಂಡ ಈ ಬಾರಿಯ ಕತಾರ್ ವಿಶ್ವ ಕಪ್ ಟೂರ್ನಿಯ ಲೀಗ್ ಹಂತದಿಂದ ಹೊರಬಿದ್ದ ಸಂಕಟಕ್ಕೆ ಸಿಲುಕಿತು. ಕೋಸ್ಟರಿಕಾ ವಿರುದ್ಧ 4-2 ಗೋಲ್ಗಳ ಅಂತರದಿಂದ ಗೆದ್ದರೂ 16ನೇ ಘಟ್ಟ ತಲುಪುವಲ್ಲಿ ವಿಫಲವಾಗಿದೆ. ಜತೆಗೆ ಕೋಸ್ಟರಿಕಾ ಕೂಡ ಕೂಟದಿಂದ ಹೊರಬಿದ್ದಿದೆ.
ಶುಕ್ರವಾರ ನಡೆದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಕೋಸ್ಟರಿಕಾ ವಿರುದ್ಧ 4-2 ಗೊಲುಗಳ ಜಯ ಸಾಧಿಸಿದರೂ, ನಾಕೌಟ್ ತಲುಪಲು ಜರ್ಮನಿ ತಂಡಕ್ಕೆ ಅದೃಷ್ಟ ಕೈಕೊಟ್ಟಿತು. 2018ರಲ್ಲಿ ರಷ್ಯಾದಲ್ಲಿ ನಡೆದ ಕಳೆದ ವಿಶ್ವ ಕಪ್ ಕೂಟದಲ್ಲೂ ಜರ್ಮನಿ ನಾಕೌಟ್ ಹಂತ ತಲುಪಲು ವಿಫಲವಾಗಿತ್ತು.
ಸೆರ್ಜ್ ಗ್ನಾಬ್ರಿ 10ನೇ ನಿಮಿಷದಲ್ಲಿ ಹೆಡರ್ ಮೂಲಕ ಜರ್ಮನಿಗೆ ಮೊದಲ ಗೋಲ್ ತಂದಿಟ್ಟರು. ಮೊದಲಾರ್ಧದಲ್ಲಿ ಒಂದೇ ಗೋಲ್ನಲ್ಲಿ ಪಂದ್ಯ ಅಂತ್ಯಕಂಡಿತು. ಆದರೆ ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ಗೋಲ್ಗಳ ಸುರಿಮಳೆ ಗೈದವು. ಒಟ್ಟು 5 ಗೋಲ್ಗಳಿಗೆ ದ್ವಿತೀಯಾರ್ಧದ ಆಟ ಸಾಕ್ಷಿಯಾಯಿತು.
ಜರ್ಮನಿ ಪರ ಗ್ನಾಬ್ರಿ (10ನೇ ನಿಮಿಷ), ಕೈ ಹಾವರ್ಟ್ಜ್(73 ಮತ್ತು 85ನೇ ನಿಮಿಷ), ಫುಲ್ಕ್ರುಗ್(89ನೇ ನಿಮಿಷ) ಗೋಲ್ ದಾಖಲಿಸಿದರು. ಕೋಸ್ಟರಿಕಾ ಪರ ತೇಜೆಡಾ(58ನೇ ನಿಮಿಷ) ಮತ್ತು ಜುವಾನ್(70ನೇ ನಿಮಿಷ) ಗೋಲ್ ಗಳಿಸಿ ತಂಡದ ಸೋಲಿನ ಅಂತರವನ್ನು ತಗ್ಗಿಸಿದರು.
ಜಪಾನ್ಗೆ ಗೆಲುವು
ಶುಕ್ರವಾರದ ಮತ್ತೊಂದು ‘ಇ’ ಗುಂಪಿನ ಪಂದ್ಯದಲ್ಲಿ ಸ್ಪೇನ್ ವಿರುದ್ಧ 2-1 ಅಚ್ಚರಿಯ ಜಯ ಸಾಧಿಸಿದ ಜಪಾನ್ ಅಂತಿಮ 16ರ ಘಟ್ಟಕ್ಕೆ ಗುಂಪಿನ ಅಗ್ರಸ್ಥಾನಿಯಾಗಿ ಪ್ರವೇಶ ಪಡೆಯಿತು. ಜಪಾನ್ ವಿರುದ್ಧ ಪಂದ್ಯ ಸೋತರೂ ಉತ್ತಮ ಗೋಲು ಅಂತರದಲ್ಲಿ ಜರ್ಮನಿಯನ್ನು ಹಿಂದಿಕ್ಕಿ ಸ್ಪೇನ್ ಮುಂದಿನ ಹಂತಕ್ಕೆ ಮುನ್ನಡೆಯಿತು. ಸ್ಪೇನ್ ಹಾಗೂ ಜರ್ಮನಿ ತಲಾ ನಾಲ್ಕು ಅಂಕಗಳನ್ನು ಗಳಿಸಿದ್ದವು. ಕೋಸ್ಟರಿಕ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಇದನ್ನೂ ಓದಿ | FIFA World Cup | ಕೆನಡಾ ತಂಡವನ್ನು ಮಣಿಸಿದ ಮೊರಾಕ್ಕೊ; ಪೋಲೆಂಡ್ ವಿರುದ್ಧ ಅರ್ಜೆಂಟೀನಾಗೆ ಜಯ