ದೋಹಾ: ನಟಿ ನೋರಾ ಫತೇಹಿ ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ಫುಟ್ಬಾಲ್ ವಿಶ್ವ ಕಪ್ನ ಫ್ಯಾನ್ ಫೆಸ್ಟಿವಲ್‌ನಲ್ಲಿ ‘ಲೈಟ್ ದಿ ಸ್ಕೈ’ ಸಾಂಗ್ಗೆ ಹೆಜ್ಜೆ ಹಾಕುವ ವೇಳೆ ಭಾರತದ ಧ್ವಜವನ್ನು ಬೀಸಿ ಜೈ ಹಿಂದ್ ಘೋಷಣೆ ಕೂಗಿ ಭಾರತೀಯರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ ಇದೇ ವೇಳೆ ಫತೇಹಿ ಮಾಡಿದ ಒಂದು ಎಡವಟ್ಟಿಗೆ ಇದೀಗ ಆಕ್ರೋಶ ವ್ಯಕ್ತವಾಗಿದೆ.
ಕತಾರ್ ಅಲ್ ಬಿದ್ದಾ ಪಾರ್ಕ್‌ನಲ್ಲಿ ನಡೆದ ಫಿಫಾ ವಿಶ್ವ ಕಪ್ ಅಭಿಮಾನಿಗಳ ಉತ್ಸವದಲ್ಲಿ ನೋರಾ ಫತೇಹಿ ನೃತ್ಯ ಪ್ರದರ್ಶನ ನೀಡಿದ್ದರು. ಈ ಸಮಯದಲ್ಲಿ ನೆರೆದಿದ್ದ ಪ್ರೇಕ್ಷಕರು ಹುಚ್ಚೆದು ಕುಣಿಯುವ ಮೂಲಕ ಅವರನ್ನು ಹುರಿದುಂಬಿಸುತ್ತಿದ್ದರು. ಇದೇ ವೇಳೆ ಭಾರತದ ಅಭಿಮಾನಿಯೊಬ್ಬ ಫತೇಹಿ ಅವರಿಗೆ ಭಾರತದ ಧ್ವಜವನ್ನು ನೀಡಿದ್ದಾನೆ ಇದನ್ನು ಸ್ವೀಕರಿಸುವ ಬರದಲ್ಲಿ ಅವರು ಧ್ವಜವನ್ನು ನೆಲಕ್ಕೆ ಬೀಳಿಸಿದ್ದಾರೆ. ಇದೀಗ ಈ ವಿಚಾರವನ್ನು ಮುಂದಿಟ್ಟು ಕೆಲವರು ಫತೇಹಿ ವಿರುದ್ಧ ಕಿಡಿಕಾರಿದ್ದಾರೆ.
ಯಾವುದೇ ದೇಶದ ಧ್ವಜವಾದರೂ ಅದರದೇ ಆದ ಗೌರವವಿದೆ, ಘನತೆಯಿದೆ. ಅದನ್ನು ಎಲ್ಲೆಂದರಲ್ಲಿ ಬಳಕೆ ಮಾಡುವುದು ಸರಿಯಾದ ಕ್ರಮವಲ್ಲ. ಅದರಲ್ಲೂ ನೆಲಕ್ಕೆ ಬೀಳಿಸಿದ್ದು ದೊಡ್ಡ ತಪ್ಪು ಇಂಥವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು ಫತೇಹಿ ಭಾರತೀಯ ಧ್ವಜವನ್ನು ಹೆಮ್ಮೆಯಿಂದ ಬೀಸುವುದರ ಜತೆಗೆ ಜೈ ಹಿಂದ್ ಘೋಷಣೆ ಕೂಗಿದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ | Fifa World Cup | ಕೋಸ್ಟರಿಕಾ ವಿರುದ್ಧ ಗೆದ್ದರೂ ಫಿಫಾ ವಿಶ್ವಕಪ್ ಟೂರ್ನಿಯಿಂದ ಜಾರಿ ಬಿದ್ದ ಜರ್ಮನಿ!