ನವದೆಹಲಿ: ಕತಾರ್‌ನಲ್ಲಿ ನಡೆದ ಫಿಫಾ ಫುಟ್ಬಾಲ್ ವಿಶ್ವ ಕಪ್(Fifa World Cup)ಗೆ ಭಾನುವಾರ(ಡಿಸೆಂಬರ್ 18) ಅದ್ಧೂರಿಯಾಗಿ ತೆರೆ ಬಿದ್ದಿದೆ. ರೋಮಾಂಚಕಕಾರಿ ಫೈನಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ನಾಯಕತ್ವದಲ್ಲಿ ಅರ್ಜೆಂಟೀನಾ ತಂಡ ಫ್ರಾನ್ಸ್ ತಂಡವನ್ನು ಮಣಿಸಿ 36 ವರ್ಷಗಳ ಬಳಿಕ ವಿಶ್ವ ಚಾಂಪಿಯನ್ ಆಗಿ ಹೊರಮೊಮ್ಮಿತ್ತು. ಈ ಫೈನಲ್ ಪಂದ್ಯದ ವೀಕ್ಷಣೆ ಭಾರತದಲ್ಲಿ ನೂತನ ದಾಖಲೆಯೊಂದನ್ನು ಬರೆದಿದೆ.
ಭಾರತದಲ್ಲಿ ಕೇರಳ, ಗೋವಾ ಮತ್ತು ಪಶ್ಚಿಮ ಬಂಗಾಳ ಸೇರಿ ಕೆಲವು ರಾಜ್ಯಗಳಲ್ಲಿ ಮಾತ್ರ ಫುಟ್ಬಾಲ್ ಜನಪ್ರಿಯ ಕ್ರೀಡೆಯಾಗಿದೆ. ಹಾಗಿದ್ದೂ, ಈ ಬಾರಿಯ ಫ್ರಾನ್ಸ್ ಮತ್ತು ಅರ್ಜೆಂಟೀನಾ ವಿರುದ್ಧದ ಫೈನಲ್ ಪಂದ್ಯವು ಭಾರತದಲ್ಲಿ ಹೊಸ ದಾಖಲೆಗೆ ಸಾಕ್ಷಿಯಾಗಿದೆ. ಜಿಯೋ ಸಿನಿಮಾದಲ್ಲಿ ಪ್ರಸಾರವಾದ ಈ ಫೈನಲ್ ಪಂದ್ಯವನ್ನು ಸುಮಾರು 3.2 ಕೋಟಿ ಭಾರತೀಯರು ವೀಕ್ಷಿಸಿದ್ದಾರೆ.
ಇದು ಭಾರತದ ಫುಟ್ಬಾಲ್ ಇತಿಹಾಸದಲ್ಲಿ ಹೆಚ್ಚು ವೀಕ್ಷಣೆ ಪಡೆದ ಪಂದ್ಯ ಎನಿಸಿದೆ. ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ 3-2 ಗೋಲುಗಳಿಂದ ಗೆಲುವು ಸಾಧಿಸಿ 1986 ನಂತರ ಮೊದಲ ಬಾರಿಗೆ ವಿಶ್ವಕಪ್ ಗೆದ್ದ ಸಾಧನೆ ಮಾಡಿತು.
34 ಲಕ್ಷ ಜನರಿಂದ ಟೂರ್ನಿ ವೀಕ್ಷಣೆ
ಕತಾರ್‌ನಲ್ಲಿ ನಡೆದ ಈ ಬಾರಿಯ ಫುಟ್ಬಾಲ್ ವಿಶ್ವಕಪ್ ಟೂರ್ನಿಯನ್ನು ಕ್ರೀಡಾಂಗಣಗಳಲ್ಲಿ 34 ಲಕ್ಷಕ್ಕಿಂತ ಹೆಚ್ಚು ಜನ ವೀಕ್ಷಿಸಿದ್ದಾರೆ. ಅತಿ ಹೆಚ್ಚು ಜನ ವೀಕ್ಷಿಸಿದ ಆವೃತ್ತಿಗಳಲ್ಲಿ ಇದೂ ಒಂದೆನಿಸಿಕೊಂಡಿದೆ ಎಂದು ಫಿಫಾ ತಿಳಿಸಿದೆ. “ಲುಸೈಲ್‌ನಲ್ಲಿ ನಡೆದ ಫೈನಲ್ ಪಂದ್ಯಕ್ಕೆ 88,966 ಜನ ಸಾಕ್ಷಿಯಾಗಿದ್ದರು. ಒಟ್ಟು 34 ಲಕ್ಷ ಜನ ಟೂರ್ನಿಯನ್ನು ವೀಕ್ಷಿಸಿದ್ದು, ಕ್ರೀಡಾಂಗಣಗಳ ಆಸನ ಸಾಮರ್ಥ್ಯದ ಶೇಕಡ 96.3 ಆಗಿದೆ” ಎಂದು ಫಿಫಾ ತಿಳಿಸಿದೆ. 1994ರಲ್ಲಿ ಅಮೆರಿಕದಲ್ಲಿ ನಡೆದ ಟೂರ್ನಿಗೆ 35 ಲಕ್ಷಕ್ಕಿಂತ ಅಧಿಕ ಮಂದಿ ಸಾಕ್ಷಿಯಾಗಿದ್ದು ಇದುವರೆಗಿನ ದಾಖಲೆಯಾಗಿದೆ.
ಇದನ್ನೂ ಓದಿ | FIFA World Cup | ತವರಿಗೆ ತಲುಪಿದ ಅರ್ಜೆಂಟೀನಾ, ಅಭಿಮಾನಿಗಳಿಂದ ಭರ್ಜರಿ ಸ್ವಾಗತ