ದೋಹಾ: ಮಾಜಿ ಚಾಂಪಿಯನ್ ಇಂಗ್ಲೆಂಡ್ ತಂಡ ಫಿಫಾ ವಿಶ್ವ ಕಪ್ ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದೆ. ಖಲೀಫಾ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಸೋಮವಾರದ ಈ ಮುಖಾಮುಖಿಯಲ್ಲಿ ಇರಾನ್ ತಂಡದ ಮೇಲೆ ಸವಾರಿ ಮಾಡಿ 6-2 ಗೋಲುಗಳ ಅಧಿಕಾರಯುತ ಗೆಲುವು ದಾಖಲಿಸಿದೆ.
ಇಂಗ್ಲೆಂಡ್ಗೆ ಆರಂಭಿಕ ಗೋಲ್ ಜೂಡ್ ಬೆಲ್ಲಿಂಗ್‌ಹ್ಯಾಮ್ ಅವರಿಂದ ದಾಖಲಾಯಿತು. 31ನೇ ನಿಮಿಷದಲ್ಲಿ ಚೆಂಡನ್ನು ಗೋಲ್ ಪೆಟ್ಟಿಗೆ ಸೇರಿಸಿ ಅವರು ತಂಡಕ್ಕೆ ಪ್ರಥಮ ಯಶಸ್ಸು ತಂದುಕೊಟ್ಟರು. ಬಳಿಕ ರಹೀಂ ಸ್ಟರ್ಲಿಂಗ್ (45 ಪ್ಲಸ್ ಒಂದನೇ ನಿಮಿಷ), ಬದಲಿ ಆಟಗಾರರಾದ ಮಾರ್ಕಸ್ ರಶ್‌ಫೋರ್ಡ್ (71ನೇ ನಿಮಿಷ) ಮತ್ತು ಜಾಕ್ ಗ್ರೀಲಿಶ್ (89ನೇ ನಿಮಿಷ) ಒಂದೊಂದು ಗೋಲು ಹೊಡೆದರು. ಬುಕಾಯೊ ಸಕಾ (43ನೇ ಮತ್ತು 62ನೇ ನಿಮಿಷ) ಅವಳಿ ಗೋಲು ಬಾರಿಸಿ ಮಿಂಚಿದರು. ಇಂಗ್ಲೆಂಡ್ ತಂಡದ ಈ ಆಕ್ರಮಣಕಾರಿ ಆಟದ ಮುಂದೆ ಇರಾನ್ ತಂಡ ಸಂಪೂರ್ಣ ಮಂಕಾಯಿತು. ಇರಾನ್ ಪರ ಮೆಹ್ದಿ ತರೇಮಿ (65ನೇ ಮತ್ತು 90+13ನೇ ನಿ. ಪೆನಾಲ್ಟಿ) ಎರಡು ಗೋಲ್ ಬಾರಿಸಿ ತಂಡದ ಸೋಲಿನ ಅಂತರವನ್ನು ತಗ್ಗಿಸಿದರು.
ಇಂಗ್ಲೆಂಡ್ ಈ ಗೆಲುವಿನೊಂದಿಗೆ ವಿಶ್ವ ಕಪ್ ಪಂದ್ಯವೊಂದರಲ್ಲಿ ಐದಕ್ಕೂ ಹೆಚ್ಚು ಗೋಲು ಬಾರಿಸಿ ಗೆದ್ದ ದ್ವಿತೀಯ ನಿದರ್ಶನ ಇದಾಗಿದೆ. 2018ರ ವಿಶ್ವಕಪ್‌ನಲ್ಲಿ ಪನಾಮಾವನ್ನು 6-1 ಗೋಲುಗಳಿಂದ ಮಣಿಸಿ ಮೇಲುಗೈ ಸಾಧಿಸಿತ್ತು. ಇಂಗ್ಲೆಂಡ್ ಮುಂದಿನ ಪಂದ್ಯದಲ್ಲಿ ಅಪಾಯಕಾರಿ ಅಮೆರಿಕಾ ಎದುರು ಪೈಪೋಟಿ ನಡೆಸಲಿದೆ.
ಇದನ್ನೂ ಓದಿ | FIFA World Cup | ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಇರಾನ್ ತಂಡ, ವಿಶ್ವ ಕಪ್ ವೇಳೆ ಮತ್ತೊಂದು ವಿವಾದ